ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ, ಮತದಾನಕ್ಕೆ ಆಡಳಿತ ಸಿದ್ಧತೆ

ನೀತಿ ಸಂಹಿತೆ ಪಾಲನೆಗೆ ಅಧಿಕಾರಿ ತಂಡ ರಚನೆ: ಮಂಜುನಾಥ
Last Updated 6 ಏಪ್ರಿಲ್ 2018, 9:26 IST
ಅಕ್ಷರ ಗಾತ್ರ

ಚಿತ್ತಾಪುರ: ‘ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಮತದಾರರು ನಿರ್ಭಯವಾಗಿ ಮತಗಟ್ಟೆಗೆ ಬಂದು ಮುಕ್ತವಾಗಿ ಮತ ಚಲಾಯಿಸಲು, ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನಕ್ಕೆ ಆಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಹಾಗೂ ಮತಕ್ಷೇತ್ರದ ಚುನಾವಣಾಧಿಕಾರಿ (ಆರ್.ಒ) ಎ.ಮಂಜುನಾಥ ತಿಳಿಸಿದರು.

ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ವಿವಿಧ ತಂಡಗಳ ಅಧಿಕಾರಿ ಸಭೆ ನಡೆಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಹಿನ್ನೆಲೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ದಿನದಿಂದ ಅಧಿಕಾರಿಗಳ ತಂಡಗಳು ಕೆಲಸ ಮಾಡುತ್ತಿವೆ. ಮತದಾನ ಮತ್ತು ವಿವಿ ಪ್ಯಾಟ್ ಕುರಿತು ಮತದಾರರಲ್ಲಿ ಜಾಗೃತಿ ಅರಿವು ಮೂಡಿಸುವ ಕೆಲಸ ಪ್ರಚಾರ ತಂಡಗಳಿಂದ ನಡೆಯುತ್ತಿದೆ’ ಎಂದು ಹೇಳಿದರು.

‘ನಾಲವಾರ ಬಳಿ ಕಲಬುರ್ಗಿ-ಯಾದಗಿರಿ ಗಡಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಚುನಾವಣೆ ಅಕ್ರಮ ಚಟುವಟಿಕೆ ನಡೆಯದಂತೆ ವಿವಿಧ ತಂಡಗಳು ಹದ್ದಿನ ಕಣ್ಣಿಟ್ಟಿವೆ. ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣೆ ನಿಯಂತ್ರಣ ಕೊಠಡಿ ನಿರ್ಮಿಸಲಾಗಿದೆ. ದಿನದ 24 ಗಂಟೆ ಇಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ’ ಎಂದರು.

‘ಚುನಾವಣೆ ಕೆಲಸಕ್ಕಾಗಿ ‘ಸಮಾಧಾನ’ ಎಂಬ ವಿಭಾಗ ಸ್ಥಾಪಿಸಿದ್ದು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಲ್ಲಾ ಮೂಲಗಳಿಂದ ಇಲ್ಲಿ ದೂರು ನೀಡಬಹುದು. ‘ಸುವಿಧಾ’ ಎಂಬ ವಿಭಾಗದಲ್ಲಿ ರಾಜಕೀಯ ಪಕ್ಷಗಳಿಗೆ ವಿವಿಧ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ‘ಸುಗಮ’ ವಿಭಾಗದಲ್ಲಿ ವಾಹನ ಪರವಾನಿಗೆ, ಖರ್ಚುವೆಚ್ಚದ ಕುರಿತು ನಿರ್ವಹಣೆ ಮಾಡಲಾಗುತ್ತಿದೆ’ ಎಂದು ವಿವರ ನೀಡಿದರು.

‘ಏ. 8ರಂದು ಮತದಾರರ ದಿನಾಚರಣೆ ಮಾಡಲಾಗುತ್ತಿದೆ. ಅಂದಿನಿಂದ ಏ. 14ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ. ಈ ಕುರಿತು ಕೆಲಸ ಮಾಡಲು ಪಂಚಾಯಿತಿ ಪಿಡಿಒ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕೆಲಸ ಮಾಡಲಿದ್ದಾರೆ. ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿವೆ. ಗ್ರಾಮೀಣ ಭಾಗದಲ್ಲಿ 1,300ಕ್ಕೂ ಅಧಿಕ ಮತದಾರರು ಹಾಗೂ ನಗರ ಪ್ರದೇಶದಲ್ಲಿ 1,400ಕ್ಕೂ ಅಧಿಕ ಮತದಾರರು ಇರುವೆಡೆ ಹೆಚ್ಚುವರಿಯಾಗಿ 5 ಮತಗಟ್ಟೆ ರಚಿಸಲಾಗಿದೆ. ಹೀಗಾಗಿ, ಒಟ್ಟು 258 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

1,14,095 ಪುರುಷ ಹಾಗೂ 1,13,188 ಮಹಿಳಾ ಮತದಾರರಿದ್ದಾರೆ. ಇತರೆ ಮತದಾರರು ಸೇರಿದಂತೆ ಒಟ್ಟು 2,28,618 ಮತದಾರರು ಇದ್ದಾರೆ’ ಎಂದು ಅವರು ತಿಳಿಸಿದರು.ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಶಿವಾನಂದ ಪಿ.ಸಾಗರ, ಚುನಾವಣೆ ಶಾಖೆ ಶಿರಸ್ತೇದಾರ್ ಸಿದ್ರಾಮಪ್ಪ ನಾಚವಾರ ಇದ್ದರು.

**

ಚುನಾವಣೆ ಅಕ್ರಮ ತಡೆಯಲು ಹಗಲು ರಾತ್ರಿ ಕರ್ತವ್ಯ ನಿರ್ವಹಣೆ ಮಾಡಲು ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿ ನೇತೃತ್ವದಲ್ಲಿ 6 ತಂಡ ರಚಿಸಲಾಗಿದೆ - ಎ.ಮಂಜುನಾಥ, ಚುನಾವಣಾಧಿಕಾರಿ, 40- ಚಿತ್ತಾಪುರ (ಪ.ಜಾ) ಮತಕ್ಷೇತ್ರ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT