ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ವಿವಿಧ ಶಾಸಕರ ಬೆಂಬಲ

Last Updated 2 ಫೆಬ್ರುವರಿ 2018, 9:57 IST
ಅಕ್ಷರ ಗಾತ್ರ

ಅರಸೀಕೆರೆ: ತೆಂಗು ಬೆಳೆಗಾರರಿಗೆ ಪರಿಹಾರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನವಾದ ಗುರುವಾರವೂ ಮುಂದುವರಿಯಿತು.

ಧರಣಿ ಸ್ಥಳಕ್ಕೆ ಕಡೂರು ಶಾಸಕ ವೈ.ಎಸ್‌.ವಿ ದತ್ತಾ, ಸೊರಬ ಶಾಸಕ ಮಧು ಬಂಗಾರಪ್ಪ, ಚನ್ನರಾಯಪಟ್ಟಣದ ಶಾಸಕ ಸಿ.ಎಸ್‌.ಬಾಲಕೃಷ್ಣ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸೋಮವಾರ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನದಲ್ಲಿಯೂ ಈ ಬಗ್ಗೆ ಹೋರಾಟ ಮಾಡುವುದಾಗಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ‘ರಾಜ್ಯ ಸರ್ಕಾರ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾರಣ ಎರಡು ವರ್ಷಗಳಿಂದ ಬೆಳೆ ವಿಮೆ ಹಾಗೂ ಸಂತ್ರಸ್ಥ ರೈತರಿಗೆ ಯಾವುದೇ ಪರಿಹಾರ ಹಣ ಮಂಜೂರಾಗಿಲ್ಲ. ಈ ಬಗ್ಗೆ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.

ಶಾಸಕ ಶಿವಲಿಂಗೇಗೌಡ, ‘ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ತಾಲ್ಲೂಕಿನ ತೆಂಗು ಬೆಳೆಗಾರರ ಪರವಾಗಿ ನಾನು ಹಗಲು ರಾತ್ರಿ ಹೋರಾಟ ಮಾಡುತ್ತಿದ್ದೇನೆ. ಇದೊಂದು ರಾಜಕೀಯ ರಹಿತ ಹೋರಾಟ. ಇದಕ್ಕೆ ವಿರೋಧಿಗಳು ರಾಜಕೀಯ ಬಣ್ಣ ಕಟ್ಟುವ ಮೂಲಕ ಕ್ಷೇತ್ರದಲ್ಲಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲ ಎಂದು ಮೂದಲಿಸಿದರು.

ಎ.ಪಿ.ಎಂ.ಸಿ ಅಧ್ಯಕ್ಷ ಕೆ.ಎಸ್‌.ಚಂದ್ರಶೇಖರ್‌, ನಗರಸಭಾ ಸದಸ್ಯ ರಾದ ಮೋಹನ್‌ಕುಮಾರ್‌, ಬಬ್ರು ವಾಹನ, ತಾ.ಪಂ ಉಪಾಧ್ಯಕ್ಷ ಎಸ್‌.ಕೆ. ಬಸವಲಿಂಗಯ್ಯ ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ ಚಂದ್ರನಾಯಕ್‌, ಜಾವಗಲ್‌ ರಾಜಶೇಖರ್‌, ರೈತ ಮುಖಂಡ ಹರತನ ಹಳ್ಳಿ ಜಯಣ್ಣ, ಗೀಜೀಹಳ್ಳಿ ಧರ್ಮಶೇಖರ್‌, ಯಳವಾರೆ ನಾಗರಾಜ್‌, ಧರ್ಮಣ್ಣ ಪಾಲ್ಗೊಂಡಿದ್ದರು.

ನಾಳೆ ಅರಸೀಕೆರೆ ಬಂದ್‌ಗೆ ಕರೆ

ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರವಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸ್ಪಂದಿಸದೇ ಇರುವುದರಿಂದ ಫೆ. 3ರಂದು ಅರಸೀಕೆರೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು. ಅಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಸದಸ್ಯರಾದ ಮೋಹನ್‌ಕುಮಾರ್‌, ಜಿ.ಪಂ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ತಾ.ಪಂ ಉಪಾಧ್ಯಕ್ಷ ಬಸವ ಲಿಂಗಯ್ಯ, ಮುಖಂಡರಾದ ಧರ್ಮಶೇಖರ್‌, ನಾಗರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT