ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೂತನ ಪ್ರತಿಭಟನಾ ಜಾಥಾ

‘ಗುರು ದಕ್ಷಿಣೆಗಾಗಿ ನಡಿಗೆ’: ದಾನಿಗಳಿಂದ ಹಣ ಸಂಗ್ರಹ
Last Updated 17 ಡಿಸೆಂಬರ್ 2018, 12:53 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆ ಶಾಲೆಗಳ ಶಿಕ್ಷಕರ ಕಡೆಗಣನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ‘ಗುರು ದಕ್ಷಿಣೆಗಾಗಿ ನಡಿಗೆ’ ಎಂಬ ವಿನೂತನ ಪ್ರತಿಭಟನಾ ಜಾಥಾ ಸೋಮವಾರ ನಡೆಯಿತು.

ನಗರದ ಗದ್ದಿಗೆಯಿಂದ ಆರಂಭಗೊಂಡ ಜಾಥಾ, ವಿವಿಧ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರು ಹಾಗೂ ವರ್ತಕರ ಮುಂದೆ ಬಿಂದಿಗೆ ಹಿಡಿದು ಗುರುದಕ್ಷಿಣೆ ರೂಪದಲ್ಲಿ ಧನ ಸಹಾಯ ಸಂಗ್ರಹಿಸಲಾಯಿತು.

ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ಮಾತನಾಡಿ, ದಾನಿಗಳು ನೀಡಿದ ಹಣವನ್ನು ನಗರಸಭೆ ಶಾಲೆಯಲ್ಲಿ ವೇತನವಿಲ್ಲದ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ಶಾಲೆ ಮುಖ್ಯ ಶಿಕ್ಷಕರ ಮೂಲಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ ಬಡವರ್ಗದ ವಿದ್ಯಾರ್ಥಿಗಳು ಇಂದಿಗೂ ಶೈಕ್ಷಣಿಕ ಬದುಕಿನಿಂದ ವಂಚಿತರಾಗಿ ಬಡತನದಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವ ಸ್ಥಿತಿಯಿದೆ ಎಂದು ದಿವಾಕರ್ ನೋವು ತೋಡಿಕೊಂಡರು.

ನಗರಸಭೆ ವ್ಯಾಪ್ತಿಗೆ ಒಳಪಡುವ ಎ.ವಿ. ಶಾಲೆ, ಹಿಂದೂಸ್ತಾನಿ ಶಾಲೆ ಹಾಗೂ ಮೈಸೂರು ರಸ್ತೆಯಲ್ಲಿರುವ ಶಾಲೆ ನಗರಸಭಾ ಶಾಲೆಗಳಾಗಿವೆ. ಈ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಹಾವಳಿ ಶಿಕ್ಷಣ ವ್ಯವಸ್ಥೆಯ ನಡುವೆ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಈ ಕಾರಣದಿಂದ ಬಡವರ್ಗದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮೂರು ನಗರಸಭಾ ಶಾಲೆಗಳನ್ನೇ ಅವಲಂಬಿಸಬೇಕಾಗಿದೆ. ಆದರೆ, ಅಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ಮಾತ್ರ ಸಂಬಳವನ್ನೇ ನೀಡುತ್ತಿಲ್ಲ ಎಂದು ದೂರಿದರು.

ಗುತ್ತಿಗೆ ಆಧಾರದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ವೇತನ ದೊರೆಯುತ್ತಿಲ್ಲ. ಗೌರವಧನದ ರೂಪದಲ್ಲಿ ವೇತನವನ್ನು ನೀಡಬೇಕಾಗಿದ್ದ ನಗರಸಭೆ ಕಳೆದ ಅನೇಕ ವರ್ಷಗಳಿಂದ ಈ ಶಿಕ್ಷಕರಿಗಾಗಿ ಯಾವುದೇ ಅನುದಾನವನ್ನು ಮೀಸಲಿಡದೆ ವಂಚಿಸುತ್ತಲೇ ಬಂದಿದೆ ಎಂದು ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತ ಜಿ.ಚಿದ್ವಿಲಾಸ್, ಚೇಂಬರ್ ಆಫ್ ಕಾಮರ್ಸ್‌ನ ಪ್ರಮುಖ ಅಂಬೆಕಲ್ಲು ನವೀನ್ ಕುಶಾಲಪ್ಪ, ದಸಂಸ ಸಂಘಟನಾ ಸಂಚಾಲಕರಾದ ಶಿವಕುಮಾರ್, ಎಚ್.ಕೆ. ಗಣೇಶ್, ತಾಲ್ಲೂಕು ಸಂಚಾಲಕ ಎ.ಪಿ. ದೀಪಕ್, ಕುಮಾರ್, ಸಿದ್ದೇಶ್ವರ, ಪ್ರೇಮ್, ಐಎನ್‌ಟಿಯುಸಿಯ ದಿನೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT