ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲೂ ಅಮೂಲ್ಯ ವಿರುದ್ಧ ಆಕ್ರೋಶ

ಹಿಂದೂ ಜಾಗರಣಾ ವೇದಿಕೆ, ಬಜರಂಗ ದಳದ ಕಾರ್ಯಕರ್ತರಿಂದ ಪ್ರತಿಭಟನೆ
Last Updated 21 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಮಡಿಕೇರಿ: ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ವಿರುದ್ಧ ಕೊಡಗಿನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಕೆಲವೆಡೆ ಶುಕ್ರವಾರ ಪ್ರತಿಭಟನೆಗಳು ನಡೆದಿವೆ. ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲೂ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಮೂಲ್ಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಸಭೆ ಆಯೋಜಿಸುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಜಿತ್ ಕುಕ್ಕೇರ ಮಾತನಾಡಿ, ‘ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ವಿರೋಧಿಸಿ ಸಂಘಟನೆಯೊಂದು ಸಭೆ ಆಯೋಜಿಸಿತ್ತು. ಆ ಸಭೆಯಲ್ಲಿ ಅಮೂಲ್ಯ ಲಿಯೋನ್ ಎಂಬ ವಿದ್ಯಾರ್ಥಿನಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು, ಅಕ್ಷಮ್ಯ ಅಪರಾಧ. ಅಮೂಲ್ಯ ಹಾಗೂ ಸಭೆಯನ್ನು ಆಯೋಜಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಘಟನೆ ಸಂಬಂಧ ಯಾರಾದರೂ ಬೆಂಬಲ ನೀಡಿದ್ಧ ಅವರ ವಿರುದ್ಧವೂ ಕಠಿಣ ಶಿಕ್ಷೆ ವಿಧಿಸಬೇಕು. ದೇಶ ವಿರೋಧಿ ಹೇಳಿಕೆಗಳನ್ನು ನೀಡಿದರೆ ಅಂಥ ವ್ಯಕ್ತಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಮನವರಿಕೆ ಮಾಡಿದ್ಧರೂ ದೇಶದಾದ್ಯಂತ ಒಂದು ಗುಂಪು ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಆಪಾದಿಸಿದರು.

ವಿದೇಶಗಳಲ್ಲಿ ಒಂದು ದೇಶದ ಪೌರತ್ವ ಹೊಂದಿರುವ ವ್ಯಕ್ತಿ, ಮತ್ತೊಂದು ದೇಶಕ್ಕೆ ಜಯಕಾರ ಹಾಕಿದರೆ ಆತನ ತಲೆಯನ್ನು ಕಡಿದು ಪ್ರತೀಕಾರ ತೀರಿಸುತ್ತಿದ್ದರು. ಆದರೆ, ನಮ್ಮ ದೇಶ ಎಲ್ಲರನ್ನೂ ಶಾಂತಿಯಿಂದ ನಡೆಸಿಕೊಳ್ಳುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಎರಡೂ ಸದನದಲ್ಲಿ ಅಂಗೀಕರಿಸಿದ ನಂತರವೂ ಬೇರೆ ದೇಶದ ಮತಾಂಧ ಓಲೈಕೆಗೆ ಬೆಂಬಲ ಕೊಟ್ಟು ಭಾರತದೇಶವನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ನಗರ ಸಂಚಾಲಕ ಮಹೇಶ್, ಬಜರಂಗದಳ ಜಿಲ್ಲಾ ಸಂಚಾಲಕ ಚೇತನ್ ಹಾಗೂ ಮುಖಂಡರಾದ ರಾಬಿನ್ ದೇವಯ್ಯ, ಮಹೇಶ್ ಜೈನಿ, ರಾಯ್ ತಮ್ಮಯ್ಯ, ಅನಿತಾ ಪೂವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT