ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು ಒತ್ತಾಯ, ಪ್ರತಿಭಟನೆ

ಕರ್ನಾಟಕ ಕಾಫಿ ರೈತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ
Published : 14 ಸೆಪ್ಟೆಂಬರ್ 2024, 6:23 IST
Last Updated : 14 ಸೆಪ್ಟೆಂಬರ್ 2024, 6:23 IST
ಫಾಲೋ ಮಾಡಿ
Comments

ಮಡಿಕೇರಿ: ‘ಸಿ’ ಮತ್ತು ‘ಡಿ’ ಭೂಮಿಯಿಂದ ಬಡವರನ್ನು ಒಕ್ಕಲೆಬ್ಬಿಸಬಾರದು, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು, ಕರಿಮೆಣಸು ಆಮದು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕದ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘದ ಮುಖಂಡರಾದ ಐ.ಆರ್.ದುರ್ಗಾಪ್ರಸಾದ್ ಮಾತನಾಡಿ, ‘ಸರ್ಕಾರ ಬಡವರ ಕಷ್ಟಗಳಿಗೆ ಪರಿಹಾರ ಕೊಡಬೇಕೇ ವಿನಹಾ ಮತ್ತಷ್ಟು ಕಷ್ಟ ಕೊಡುವಂತಹ ಕಾರ್ಯ ನಡೆಸಬಾರದು’ ಎಂದು ಒತ್ತಾಯಿಸಿದರು.

ಈ ಮೊದಲೆ ‘ಸಿ’ ಮತ್ತು ‘ಡಿ’ ಭೂಮಿಯನ್ನು ಏಕಪಕ್ಷೀಯವಾಗಿ ಅರಣ್ಯ ಎಂದು ಘೋಷಿಸಿದ್ದು ತಪ್ಪು. ಈಗ ಅದನ್ನು ಮೀಸಲು ಅರಣ್ಯವನ್ನಾಗಿ ಮಾಡಲು ಹೊರಟಿರುವುದು ಇನ್ನೂ ಬಹುದೊಡ್ಡ ತಪ್ಪು. ಬಡವರು ಮನೆ ಕಟ್ಟಿಕೊಂಡು ಕೃಷಿ ಮಾಡಿಕೊಂಡು ಹೋಗುತ್ತಿರುವ ಈ ಭೂಮಿಯಿಂದ ಅವರ‌ನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.

ಇನ್ನು ಕಾಫಿಗೆ ಉತ್ತಮ ಬೆಲೆ ದೊರೆಯುತ್ತಿದೆ ಎಂಬ ಭಾವನೆ ಎಲ್ಲರಲ್ಲಿದೆ. ಆದರೆ, ನಿಜವಾಗಿ ಹೇಳುವುದಾದರೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆ ಸ್ಥಳೀಯ ಬೆಳೆಗಾರರಿಗೆ ಸಿಗದೇ ಅದು ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಲೋಪವನ್ನು ಸರಿಪಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಮಳೆ ಹಾನಿಯಿಂದ ಸಂಕಷ್ಟ ಅನುಭವಿಸುತ್ತಿರುವ ಕಾಫಿ, ಕರಿಮೆಣಸು, ಭತ್ತ, ಅಡಿಕೆ, ಏಲಕ್ಕಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು, ಆನೆಗಳಿಂದ ರೈತರನ್ನು ಹಾಗೂ ತೋಟವನ್ನು ರಕ್ಷಿಸಬೇಕು, ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಇತರ ಆದಾಯ ಇಲ್ಲದ ರೈತರಿಗೆ 5 ಎಕರೆ ಭೂಮಿಯನ್ನು ಅವರಿಗೆ ಕೊಟ್ಟು ಆರ್‌ಟಿಸಿ ನೀಡಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಕರಿಮೆಣಸು ಸಾಕಷ್ಟು ಉತ್ಪಾದನೆಯಾಗುತ್ತಿರುವಾಗ ಅದನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಕರಿಮೆಣಸಿನ ಆಮದನ್ನು ನಿಲ್ಲಿಸಬೇಕು. ಇಲ್ಲಿನ ಬೆಳೆಗಾರರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯ ಬಳಿಕ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಸಂಘಟನೆಯ ಸಂಚಾಲಕ ಕೆ.ಎಚ್.ಹನೀಫ ಚಾಮಿಯಾಲು ಮೈತಾಡಿ, ಹೋರಾಟಗಾರರಾದ ವಸಂತಕುಮಾರ್ ಹೊಸಮನೆ, ಉದಯಕುಮಾರ್, ಹಮೀದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT