ಭಾನುವಾರ, ಜನವರಿ 26, 2020
24 °C
ವಿವಿಧ ಸಂಘಟನೆಗಳ ಮುಖಂಡರ ಭೇಟಿ, ಬೆಂಬಲ

ಬಾಳುಗೋಡು : ಸ್ವಂತ ಸೂರಿಗಾಗಿ ಮುಂದುವರಿದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಸಮೀಪದ ಬಾಳುಗೋಡುನಲ್ಲಿರುವ ಪೈಸಾರಿಯಲ್ಲಿ ಗುಡಿಸಲು ಹಾಕಿಕೊಂಡು ಕಳೆದ 7 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಸೋಮವಾರವೂ ಮುಂದುವರಿದಿದ್ದು, ಹಕ್ಕುಪತ್ರ ನೀಡದ ಹೊರತು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.

ಸ್ವಂತ ಸೂರಿಗಾಗಿ ಒತ್ತಾಯಿಸಿ ಸುಮಾರು 55 ಕುಟುಂಬಗಳು ಬಾಳುಗೋಡು ಗ್ರಾಮದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಸೋಮವಾರ ರಾಜ್ಯದ ವಿವಿಧ ಸಂಘಟನೆಗಳ ನಾಯಕರು ಭೇಟಿ ನೀಡಿ ನಿರಾಶ್ರಿತರಿಗೆ ಹಕ್ಕುಪತ್ರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಬಹುಜನ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮೊಣ್ಣಪ್ಪ ಮಾತನಾಡಿ, ಪ್ರತಿಭಟನಾಕಾರರ ಬೇಡಿಕೆ ನ್ಯಾಯ ಸಮ್ಮತವಾದದ್ದು. ವಸತಿ ರಹಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ವಸತಿ ರಹಿತರನ್ನು ಗುರುತಿಸಿ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿದರು.

ವಸತಿ ಹಕ್ಕು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹೇಮಂತ್ ಮಾತನಾಡಿ, ಪ್ರತಿಭಟನೆಕಾರರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ರಾಜ್ಯ ಮಡಿಲು ಯೋಜನೆಯ ಆದಿವಾಸಿ ಅಲೆಮಾರಿ ಬುಡಕಟ್ಟು ಮಕ್ಕಳ ಶಿಕ್ಷಣ ಅಭಿವೃದ್ಧಿ ಸಂಘಟನೆಯ ಅರಸು, ಮಡಿಲು ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಮುತ್ತುರಾಜು, ಆದಿವಾಸಿ ಎರವರ ಸಂಘಟನೆಯ ತಾಯಮ್ಮ ಭೇಟಿ ನೀಡಿ ವಸತಿ ರಹಿತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತಿ ಸಮಿತಿ ಅಧ್ಯಕ್ಷ ಕೆ.ಪಳನಿ ಪ್ರಕಾಶ್ ಅವರು ರಾಜ್ಯ ಹಾಗೂ ಜಿಲ್ಲಾ ನಾಯಕರಿಗೆ ಪ್ರತಿಭಟನೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಸ್ಥಳದಲ್ಲಿ ಎಚ್.ಕೆ.ರಾಜು, ಧರ್ಮ, ಸೌಮ್ಯ, ಶಿಲ್ಪಾ, ಶರತ್, ಅಕ್ಷಯ್, ಶೋಭಾ ಇತರರು ಇದ್ದರು.

ಪ್ರತಿಕ್ರಿಯಿಸಿ (+)