ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳುಗೋಡು : ಮುಂದುವರಿದ ಪ್ರತಿಭಟನೆ

Last Updated 6 ಫೆಬ್ರುವರಿ 2020, 13:51 IST
ಅಕ್ಷರ ಗಾತ್ರ

ವಿರಾಜಪೇಟೆ: ಸ್ವಂತ ಸೂರು ಕಲ್ಪಿಸುವಂತೆ ಒತ್ತಾಯಿಸಿ ಸಮೀಪದ ಬಾಳುಗೋಡು ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರೆಯಿತು.

ಕಳೆದ ಒಂದು ತಿಂಗಳಿನಿಂದ ಗ್ರಾಮದ ಸರ್ವೆ ನಂ 337/1 ರ ಸರ್ಕಾರಿ ಭೂಮಿಯಲ್ಲಿ ನಿವೇಶನ ರಹಿತರು ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ಬುಧವಾರ ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ವಸತಿರಹಿತರು ಪ್ರತಿಭಟನೆ ಮುಂದುವರೆಸಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಎಸ್ಐ ವೀಣಾ ನಾಯಕ್ ನೇತೃತ್ವದಲ್ಲಿ ಹಾಗೂ ಡಿ.ಎ.ಆರ್ ತುಕಡಿಯಿಂದ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಬಂದೋಬಸ್ತ್ ಮುಂದುವರಿದಿದೆ. ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಹಾಕಿದ್ದ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ. ಆದರೆ, ಪ್ರತಿಭಟನಕಾರರು ಧರಣಿ ನಡೆಸಲು ಹಾಕಿರುವ ಟೆಂಟ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಗುರುವಾರ ಬೆಳಿಗ್ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಮಹದೇವ್, ಬಾಳುಗೋಡು ಗ್ರಾಮದ ಸರ್ವೆ ನಂ 337/1ರಲ್ಲಿ ಇದ್ದ 38 ಎಕರೆ ಪೈಸಾರಿ ಭೂಮಿಯಲ್ಲಿ ಎಲ್ಲ ಒತ್ತುವರಿಯಾಗಿ ಕೇವಲ 5 ಎಕರೆ ಜಾಗ ಮಾತ್ರ ಇದೆ. ಇರುವ 5 ಎಕರೆ ಜಾಗವನ್ನು ನಿರಾಶ್ರಿತ ಫಲಾನುಭವಿಗಳು ಕೇಳುವುದು ನ್ಯಾಯ ಸಮ್ಮತವಾಗಿದೆ. ಅಧಿಕಾರಿಗಳ ದೌರ್ಜನ್ಯಕ್ಕೆ ಪ್ರತಿಭಟನಾಕಾರರು ಹೆದರುವುದಿಲ್ಲ. ಇದೇ ಜಾಗವನ್ನು ಸರ್ವೆ ಮಾಡಿ ಹಕ್ಕು ಪತ್ರ ನೀಡಲು ಅಧಿಕಾರಿಗಳು ಮುಂದಾಗಬೇಕು. ಪ್ರತಿಭಟನೆಯಲ್ಲಿ ಕಡು ಬಡವರು, ಹಿಂದುಳಿದವರು, ದಲಿತರು ಸೇರಿದ್ದಾರೆ ಎಂದರು.

ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಗುಡಿಸಲುಗಳನ್ನು ಬಧವಾರ ತೆರವುಗೊಳಿಸುವಾಗ ವಸತಿ ಹಕ್ಕು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಹೇಮಂತ್ ಹಾಗೂ ಜಿಲ್ಲಾ ಸಂಘಟನೆಯ ಮೊಣ್ಣಪ್ಪ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಮಹೇಶ್ ಅವರು ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯಾವುದೇ ಕಾರಣಕ್ಕೂ ನಿವೇಶನ ರಹಿತ ಫಲಾನುಭವಿಗಳಿಗೆ ಜಾಗದ ಹಕ್ಕು ಪತ್ರ ನೀಡದೆ ಈ ಸ್ಥಳದಿಂದ ಕದಲುವುದಿಲ್ಲ. ಗುಡಿಸಲು ತೆರವು ಮಾಡುವ ಸಂದರ್ಭದಲ್ಲಿ ಪೊಲೀಸರು ಸಂಘಟನೆಯ ನಾಯಕ ಹೇಮಂತ್‌ನ ಎದೆಗೆ ಗುದ್ದಿದ್ದು, ಲಾಠಿ ಪ್ರಹಾರ ಮಾಡಿದ್ದರಿಂದ ಗಾಯವಾಗಿದೆ. ಈ ಕುರಿತು ದೂರು ನೀಡಲಾಗುವುದು. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಸಂಘಟನೆ ನಾಯಕರು ಈ ಸಂದರ್ಭ ತಿಳಿಸಿದ್ದಾರೆ.

ಈ ಸಂದರ್ಭ ವಿವಿಧ ಸಂಘಟನೆಗಳ ಕೆ.ಪಳನಿ ಪ್ರಕಾಶ್, ರಾಮ್ದಾಸ್, ಮೊಣ್ಣಪ್ಪ ಮತ್ತಿತರರು ವಸತಿ ರಹಿತರೊಂದಿಗೆ ಪ್ರತಿಭಟನೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT