ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಕಚ್ಚಿರುವ ರೈಲ್ವೆಕಂಬಿ ಯೋಜನೆ - ತನಿಖೆಗೆ ರೈತರ ಆಗ್ರಹ

Last Updated 14 ಸೆಪ್ಟೆಂಬರ್ 2019, 14:22 IST
ಅಕ್ಷರ ಗಾತ್ರ

ಪೊನ್ನಂಪೇಟೆ: ನೊಕ್ಯ ಗ್ರಾಮದಲ್ಲಿ ಕಾಡಾನೆಗಳು ನಾಡಿಗೆ ನುಸುಳದಂತೆ ತಡೆಯಲು ನಿರ್ಮಿಸಿರುವ ರೈಲ್ವೆಕಂಬಿ ಯೋಜನೆ ಅನುಷ್ಠಾನ ತೀರಾ ಕಳಪೆಯಾಗಿರುವುದರಿಂದ ಈ ಬಗ್ಗೆ ಉತ್ತಮ ತನಿಖೆಯಾಗಬೇಕು ಎಂದು ತಿತಿಮತಿ ರೈತ ಮುಖಂಡರು ಆಗ್ರಹಿಸಿದರು.

ಅರಣ್ಯದಿಂದ ಕಾಡಾನೆಗಳು ನುಸುಳದಂತೆ ನೊಕ್ಯ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ರೈಲ್ವೆಕಂಬಿ ಜೋಡಣೆ ಮುರಿದು ಬಿದ್ದಿದೆ. ಇದರಿಂದ ಮತ್ತೆ ಕಾಡಾನೆಗಳು ಗ್ರಾಮಕ್ಕೆ ನುಸುಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ರೈತ ಸಂಘದ ತಿತಿಮತಿ ಭಾಗದ ರೈತ ಮುಖಂಡರುಗಳು ಕಳಪೆ ಕಾಮಗಾರಿ ವೀಕ್ಷಿಸಿ ಒತ್ತಾಯಿಸಿದರು.

ಆನೆಗಳು ಮತ್ತೆ ಗ್ರಾಮಕ್ಕೆ ಲಗ್ಗೆ ಇಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಗ್ರಾಮ ಹಾಗೂ ಅರಣ್ಯದ ಅಂಚಿನಲ್ಲಿ ನಿರ್ಮಿಸಿರುವ ರೈಲ್ವೆಕಂಬಿ ವೀಕ್ಷಸಿ ಪ್ರತಿಕ್ರಿಯಿಸಿರುವ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ, ಕರುಣಾಕರ್, ಎಚ್. ಎಸ್. ಮಹೇಶ್, ಅಶೋಕ್, ಶ್ರೀನಿವಾಸ್ ಯೋಜನೆ ತೀರಾ ಕಳಪೆ ಎಂದು ಆರೋಪಿಸಿದರು.

ಸಾಕಷ್ಟು ಕಡೆಗಳಲ್ಲಿ ಕಂಬಿ ಜೋಡಣೆ ವೆಲ್ಡಿಂಗ್‍ನಲ್ಲಿನ ದೋಷ ಮತ್ತು ಜೋಡಣೆ ಕಳಪೆಯಿಂದ ಕೂಡಿದೆ. ಇದರಿಂದ ಆನೆಗಳ ದೇಹ ತಾಗುವಾಗಲೇ ಕುಸಿದು ಬಿದ್ದಿವೆ. ಆನೆಗಳು ರಾಜಾರೋಷವಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಅಧಿಕಾರಿಗಳು ಜಾಣಮೌನದಲ್ಲಿದ್ದಾರೆ ಎಂದು ಆರೋಪಿಸಿದರು.

ತಿತಿಮತಿ, ನೊಕ್ಯ, ದೇವರಪುರ, ಮಾಯಮುಡಿ ವ್ಯಾಪ್ತಿಗೆ ಮತ್ತಿಗೋಡು ವನ್ಯಜೀವಿ ವಲಯದಿಂದ ಆನೆಗಳು ಬಾರದಂತೆ ಯೋಜನೆ ಅನುಷ್ಠಾನವಾಗಿದೆ. ಆದರೆ, ಅನುಷ್ಠಾನಗೊಂಡ 20 ದಿನಗಳಲ್ಲಿಯೇ ಕಂಬಿ ನೆಲಕಚ್ಚಿದೆ. ಆನೆಗಳು ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಬೆಳೆ ನಾಶ ಮುಂದುವರಿಯಲು ಕಾರಣವಾಗಿದೆ ಎಂದು ಈ ಸಂದರ್ಭ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಹೇಳಿದರು.

ಈ ಬಗ್ಗೆ ಎಸಿಎಫ್ ಪ್ರಸನ್ನಕುಮಾರ್, ಆರ್‍ಎಫ್‍ಒ ಶಿವಾನಂದ್ ಗಮನಕ್ಕೆ ತರಲಾಗಿದೆ. ಉತ್ತಮ ಸ್ಪಂದನೆ ದೊರೆತಿಲ್ಲ. ಕಳಪೆ ಕಾಮಗಾರಿ ಬಗ್ಗೆ ಉತ್ತಮ ತನಿಖೆ ನಡೆಯಬೇಕಿದೆ. ಕಾಡಾನೆಗಳನ್ನು ಶಾಶ್ವತವಾಗಿ ಗ್ರಾಮದಿಂದ ದೂರ ಇಡಲು ಸುಮಾರು ₹ 90 ಲಕ್ಷದಷ್ಟು ಹಣ ಖರ್ಚು ಮಾಡಿದ್ದರೂ ಇದೀಗ ಪೋಲಾಗಿದೆ ಎಂದು ಈ ಸಂಧರ್ಭ ನೋವು ಹಂಚಿಕೊಂಡರು.

ಹಲವು ವರ್ಷಗಳಿಂದ ರೈಲ್ವೆ ಕಂಬಿ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಾ ಬಂದಿದ್ದೆವು. ಆದರೆ, ಈಗ ಯೋಜನೆ ಕಳಪೆಯಾಗಿರುವುದರಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕವಿದೆ ಎಂಬ ಅಭಿಪ್ರಾಯವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT