ಸೋಮವಾರ, ಆಗಸ್ಟ್ 19, 2019
28 °C
ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು, ಉದುರುತ್ತಿದೆ ಕಾಫಿಕಾಯಿ, ಕಾಳುಮೆಣಸು

ಮಹಾಮಳೆ: ಕಾಫಿ, ಕಾಳುಮೆಣಸಿಗೆ ಹಾನಿ

Published:
Updated:
Prajavani

ಸೋಮವಾರಪೇಟೆ: ಕಳೆದ ಒಂದು ವಾರ ನಿರಂತರ ಸುರಿದ ಭಾರಿ ಮಳೆಗೆ ಕಾಫಿ ಮತ್ತು ಕಾಳು ಮೆಣಸಿನ ಫಸಲು ಉದುರುತ್ತಿದೆ.

ಕಳೆದ ವರ್ಷ ಬಿದ್ದ ಧಾರಾಕಾರ ಮಳೆಗೆ ಜಿಲ್ಲೆಯ ಕಾಫಿ ಬೆಳೆಗಾರರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಸೂಕ್ತ ಸಮಯದಲ್ಲಿ ಹೂಮಳೆ ಬಿದ್ದಿದ್ದ ರಿಂದ ಉತ್ತಮ ಕಾಫಿ ಫಸಲಿನ ನಿರೀಕ್ಷೆ ಯಲ್ಲಿ ಬೆಳೆಗಾರರು ಇದ್ದರು. ಆದರೆ, ಧಾರಾಕಾರವಾಗಿ ಮಳೆಯಿಂದ ಕಾಫಿ ಫಸಲು ಹಾಳಾಗಿತ್ತು. ಈ ವರ್ಷವೂ ಕಾಫಿ, ಮೆಣಸಿನ ಫಸಲು ಉದುರುತ್ತಿದ್ದು, ಬೆಳೆಗಾರರು ಮತ್ತೊಮ್ಮೆ ಬೆಳೆ ನಷ್ಟ ಅನುಭವಿಸುವಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ಹೂಮಳೆ ಕೆಲವೆಡೆ ಬಹಳ ತಡವಾಗಿ ಸುರಿದಿತ್ತು. ಈಗಾಗಲೇ ಕಾಳುಮೆಣಸು ಕಾಳು ಕಟ್ಟುತ್ತಿದ್ದು, ಕೆಲವೆಡೆ ತಡವಾಗಿ ಮೆಣಸಿನ ಫಸಲಿನ ದಾರ ಬರುತ್ತಿದೆ. ನಿರಂತರವಾಗಿ ಮಳೆ ಸುರಿದಿದ್ದು, ಶೀತ ವಾತಾವರಣ ಇರುವುದರಿಂದ ಹೊಸದಾಗಿ ಬರುತ್ತಿದ್ದ ಫಸಲಿನ ದಾರ ಉದುರಲು ಆರಂಭಿಸಿದೆ. ಜತೆಗೆ ಕಾಫಿಕಾಯಿ ಉದುರಲು ಪ್ರಾರಂಭವಾಗಿದೆ.

ಕಳೆದ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಕೃತಿ ವಿಕೋಪದಿಂದ 60 ಗ್ರಾಮಗಳಲ್ಲಿ ಶೇ 33ಕ್ಕಿಂತಲೂ ಅಧಿಕ ಕಾಫಿ ಫಸಲು ನಷ್ಟವಾಗಿರುವ ಬಗ್ಗೆ ಕಾಫಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ತಾಲ್ಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಉತ್ತಮ ಕಾಫಿ ಫಸಲು ಪಡೆಯಬೇಕೆಂಬ ಹುಮ್ಮಸ್ಸಿನಲ್ಲಿ ಹಲವು ಬೆಳೆಗಾರರಿದ್ದರು. ಆದರೆ, ಮಳೆ ಎಲ್ಲವನ್ನೂ ಹಾಳು ಮಾಡಿತು ಎಂದು ಕಾಫಿ ಬೆಳೆಗಾರ ಸತೀಶ್ ಅಳಲು ತೋಡಿಕೊಂಡರು.

ಕಳೆದ ವರ್ಷ ಪ್ರಕೃತಿ ವಿಕೋಪದಿಂದ ದೊಡ್ಡ ಪ್ರಮಾಣದಲ್ಲಿ ಫಸಲು ನಾಶವಾಗಿದ್ದು, ಬೆಳೆಹಾನಿ ಪರಿಹಾರ ಸಿಗದೆ ಬಹುತೇಕ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ತೋಟದ ನಿರ್ವಹಣೆ ಮಾಡಲು ಹಣದ ಕೊರತೆ ಎದುರಾಗಿತ್ತು ಎಂದು ಬೆಳೆಗಾರ ನಾಗೇಶ್ ಹೇಳಿದರು.

ಶಾಂತಳ್ಳಿ ಹೋಬಳಿಯ ಹೆಚ್ಚಿನ ಭಾಗಗಳಲ್ಲಿ ಕಾಫಿ ಗಿಡಗಳಿಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಇದರಿಂದ ಫಸಲಿನೊಂದಿಗೆ ಗಿಡ ಗಳಿಗೂ ಹಾನಿಯಾಗುತ್ತಿದೆ ಎಂದು ಕುಡಿಗಾಣ ಗ್ರಾಮದ ಎಂ.ಪಿ.ಉತ್ತಯ್ಯ ತಿಳಿಸಿದರು.

ಬೋಡ್ರೊ ದ್ರಾವಣ ಸಿಂಪಡಿಸಿ: ಮೆಣಸಿನ ದಾರ ಉದುರುವುದನ್ನು ನಿಯಂತ್ರಿಸಲು ಮಳೆ ಕಡಿಮೆಯಾದ ತಕ್ಷಣ ಬೋಡ್ರೊ ದ್ರಾವಣವನ್ನು ಬಳ್ಳಿಗೆ ಸಿಂಪಡಣೆ ಮಾಡಬೇಕು. ಕೊಳೆರೋಗ ಕಾಣಿಸಿಕೊಂಡರೆ ಮೆಟಲಕ್ಸಲ್ ಮನಕೋಜೆಬ್ ಅನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಸೇರಿಸಿದ ದ್ರಾವಣವನ್ನು ಬಳ್ಳಿಗೆ ಸ್ಪ್ರೇ ಮಾಡಬೇಕಿದೆ. ಹೆಚ್ಚಿನ ಹಾನಿಯಾದಲ್ಲಿ ಸಮೀಪದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಮುತ್ತಪ್ಪ ಹೇಳಿದರು.

ಕೊಳೆರೋಗ ನಿಯಂತ್ರಣದ ಕ್ರಮಗಳು

ಕಳೆದ ಜೂನ್‌ನಿಂದಲೂ ಬಿಸಿಲು, ಮಳೆಯಿಂದಾಗಿ ಕಾಫಿಗೆ ವಿವಿಧ ರೋಗಗಳು ತಗಲುತ್ತಿವೆ. ಮಳೆ ಆರಂಭಕ್ಕೂ ಮುನ್ನವೇ ಔಷಧ ಸ್ಪ್ರೇ ಮಾಡಿದಲ್ಲಿ ಹೆಚ್ಚಿನ ಹಾನಿ ಆಗುತ್ತಿರಲಿಲ್ಲ. ಈಗ ಹಾನಿಯಾಗುತ್ತಿರುವ ಕಾಫಿ ತೋಟಗಳಲ್ಲಿ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ಹಾಕಬೇಕು. ಕೊಳೆರೋಗ ಬಾಧಿತ ಗಿಡಗಳಲ್ಲಿ ಕೊಳೆತ ಸೊಪ್ಪು ಹಾಗೂ ರೆಂಬೆಯನ್ನು ತೆಗೆದು ಸುಡಬೇಕು. ಒಂದು ಬ್ಯಾರೆಲ್ ನೀರಿಗೆ 120 ಗ್ರಾಂ ಬ್ಯಾವೆಸ್ಟಿನ್ ರಾಸಾಯನಿಕವನ್ನು ಮಿಶ್ರಣ ಮಾಡಿ ಕಾಫಿ ಗಿಡಗಳಿಗೆ ಸ್ಪ್ರೇ ಮಾಡಿದರೆ ಕಾಫಿ ಉದುರುವುದು ಹಾಗೂ ಕೊಳೆರೋಗವನ್ನು ನಿಯಂತ್ರಿಸಬಹುದು ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಮುರಳೀಧರ್ ಸಲಹೆ ನೀಡಿದರು.

Post Comments (+)