ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಕೊಡಗಿನಲ್ಲಿ ‘ರೆಡ್‌ ಅಲರ್ಟ್‌’ ಘೋಷಣೆ

Last Updated 19 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡು‍‍‍ಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಶನಿವಾರ (ಜುಲೈ 20) ರಜೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಪ್ರತಿದಿನ ಸರಾಸರಿ 200 ಮಿ.ಮೀ ಮಳೆಯಾಗಲಿದೆ ಎಂದು ಇಲಾಖೆ ಅಂದಾಜು ಮಾಡಿದೆ. ಕನಿಷ್ಠ ಎರಡು ದಿನ ಮೀನುಗಾರರು ಸಮುದ್ರಕ್ಕೆ ಇಳಿಯ ಬಾರದು ಮತ್ತು ಸಾರ್ವಜನಿಕರು ತಗ್ಗು ಪ್ರದೇಶ, ಕೆರೆ, ನದಿ ಪಾತ್ರಗಳಿಗೆ ತೆರಳಬಾರದು ಎಂದು ಆಯಾ
ಜಿಲ್ಲಾಡಳಿತಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ.

ತುರ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿರುವಂತೆ ತಿಳಿಸಲಾಗಿದೆ.

ಗುರುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಶುಕ್ರವಾರವೂ ಎಡೆಬಿಡದೇ ಮಳೆ ಸುರಿದಿದೆ. ನಗರದ ಹಲವು
ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ರಸ್ತೆ ಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಯಿತು.

ಕೊಡಗು ಜಿಲ್ಲೆಯ ‘ಜುಲೈ 20ರಿಂದ 23ರ ತನಕ ಭಾರೀ ಮಳೆ ಆಗಲಿದೆ. ಈ ದಿನಗಳಲ್ಲಿ 204 ಮಿ.ಮೀಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾರ್ವನಿಕರು ಹಾಗೂ ಜಿಲ್ಲೆಗೆ ಬರುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕೋರಿದೆ.

ಜಿಲ್ಲೆಯಾದ್ಯಂತ ಶುಕ್ರವಾರಸಾಧಾರಣ ಮಳೆಯಾಗಿದೆ. ಮಡಿಕೇರಿ ಯಲ್ಲಿ ದಿನವಿಡೀ ಜಿಟಿಜಿಟಿಯಾಗಿ ಮಳೆ ಸುರಿಯಿತು.

ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಸುಂಟಿಕೊಪ್ಪ, ಚೇರಂ ಬಾಣೆ, ಅಪ್ಪಂಗಳ, ಕಾಟಕೇರಿ ವ್ಯಾಪ್ತಿ ಯಲ್ಲಿ ಉತ್ತಮ ಮಳೆಯಾಗಿದೆ. ಗುರು ವಾರ ತಡರಾತ್ರಿಯೂ ಒಂದು ಗಂಟೆ ಧಾರಾಕಾರ ಮಳೆಯಾಗಿತ್ತು.

ನೀರಿನ ಹರಿವು ಇಳಿಮುಖ: ಕೊಡಗಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೆ, ಮಳೆಗಾಲದಲ್ಲೇ ಪ್ರಮುಖ ನದಿಗಳಲ್ಲಿ ನೀರಿನಮಟ್ಟ ಏರಿಕೆ ಕಂಡಿಲ್ಲ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನ ಹರಿವು ಕಡಿಮೆಯಾಗಿದೆ. ಹಾರಂಗಿ ಜಲಾಶಯದ ಒಳಹರಿವು 1,150 ಕ್ಯುಸೆಕ್‌ ಇದೆ.

ಮೈಸೂರು ಹಾಗೂ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೆಲವೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಸುತ್ತಮುತ್ತಲು ಶುಕ್ರವಾರ ಸಂಜೆ ಒಂದು ತಾಸಿಗೂ ಹೆಚ್ಚು ಹೊತ್ತು ಧಾರಾ ಕಾರವಾಗಿ ಮಳೆ ಸುರಿಯಿತು. ಹಲವು ಗೋಕಟ್ಟೆ, ಚೆಕ್‌ ಡ್ಯಾಂಗಳಿಗೆ ನೀರು ಹರಿದು ಬಂದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಿನಗಳ ಬಿಡುವಿನ ನಂತರ ಕೆಲವೆಡೆ ಶುಕ್ರವಾರ ಮಳೆ ಚುರುಕುಗೊಂಡಿದೆ. ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಜೆಯ ನಂತರ ಜೋರು ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆತಾಲ್ಲೂಕಿನ ಬಿ. ದುರ್ಗದಲ್ಲಿ ಗುರುವಾರ ರಾತ್ರಿ 56 ಮಿ.ಮೀನಷ್ಟು ಮಳೆಯಾಗಿದ್ದು, ಇದು ಈ ವರ್ಷದಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ.

ಕಲಬುರ್ಗಿ, ಬೀದರ್‌ ಮತ್ತು ಕೊಪ್ಪಳ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.ಬೀದರ್‌ ನಗರದಲ್ಲಿ ಶುಕ್ರವಾರ ಒಂದೂವರೆ ಗಂಟೆ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್ ಮತ್ತು ಕಮಲನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು.

ಗಾಳಿ–ಮಳೆ: ಕೊಟ್ಟಿಗೆ ಕುಸಿದು ವ್ಯಕ್ತಿ ಸಾವು

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮರಟಗೆರೆಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಟ್ಟಿಗೆಯೊಂದು ಕುಸಿದಿದ್ದು, ಸಾಮ್ಯಾ ನಾಯ್ಕ್‌ (65) ಎಂಬುವವರು ಮೃತಪಟ್ಟಿದ್ದಾರೆ. ಅವರ ಪತ್ನಿ ಕಾಳಿಬಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರು ಮೇಕೆಗಳು ಅಸುನೀಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT