ಮನೆ ಹಾನಿ ಸಮೀಕ್ಷೆ ಆರಂಭ

7
ವಿವಿಧ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ಪರಿಶೀಲನೆ, ಕಾಲಾವಕಾಶ ವಿಸ್ತರಣೆ

ಮನೆ ಹಾನಿ ಸಮೀಕ್ಷೆ ಆರಂಭ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಈಗ ಸಹಜ ಸ್ಥಿತಿಯತ್ತ ಬರುತ್ತಿದೆ. ಶನಿವಾರ ಬೆಳಿಗ್ಗೆಯಿಂದ ಬಿಸಿಲ ವಾತಾವರಣ ಕಂಡುಬಂದಿದ್ದು ಜನರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ನಷ್ಟವೂ ಉಂಟಾಗಿತ್ತು. ಭೂಕುಸಿತದಿಂದ ಹಲವು ಮನೆಗಳು ಕುಸಿದಿದ್ದವು. ಜಿಲ್ಲಾಡಳಿತ ಮನೆಹಾನಿ ಸಮೀಕ್ಷೆ ಆರಂಭಿಸಿದೆ.  

ಪ್ರಕೃತಿ ವಿಕೋಪದಿಂದ ಗಾಳಿಬೀಡು, ಮಕ್ಕಂದೂರು, ಕೆ.ನಿಡುಗಣೆ, ಮದೆ, ಗರ್ವಾಲೆ, ಮಾದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಆದ್ದರಿಂದ, ಬೆಳೆ ಹಾನಿ ಹಾಗೂ ಮನೆ ಹಾನಿಯಾಗಿದ್ದು, ಈ ಸಂಬಂಧ ಸಮೀಕ್ಷೆ ಕಾರ್ಯಗಳು ನಡೆಯುತ್ತಿವೆ. ಹಾಗೆಯೇ ಸದ್ಯ ತಾತ್ಕಾಲಿಕವಾಗಿ ಓಡಾಡಲು ಗ್ರಾಮೀಣ ರಸ್ತೆ ಸರಿಪಡಿಸುವ ಕಾರ್ಯವು ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    

ಪ್ರಧಾನ ಕಾರ್ಯದರ್ಶಿ ಭೇಟಿ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತಿಕ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಪಂಚಾಯತ್ ರಾಜ್ ಎಂಜಿನಿಯರ್ ಅವರು ಕೆ. ನಿಡುಗಡೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಮತ್ತಿತರ ತೀವ್ರ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.  

ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿ, ದೇವಸ್ತೂರು, ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಕಾಲೂರು ಮತ್ತಿತರ ಗ್ರಾಮಗಳ ರಸ್ತೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಹಾಗೆಯೇ, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ಪ್ರಗತಿಯತ್ತ ಸಾಗಿದೆ.      

ಆಹಾರ ಕಿಟ್ ವಿತರಣೆ: ಅತಿವೃಷ್ಟಿಗೆ ತುತ್ತಾಗಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಸರ್ಕಾರ ವಿಶೇಷ ಅನ್ನಭಾಗ್ಯ ಯೋಜನೆ ಅಡಿ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ತೀವ್ರ ಅತಿವೃಷ್ಟಿ ಪ್ರದೇಶಗಳಲ್ಲಿ ಪ್ರಥಮ ಆದ್ಯತೆಯಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ ಮಾಹಿತಿ ನೀಡಿದ್ದಾರೆ. 

ಆಗಸ್ಟ್ 31ರ ತನಕ 9,622 ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಲಾಗಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 5,224, ಸೋಮವಾರಪೇಟೆ ತಾಲ್ಲೂಕಿನಲ್ಲಿ 2,092 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 2,306 ಕಿಟ್‌ಗಳನ್ನು ವಿತರಿಸಲಾಗಿದೆ. ಈ ಎಲ್ಲಾ ಕಿಟ್‌ಗಳನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೆ.3ರ ತನಕ ಅವಕಾಶ: ಹಾನಿಗೊಳಗಾದ ವಿವರಗಳನ್ನು (ಅವಲಂಬಿತರು, ಪ್ರಾಣ ಹಾನಿ, ಮನೆ ಹಾನಿ, ಜಾನುವಾರು ಹಾನಿ, ಬೆಳೆ ಹಾನಿ) ಕುಟುಂಬದ ಮುಖ್ಯಸ್ಥರು/ ಸದಸ್ಯರು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಆಯಾಯ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರಿಗೆ ಸೆ.3ರ ತನಕ ಸಲ್ಲಿಸಲು ಅವಕಾಶ ನೀಡಲಾಗಿದೆ.

ನಿರಾಶ್ರಿತರ ಬಳಿ ಯಾವುದಾದರು ಗುರುತಿನ ಚೀಟಿ ವಿವರಗಳು ಲಭ್ಯವಿದ್ದಲ್ಲಿ ಮಾತ್ರ ಮಾಹಿತಿ ನೀಡಬೇಕು. ದಾಖಲೆ ಸಲ್ಲಿಕೆ ಕಡ್ಡಾಯವೇನೂ ಅಲ್ಲ.

ಕಾಫಿ, ಭತ್ತ, ಕರಿಮೆಣಸು ಇತ್ಯಾದಿ ಬೆಳೆಗಳ ನಷ್ಟಕ್ಕೆ, ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯವನ್ನು ವೈಜ್ಞಾನಿಕವಾಗಿ ತಂಡಗಳೊಂದಿಗೆ ಪ್ರತ್ಯೇಕ ನಡೆಸಲಾಗುವುದು. ಈ ಸರ್ವೆ ಕಾರ್ಯವು ಪ್ರಮುಖವಾಗಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶಕ್ಕಾಗಿ ಅವರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಸಮೀಕ್ಷಾ ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗರ್ವಾಲೆಗೆ ಬಸ್ ಸೌಲಭ್ಯ: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಗೆ ಬರುವ ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮಕ್ಕೆ ಈ ಹಿಂದೆ ದಿನದ ಮೂರು ಬಾರಿ ಕಲ್ಪಿಸಲಾಗಿದ್ದ ಮಿನಿ ಬಸ್ ಸೌಲಭ್ಯವನ್ನು ಮುಂದುವರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಬಸ್ ಡಿಪೊ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ.

ಸೋಮವಾರಪೇಟೆ ಬಸ್ ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಕಿಕ್ಕರಳ್ಳಿ, ಸೂರ್ಲಬ್ಬಿ ಮಾರ್ಗವಾಗಿ ಗರ್ವಾಲೆಗೆ ಮಿನಿ ಬಸ್ ಸಂಚರಿಸಲಿದೆ. ಹಾಗೆಯೇ ವಾಪಸ್‌ ಅದೇ ಮಾರ್ಗದಲ್ಲಿ ಸೋಮವಾರಪೇಟೆಗೆ ಬರಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !