18 ದಿನ ಕಳೆದರೂ ಅಧಿಕಾರಿಗಳ ಸುಳಿವಿಲ್ಲ

7

18 ದಿನ ಕಳೆದರೂ ಅಧಿಕಾರಿಗಳ ಸುಳಿವಿಲ್ಲ

Published:
Updated:
Deccan Herald

ಸೋಮವಾರಪೇಟೆ: ತಾಲ್ಲೂಕಿನ ಗರ್ವಾಲೆ ಗ್ರಾಮದಲ್ಲಿ ಭಾರೀ ಮಳೆ, ಗಾಳಿಗೆ ಭೂಕುಸಿತವಾಗಿ ಸಾಕಷ್ಟು ಹಾನಿ ಸಂಭವಿಸಿ 18 ದಿನಗಳು ಕಳೆದರೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಬಗ್ಗೆ ಜನರಿಂದ ಮಾಹಿತಿ ಪಡೆದಿಲ್ಲ ಎಂದು ತಾಚಮಂಡ ಕುಟುಂಬಸ್ಥರು ದೂರಿದರು.

ಗರ್ವಾಲೆ ಗ್ರಾಮದಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿ ಆಸ್ತಿ, ಪಾಸ್ತಿ ನಷ್ಟವಾಗಿದೆ. ಆತಂಕದಲ್ಲೇ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ. ಆದರೆ, ಸೌಜನ್ಯಕ್ಕೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಗರ್ವಾಲೆ ಗ್ರಾಮದ ಒಂದು ಭಾಗದಲ್ಲಿ ಕೊಡವ ಜನಾಂಗದ ತಾಚಮಂಡ ಕುಟುಂಬಕ್ಕೆ ಸೇರಿದ 15 ಕುಟುಂಬಗಳು ವಾಸಿಸುತ್ತಿದ್ದು, ಆ. 17ರಂದು ಬೆಳಿಗ್ಗೆ 7ಕ್ಕೆ ಗ್ರಾಮದಲ್ಲಿ ಭೂಕುಸಿತವಾಗಿದೆ. ಕಾಫಿ ತೋಟ, ಭತ್ತದ ಕೃಷಿ ಭೂಮಿ ನಾಶವಾಗಿದೆ. ರಸ್ತೆಗಳು ಕುಸಿದು, ಪಟ್ಟಣ ಸಂಪರ್ಕ ಕಳೆದುಕೊಂಡಿದೆ. ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿ ಬೆಟ್ಟಗುಡ್ಡವನ್ನೇರಿ, ಪಟ್ಟಣದ ಪರಿಹಾರ ಕೇಂದ್ರ ತಲುಪಿದ್ದಾರೆ.  ವಾರದಿಂದ ಮಳೆ ನಿಂತಿದ್ದು, ನಿವಾಸಿಗಳು ಗ್ರಾಮದ ಮನೆಗಳಿಗೆ ತೆರಳಿದ್ದಾರೆ. ಆದರೆ, ಇದುವರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಹಾನಿ ಬಗ್ಗೆ ಮಾಹಿತಿ ಪಡೆದಿಲ್ಲ ಎಂದು ಕಾವೇರಪ್ಪ ಆರೋಪಿಸಿದ್ದಾರೆ.

ಕೃಷಿಯನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿರುವ ಇಲ್ಲಿನ ಕುಟುಂಬಗಳು ಮುಂದಿನ ಬದುಕಿನ ಬಗ್ಗೆ ಯೋಚನೆ ಮಾಡುವಂತಾಗಿದೆ. ಟಿ.ಕೆ. ಕಾವೇರಪ್ಪ, ಟಿ.ಪಿ. ಅಪ್ಪಣ್ಣ, ಟಿ.ಡಿ. ತಮ್ಮಯ್ಯ, ಟಿ.ಪಿ. ಮಹೇಶ್ ಅವರ ಆಸ್ತಿ– ಪಾಸ್ತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ವರದಿಯಾಗಿದೆ.

ಭಾರತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿ.ಈ. ಅಯ್ಯಣ್ಣ ಅವರ ಆಸ್ತಿ ಭೂಕುಸಿತದಿಂದ ನಾಶವಾಗಿದೆ. ಅಲ್ಲಿನ ಶಾಲಾ ಮಕ್ಕಳನ್ನು ವಿರಾಜಪೇಟೆ, ಮಡಿಕೇರಿ ಹಾಸ್ಟೆಲ್‌ಗಳಲ್ಲಿ ಬಿಡಲಾಗಿದೆ. ಆದರೆ, ಪೋಷಕರು ಗ್ರಾಮದಲ್ಲೇ ಉಳಿದಿದ್ದಾರೆ. ಮೂರು ತಿಂಗಳು ಸುರಿದ ಧಾರಾಕಾರ ಮಳೆಗೆ ಕಾಫಿ, ಕಾಳುಮೆಣಸು, ಏಲಕ್ಕಿ ಫಸಲನ್ನು ಕಳೆದುಕೊಂಡು, ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ಗ್ರಾಮದ ತಾಚಮಂಡ ಕಾವೇರಪ್ಪ ಮಾತನಾಡಿ, ‘ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸರ್ಕಾರ ನೀಡುವ ಪರಿಹಾರದ ಹಣದಲ್ಲೇ ಜೀವನ ಸಾಗಿಸಬೇಕು. ಆದರೆ, ಹಾನಿ, ಪರಿಹಾರದ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೂ ಗ್ರಾಮಕ್ಕೆ ಬಂದಿಲ್ಲ. ಕೂಡಲೇ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !