ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ

7
ಮತ್ತೆ ಅಪಾಯದಲ್ಲಿ ರಾಷ್ಟ್ರೀಯ ಹೆದ್ದಾರಿ, ಗುಡ್ಡ ಕುಸಿದು ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ ಬಿರುಸಾಗಿದ್ದು, ಬುಧವಾರ ಧಾರಾಕಾರ ಮಳೆ ಸುರಿಯಿತು. ಮಡಿಕೇರಿಯಲ್ಲಿ ಮಂಗಳವಾರ ರಾತ್ರಿಯಿಂದ ಭಾರಿ ಮಳೆಯಾಗಿದೆ. ಬುಧವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಿದ್ದವು.

ಮಂಗಳಾದೇವಿ ನಗರದಲ್ಲಿ ಹೇಮಾವತಿ ಅವರ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಜಖಂಗೊಂಡಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ತಾಲ್ಲೂಕಿನ ಮಕ್ಕಂದೂರಿನಲ್ಲಿ ಗ್ರಾಮದ ಜಾಂಗೇರಿ ಪೈಸಾರಿಯ ಪ್ರಕಾಶ್‌ ಅವರ ಮನೆಯೂ ಕುಸಿದಿದೆ. ಕಾವೇರಿ ಲೇಔಟ್‌ನಲ್ಲಿ ಹಲವು ಮನೆಗಳಿಗೆ ಮಳೆಯ ನೀರು ನುಗ್ಗಿ ಸಮಸ್ಯೆ ತಂದೊಡ್ಡಿತು. ನಗರದ ಬೃಹತ್‌ ಚರಂಡಿಯಲ್ಲಿ ಈ ವರ್ಷ ಮಳೆಯಲ್ಲಿ ಮೊದಲ ಬಾರಿಗೆ ಭಾರಿ ಪ್ರಮಾಣದ ನೀರು ಹರಿಯಿತು. ಎಲ್‌ಐಸಿ ಎದುರು ಚರಂಡಿಯೇ ಕೊಚ್ಚಿ ಹೋಗುವ ಸ್ಥಿತಿಗೆ ತಲುಪಿದೆ. ಅಲ್ಲಲ್ಲಿ ವಿದ್ಯುತ್‌ ಕಂಬಗಳು ಉರುಳಿದ್ದು ವಿದ್ಯುತ್‌ ಪೂರೈಕೆಯೂ ಸ್ಥಗಿತವಾಗಿದೆ.

ನೀರಿನಲ್ಲಿ ಸಿಲುಕಿದ ಬಸ್‌: ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಹೊಳೆಯೊಂದು ಉಕ್ಕಿ ಹರಿದ ಪರಿಣಾಮ ಖಾಸಗಿ ಬಸ್‌ವೊಂದು ನೀರಿನಲ್ಲಿ ಸಿಲುಕಿತ್ತು. ನೀರು ಕಡಿಮೆಯಾದ ಬಳಿಕ ಬಸ್‌ ಅನ್ನು ಮೇಲಕ್ಕೆ ತರಲಾಯಿತು.

ಭಾಗಮಂಡಲ ಮತ್ತೆ ಜಲಾವೃತ: ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮವು ಮತ್ತೆ ಜಲಾವೃತವಾಗಿದೆ. ಜುಲೈನಲ್ಲಿ ಸುರಿದ ಮಳೆಯಲ್ಲೂ ಐದು ದಿನಗಳ ಕಾಲ ಭಾಗಮಂಡಲ ಜಲಾವೃತವಾಗಿತ್ತು.

ಅಪಾಯದಲ್ಲಿ ಹೆದ್ದಾರಿ: ಮೈಸೂರು, ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಒಂದು ಬದಿ ಕುಸಿದಿದ್ದು ಹೆದ್ದಾರಿಯೇ ಅಪಾಯದ ಸ್ಥಿತಿಗೆ ತಲುಪಿದೆ. ಇದೇ ರೀತಿ ಸತತವಾಗಿ ಮಳೆ ಸುರಿದರೆ ಇಡೀ ರಸ್ತೆ ಕುಸಿಯುವ ಸಾಧ್ಯತೆಯಿದೆ. ಜುಲೈ ಮೊದಲ ವಾರದಲ್ಲಿ ಕುಸಿದ ಸ್ಥಳದಲ್ಲೇ ಮತ್ತೊಮ್ಮೆ ಹೆದ್ದಾರಿ ಕುಸಿದಿರುವುದು ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಒಂದು ವೇಳೆ ಇಡೀ ರಸ್ತೆಯೇ ಕುಸಿದರೆ ಈ ಮಾರ್ಗವು ಬಂದ್‌ ಆಗಲಿದೆ. ವಿರಾಜಪೇಟೆಯ ರಸ್ತೆಯ ಮೇಕೇರಿ ಮೂಲಕ ಮಂಗಳೂರು ರಸ್ತೆಗೆ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ.

ಅಲ್ಲಲ್ಲಿ ಅವಾಂತರ ಸೃಷ್ಟಿ: ನಗರದ ವಿವಿಧೆಡೆಗಳಲ್ಲಿ ಭಾರಿ ಮಳೆಯು ಅನಾಹುತವನ್ನೇ ಸೃಷ್ಟಿಸಿತು. ಗುಡ್ಡದ ನಿವಾಸಿಗಳಲ್ಲಿ ಈಗ ಆತಂಕ ಶುರುವಾಗಿದೆ. ಮಳೆಯ ಅಬ್ಬರ ಜೋರಾಗಿದ್ದು ಗುಡ್ಡಗಳು ಕುಸಿಯುವ ಆತಂಕ ಎದುರಾಗಿದೆ. ಚಾಮುಂಡೇಶ್ವರಿ ಬಡಾವಣೆ, ‍ಪುಟಾಣಿ ನಗರ, ಮಂಗಳಾದೇವಿ ನಗರದ ಅಪಾಯದಲ್ಲಿರುವ ನಿವಾಸಿಗಳನ್ನು ಗಂಜಿಕೇಂದ್ರಕ್ಕೆ ತೆರಳುವಂತೆ ನಗರಸಭೆ ಕೋರಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !