ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ಮಳೆಯ ಸಾಥ್; ನಡುಗಿದ ಜನ

ಹವಾಮಾನ ವೈಪರೀತ್ಯಕ್ಕೆ ರೈತರು ಕಂಗಾಲು: ಜಿಲ್ಲೆಯಲ್ಲಿ ಅಲ್ಲಲ್ಲಿ ವರುಣನ ಆರ್ಭಟ
Last Updated 12 ಡಿಸೆಂಬರ್ 2022, 6:42 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ‘ಮ್ಯಾಂಡಸ್’ ಚಂಡಮಾರುತ ತನ್ನ ಪ್ರಭಾವ ಬೀರಿದ್ದು, ದಿನವಿಡೀ ಸೂರ್ಯನ ದರ್ಶನವಾಗಲೇ ಇಲ್ಲ. ಕವಿದಿದ್ದ ದಟ್ಟ ಮೋಡಗಳಿಂದ ಅಲ್ಲಲ್ಲಿ ಉದುರುತ್ತಿದ್ದ ಹನಿಗಳಿಗೆ ಜತೆಯಾದ ಚಳಿಯು ಜನರನ್ನು ಅಕ್ಷರಶಃ ನಡುಗಿಸಿತು. ಥರಗುಟ್ಟುವಂತಹ ಚಳಿ ಯಿಂದಾಗಿ ಜನಸಂಚಾರ ವಿರಳವಾಗಿತ್ತು.

ಕಾಫಿ ಹಾಗೂ ಭತ್ತದ ಕೊಯ್ಲಿನ ಸಮಯ ಇದಾಗಿರುವುದರಿಂದ ಬೀಳು ತ್ತಿರುವ ಮಳೆ ಹಾಗೂ ಕವಿದಿರುವ ಮೋಡ ಗಳು ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ. ಇದೇ ವಾತಾವರಣ ಮುಂದುವರಿದರೆ ಬೆಳೆಗಳು ನಾಶವಾ ಗಲಿದೆ ಎಂಬ ಆತಂಕ ಅವರನ್ನು ಕಾಡುತ್ತಿದೆ.

ಸಾಧಾರಣ ಮಳೆ

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೂ ದಟ್ಟವಾಗಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಮಳೆಯಾಯಿತು. ಮಧ್ಯಾಹ್ನದ ನಂತರ ಸಾಧಾರಣ ಮಳೆ ಸುರಿಯುತ್ತಾ ಮಳೆಗಾಲದ ದಿನಗಳನ್ನು ನೆನಪಿಸಿತು. ಸಂಜೆ 5-30 ರ ವೇಳೆಗೆ ಕತ್ತಲಾವರಿಸಿ ಬೀದಿ ದೀಪಗಳನ್ನು ಹೊತ್ತಿಸಲಾಯಿತು.

ಥಂಡಿ ಗಾಳಿ, ಮೈ ನಡುಗಿಸುವ ಚಳಿಗೆ ವಾರದ ರಜೆಯೂ ಆಗಿದ್ದ ಕಾರಣ ಜನರು ಮನೆಯಿಂದ ಹೊರ ಬರಲಿಲ್ಲ. ಸ್ವೆಟರ್, ಜರ್ಕಿನ್ ಧರಿಸಿ ಮನೆಯೊಳಗೆ ಬೆಚ್ಚಗೆ ಕುಳಿತರು. ಮಧ್ಯಾಹ್ನದ ಬಳಿಕ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ತೋಟದ ಕೆಲಸಕ್ಕೆ ಅಡ್ಡಿ

ನಾಪೋಕ್ಲು: ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಬೆಳೆಗಾರರು ಚಿಂತಿತರಾಗಿದ್ದಾರೆ. ನಾಪೋಕ್ಲುವಿನಲ್ಲಿ ಭಾನುವಾರ ದಿನದ ಕೆಲ ಹೊತ್ತು ತುಂತುರು ಮಳೆಯಾಯಿತು. ಬಿಸಿಲಿನ ಪ್ರಖರತೆ ಇಲ್ಲದೇ ಬೆಳೆಗಾರರ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ.

ಭತ್ತದ ಗದ್ದೆಗಳಲ್ಲಿ ಪೈರು ಹಣ್ಣಾಗುತ್ತಿದ್ದು, ಗದ್ದೆಗಳಲ್ಲಿ ತೇವಾಂಶ ಕಡಿಮೆಯಾಗುತ್ತಿಲ್ಲ. ಇದರಿಂದ ಭತ್ತದ ಕೊಯ್ಲಿಗೆ ಅಡ್ಡಿಯಾಗುತ್ತಿದೆ. ಹೋಬಳಿ ವ್ಯಾಪ್ತಿಯ ನೆಲಜಿ, ಬಲ್ಲಮಾವಟಿ, ಕಕ್ಕಬ್ಬೆ, ಪುಲಿಕೋಟು ಮತ್ತಿತರ ಭಾಗಗಳಲ್ಲಿ ಕಾಫಿಯ ಕೊಯ್ಲು ಆರಂಭಗೊಂಡಿದ್ದು ಕಾಫಿ ಒಣಗಿಸುವುದು ಸಮಸ್ಯೆಯಾಗಿ ಕಾಡುತ್ತಿದೆ. ವಾರದ ಹಿಂದೆ ಕೊಯ್ಲು ಮಾಡಿದ ಕಾಫಿ ಮೋಡದಿಂದಾಗಿ ಒಣಗದೇ ಹಾಗೆಯೇ ಉಳಿದಿದೆ. ಪ್ರತಿದಿನ ಬಿಸಿಲಿಗಾಗಿ ಕಾಯುವಂತಾಗಿದೆ ಎಂದು ನೆಲಜಿ ಗ್ರಾಮದ ಕಾಫಿ ಬೆಳೆಗಾರ ಅಪ್ಪಚ್ಚು ಹೇಳಿದರು.

ತೋಟಗಳಲ್ಲಿ ಕಾಫಿ ಭಾಗಶಃ ಹಣ್ಣಾಗಿದ್ದು ಬಿಸಿಲು ಕಂಡು ಬಂದರೆ ಕೊಯ್ಲು ಕೆಲಸ ಚುರುಕುಗೊಳ್ಳಲಿದೆ ಎಂದರು.

ಸಿದ್ದಾಪುರ ಸುತ್ತ ಸಾಧಾರಣ ಮಳೆ

ಸಿದ್ದಾಪುರ: ಸಿದ್ದಾಪುರ ಭಾಗದಲ್ಲಿ ಭಾನುವಾರ ಸಾಧಾರಣ ಮಳೆಯಾಗಿದ್ದು, ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.

ಸಿದ್ದಾಪುರ, ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ ಭಾಗದಲ್ಲಿ ಭಾನುವಾರ ಬೆಳಿಗ್ಗೆಯಿಂದಲೂ ತುಂತುರು ಮಳೆಯಾಗಿದ್ದು, ಮಧ್ಯಾಹ್ನ ವೇಳೆ ಉತ್ತಮ ಮಳೆಯಾಗಿದೆ. ಭಾನುವಾರ ಸಂತೆ ದಿನವಾಗಿದ್ದು, ಮಳೆಯಿಂದಾಗಿ ವ್ಯಾಪಾರಿಗಳು, ಸಾರ್ವಜನಿಕರು ಪರದಾಡುವಂತಾಯಿತು‌.

ಸಿದ್ದಾಪುರ ಭಾಗದಲ್ಲಿ ಭತ್ತ ಕೊಯ್ಲು ಆರಂಭವಾಗಿದ್ದು, ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ ಫಸಲು ಉದುರುವ ಭೀತಿ ಎದುರಾಗಿದ್ದು, ಕಾಫಿ ಬೆಳೆಗೂ ಕಂಟಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT