ಬುಧವಾರ, ಆಗಸ್ಟ್ 10, 2022
20 °C
ಕಾಳುಮೆಣಸಿನ ಬೆಳೆಗಾರರ ಮುಖದಲ್ಲಿ ಮೂಡಿದ ಮಂದಹಾಸ

ನಿರಂತರ ಮಳೆ: ಮೆಣಸಿನ ಬಂಪರ್ ಫಸಲಿನ ನಿರೀಕ್ಷೆ

ಲೋಕೇಶ್ ಡಿ.ಪಿ. Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಈಗ ಸುರಿಯುತ್ತಿರುವ ಮಳೆಯಿಂದ ಕಾಳು ಮೆಣಸಿಗೆ ಫಸಲಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ಸಾಲಿನಲ್ಲಿ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ತಾಲ್ಲೂಕಿನಲ್ಲಿ ರೈತರು ಅರೇಬಿಕಾ ಕಾಫಿ ನಿರ್ವಹಣೆ ಸಮಸ್ಯೆಯಿಂದ ನಷ್ಟಕ್ಕೀಡಾಗುತ್ತಿರುವ ಬೆಳೆಗಾರರು, ಇತ್ತೀಚಿನ ವರ್ಷಗಳಲ್ಲಿ ಕಾಳು ಮೆಣಸಿನ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ತಣ್ಣೀರುಹಳ್ಳ, ಸುಂಟಿಕೊಪ್ಪ, ಮಸಗೋಡು, ನೇಗಳ್ಳೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಸಲು ಲಭಿಸಿತ್ತು. ಉಳಿದೆಡೆ ಕಳೆದ ಮುಂಗಾರಿನ ಸಂದರ್ಭ ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಫಸಲು ನಷ್ಟವಾಗಿತ್ತು.

ಕಾಳುಮೆಣಸಿಗೆ ಈ ಪ್ರದೇಶ ಸೂಕ್ತವಾಗಿದ್ದು, ತಾಲ್ಲೂಕಿನ ಗೌಡಳ್ಳಿ, ನೇರುಗಳಲೆ, ದೊಡ್ಡಮಳ್ತೆ, ಗೋಪಾಲಪುರ, ಗಣಗೂರು, ನೀಡ್ತ, ದುಂಡಳ್ಳಿ, ವಾಲ್ನೂರುತ್ಯಾಗತ್ತೂರು, ಕೊಡ್ಲಿಪೇಟೆ, ಮಾದಾಪುರ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ್ಳೆಯ ಫಸಲು ಸಿಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 4500 ಹೆಕ್ಟೇರ್ ಸ್ಥಳದಲ್ಲಿ ಕಾಳುಮೆಣಸನ್ನು ಬೆಳೆಯಾಗುತ್ತಿದೆ.

ಒಂದು ಕೆ.ಜಿ. ಒಣಗಿದ ಕಾಳುಮೆಣಸಿನ ಬೆಲೆ ಸ್ಥಳೀಯವಾಗಿ ಕೆ.ಜಿಗೆ ₹ 350 ರಿಂದ ₹ 390ರ ಆಸುಪಾಸಿನಲ್ಲಿದೆ. ಹಿಂದಿನ ವರ್ಷಗಳಲ್ಲಿ ಗರಿಷ್ಠ ₹ 600ರಿಂದ ₹ 75 ರವರೆಗೆ ಬೆಲೆ ತಲುಪಿತ್ತು. ರೈತರಿಗೆ ಕಾಫಿಗೆ ಬೆಲೆ ಇಲ್ಲದ ಸಂದರ್ಭ ಮೆಣಸಿನ ಫಸಲು ಕೈ ಹಿಡಿಯುತ್ತಿದ್ದು, ಉತ್ತಮ ಗುಣಮಟ್ಟದ ಭಾರತದ ಮೆಣಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇದೆ. ಆದರೆ, ಕೆಲವರು ವಿದೇಶಗಳಿಂದ ಕಳಪೆ ಕಾಳು ಮೆಣಸನ್ನು ಆಮದು ಮಾಡಿಕೊಂಡು, ದೇಶಿಯ ಮೆಣಸಿಗೆ ಸೇರಿಸಿ ಮಾರಲು ಆರಂಭವಾಗುತ್ತಿದ್ದಂತೆ ಕಾಳು ಮೆಣಸಿನ ಬೆಲೆ ಪಾತಾಳ ಸೇರಿದೆ.

‘ಕಾಳುಮೆಣಸನ್ನು ಸರಿಯಾಗಿ ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗೆ ಇಲ್ಲಿಂದ ನೇರವಾಗಿ ಮಾರಾಟ ಮಾಡು ವಂತಾದರೆ ಬೆಳೆಗಾರರಿಗೆ ಹೆಚ್ಚಿನ ದರ ಸಿಗುತ್ತದೆ. ಸದ್ಯ ಕೊಡಗಿನಲ್ಲಿ ಮೆಣಸನ್ನು ಸಂಸ್ಕರಿಸಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲದ ಕಾರಣ ಪರ ರಾಜ್ಯದ ವ್ಯಾಪಾರಿಗಳನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಸಂಸ್ಕರಣಾ ಘಟಕವನ್ನು ಕೊಡಗಿನಲ್ಲೇ ಸ್ಥಾಪನೆಯಾಗಬೇಕು’ ಎಂದು ಹೆಗ್ಗುಳ ಗ್ರಾಮದ ಕಾಳು ಮೆಣಸಿನ ಬೆಳೆಗಾರ ಸತೀಶ್ ಆಗ್ರಹಿಸಿದರು.

ಕಾಳು ಮೆಣಸಿನ ಫಸಲಿಗೆ ಈಗ ಬೀಳುತ್ತಿರುವ ಮಳೆ ಉತ್ತಮವಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಮೆಣಸು ಹೂವು ಬಿಟ್ಟರೆ ಅದರಿಂದ ಮುಂದಿನ ಸಾಲಿನ ಫಸಲು ಚೆನ್ನಾಗಿರುತ್ತದೆ. ಆದರೆ, ಜೂನ್ ಕೊನೆ ಮತ್ತು ಜುಲೈ ತಿಂಗಳಿನಲ್ಲಿ ಹೂವಾದರೆ, ಅದರಲ್ಲಿ ಒಳ್ಳೆಯ ಫಸಲು ಆಗುವುದಿಲ್ಲ.

ಬೆಳೆಗಾರರಿಗೆ ಸಲಹೆ
‘ಬಳ್ಳಿಗಳನ್ನು ಉಳಿಸಿಕೊಳ್ಳಲು ಶೇ 1ರ ಬೋರ್ಡೊ ದ್ರಾವಣವನ್ನು ಬಳ್ಳಿಗಳಿಗೆ ಸಿಂಪಡಣೆ ಮಾಡಬೇಕು. ಟ್ರೈಕೋಡರ್ಮಾ ಅಥವಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಅಥವಾ ಪ್ರತಿ ಬಳ್ಳಿಗೆ 3ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರೆಲ್‌ಗೆ 600 ಗ್ರಾಂ) ದ್ರಾವಣದಿಂದ ಬಳ್ಳಿಯ ಬುಡದ ಭಾಗಕ್ಕೆ ಸುರಿಯಬೇಕು. ಇವುಗಳನ್ನು ಬಿಟ್ಟು ಬೇರೆ ದ್ರಾವಣದ ಸಿಂಪಡಣೆ ಅವಶ್ಯಕತೆ ಇಲ್ಲ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಸಿಂಧು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.