ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆ

ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಸುಂಟಿಕೊಪ್ಪ ಭಾಗದಲ್ಲಿ ಜೋರು ಮಳೆ
Last Updated 14 ಏಪ್ರಿಲ್ 2022, 5:57 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರ್ಷದ ಮೊದಲ ಮಳೆ ತಂಪೆರೆಯಿತು.

ಬೆಳಿಗ್ಗೆಯಿಂದ ವಿಪರೀತ ಬಿಸಿಲಿನಿಂದ ಕೂಡಿದ ವಾತಾವರಣ ವಿತ್ತು. ಸಂಜೆಗೆ ದಿಢೀರನೇ ವಾತಾವರಣ ದಲ್ಲಿ ಬದಲಾವಣೆ ಉಂಟಾಗಿ ಜೋರು ಗಾಳಿ ಬೀಸಲಾರಂಭಿಸಿತು. ಸಂಜೆ 6ಕ್ಕೆ ಗುಡುಗು, ಸಿಡಿಲಿನಿಂದ ಕೂಡಿದ್ದ ಮಳೆ ಸುರಿಯಲಾರಂಭಿಸಿತು. ಸುಮಾರು ಒಂದು ತಾಸು ಬಿರುಸಿನ ಮಳೆಯಾಯಿತು. ದಿಢೀರನೆ ಬಂದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿತು. ಬೀದಿಬದಿ‌ ವ್ಯಾಪಾರಿಗಳು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.

ಜೋರಾಗಿ ಸುರಿದ ಮಳೆಯಿಂದಾಗಿ ಚರಂಡಿಯಲ್ಲಿ ನೀರು ತುಂಬಿ ಹರಿಯಿತು. ರಸ್ತೆಯಲ್ಲಿ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಆರ್ಭಟಿಸಿದ ಮಳೆರಾಯ

ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆ 10 ರವರೆಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಉರಿ ಬಿಸಿಲು ಮತ್ತು ಗಾಳಿ ಕಂಡುಬಂತು. ಸಂಜೆ 5 ಗಂಟೆಗೆ ಕತ್ತಲು ಆವರಿಸಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು.

ಗಾಳಿ ಸಹಿತ ಮಳೆಯಿಂದಾಗಿ ಜನ ಭಯಭೀತರಾಗಿ ಅಂಗಡಿ ಮಳಿಗೆ, ಅಕ್ಕಪಕ್ಕದಲ್ಲಿ ಆಶ್ರಯ ಪಡೆದರು. ಸಿಡಿಲಿನ‌ ಶಬ್ದಕ್ಕೆ ಸಾಕು ಪ್ರಾಣಿಗಳು ಹೆದರಿ ಓಡಿದವು.

ಕಳೆದ 15 ದಿನಗಳಿಂದ ಆಗಾಗ್ಗೆ ಮಳೆ ಬೀಳುತ್ತಿರುವುದರಿಂದ ರೈತರ ಮುಖದಲ್ಲಿ ನಗು ಮೂಡಲಾರಂಭಿಸಿದೆ.

ಕೆದಕಲ್, ಮಾದಾಪುರ, ಹರದೂರು, ನಾಕೂರು, ಅಂದಗೋವೆ, ಕಂಬಿಬಾಣೆ, ಉಪ್ಪುತೋಡು, ಕೊಡಗರಹಳ್ಳಿ, ಮತ್ತಿಕಾಡು, ಹೋರೂರು, ಮಳೂರು ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿದೆ.

ಗುಡುಗುಸಹಿತ ಮಳೆ

ಗೋಣಿಕೊಪ್ಪಲು: ಪಟ್ಟಣದ ಸುತ್ತಮುತ್ತ ಸಂಜೆ 6ಕ್ಕೆಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಬೆಳಗಿನಿಂದ ಬಿಸಿಲಿನ ಧಗೆ ಇತ್ತು. ಸಂಜೆ ಮಳೆ ತಂಪೆರೆಯಿತು. ನಾಗರಹೊಳೆ ಅರಣ್ಯ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಭಾಗದಲ್ಲಿ ಜೋರು ಮಳೆ ಸುರಿದಿದೆ. ಇದರಿಂದ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ಮಡಿಕೇರಿಯಲ್ಲೂ ವರುಣ

ಮಡಿಕೇರಿ: ನಗರದಲ್ಲಿ ಒಂದು ಗಂಟೆ ಜೋರು ಮಳೆ ಸುರಿಯಿತು. ಚರಂಡಿಗಳು ಮಳೆಯ ನೀರಿನಿಂದ ತುಂಬಿ ಹರಿದವು.

ಉತ್ತಮ ಮಳೆ: ಕಾಫಿ ಬೆಳೆಗಾರರ ಹರ್ಷ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬುಧವಾರ ಸಂಜೆ ಬಿರುಗಾಳಿಸಹಿತ ಮಳೆಯಾಗಿದ್ದು, ಕಾಫಿ ಬೆಳೆಗಾರರಿಗೆ ಅನುಕೂಲವಾಗಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ತಾಲ್ಲೂಕಿನೆಲ್ಲೆಡೆ ಮಾರ್ಚ್‌ ಮೂರನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಹೂವು ಅರಳಿತ್ತು. ನಂತರದ ದಿನಗಳಲ್ಲೂ ಉತ್ತಮವಾಗಿ ಮಳೆ ಬೀಳುತ್ತಿದ್ದು, ಬೆಳೆಗಾರರು ಹರ್ಷಗೊಂಡಿದ್ದಾರೆ. ಕಾಫಿ ತೋಟಗಳಿಗೆ ಬ್ಯಾಕಿಂಗ್ ಮಳೆ ಸಿಕ್ಕಂತಾಗಿದೆ. ಮುಂದಿನ ಸಾಲಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.

ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಸಿದ್ಧತೆ ನಡೆದಿದೆ. ಮರ ಕಪಾತು, ಗಿಡ ಕಪಾತು ಸೇರಿದಂತೆ ತೋಟಗಳ ನಿರ್ವಹಣೆ ಕೆಲಸಗಳು ಪ್ರಾರಂಭವಾಗಿವೆ. ಶುಂಠಿ, ಜೋಳ ಸೇರಿದಂತೆ ತರಕಾರಿ ಬೆಳೆಗೂ ಹೆಚ್ಚಿನ ಸಹಕಾರಿಯಾಗಿದೆ.

ಬೇಳೂರು ಗ್ರಾಮದ ಬಳಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಡಿತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT