ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿ: ಡಿ.ಸಿ

ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ, ಕೊಡಗಿನಲ್ಲಿ ‘ಆರೇಂಜ್‌ ಅಲರ್ಟ್‌’
Last Updated 17 ಜುಲೈ 2019, 20:04 IST
ಅಕ್ಷರ ಗಾತ್ರ

ಮಡಿಕೇರಿ: ಭಾರತೀಯ ಹವಾಮಾನ ಇಲಾಖೆಯು ಜಿಲ್ಲೆಯಾದ್ಯಂತ ಜುಲೈ 18ರಿಂದ 22ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಮುನ್ಸೂಚನೆ ನೀಡಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಪಡೆಗಳಿಗೆ ಸನ್ನದ್ಧ ಆಗಿರುವಂತೆಯೂ ಸೂಚನೆ ನೀಡಲಾಗಿದೆ.

ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಮಂಗಳವಾರ ತುರ್ತುಸಭೆ ನಡೆಯಿತು. ಎನ್‌ಡಿಆರ್‌ಎಫ್ ತಂಡ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.

ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ‘ಜಿಲ್ಲೆಯಲ್ಲಿ ಐದು ‘ಆರೇಂಜ್ ಅಲರ್ಟ್’ ಘೋಷಿಸಲಾಗಿದ್ದು, 115ರಿಂದ 204 ಮಿ.ಮೀ ತನಕ ಮಳೆ ಬೀಳುವ ಸಾಧ್ಯತೆ ಇದೆ. ತುರ್ತು ಕಾರ್ಯ ನಿರ್ವಹಣೆಗೆ ಸನ್ನದ್ಧ ಆಗಿರುವಂತೆ ನಿರ್ದೇಶನ ನೀಡಲಾಗಿದೆ’ ಎಂದರು.

ಎಲ್ಲ ಇಲಾಖೆಯ ಅಧಿಕಾರಿಗಳು ಎನ್‌ಡಿಆರ್‌ಎಫ್ ತಂಡದ ಸಹಕಾರದೊಂದಿಗೆ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ರಕ್ಷಣೆ, ತೊಂದರೆಗೆ ಒಳಗಾದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಹಾಗೂ ಇತರೆ ರಕ್ಷಣಾ ಕಾರ್ಯ ನಡೆಸುವಂತೆ ಸೂಚನೆ ನೀಡಿದರು.

ಎನ್‌ಡಿಆರ್‌ಎಫ್‌ನ ನಿರೀಕ್ಷಕ ಅಮಿತ್ ಚೌಧರಿ ಮಾತನಾಡಿ, ‘ಮೇ 28ರಿಂದಲೇ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ತಂಡವು ವಿವಿಧ ಗ್ರಾಮಗಳಲ್ಲಿ ಹಾಗೂ ಕಳೆದ ಬಾರಿ ಅತಿವೃಷ್ಟಿ ಸಂಭವಿಸಿದ್ದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ. ಜತೆಗೆ, ಈಗಾಗಲೇ ಅಣಕು ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬುವಂಥ ಕೆಲಸ ಮಾಡಲಾಗಿದೆ’ ಎಂದು ಹೇಳಿದರು.

ಜುಲೈ 22ರ ನಂತರ ನೋಡಲ್ ಅಧಿಕಾರಿಗಳಿಗೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ, ಎನ್‌ಎಸ್‌ಎಸ್ ಹಾಗೂ ಎನ್‌.ಸಿ.ಸಿ ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ತರಬೇತಿ ನೀಡಲಾಗುವುದು. ಜತೆಗೆ, ಸಮುದಾಯ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್, ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ಸಿ.ಶಿವಕುಮಾರ್, ಯುನಿಸೆಫ್‌ನ ಸಮಾಲೋಚಕ ಪ್ರಭಾತ್ ಕಲ್ಕೂರ ಹಾಜರಿದ್ದರು.

ದಟ್ಟ ಮೋಡ ಕವಿದ ವಾತಾವರಣ: ಜಿಲ್ಲೆಯಲ್ಲಿ ಬುಧವಾರ ದಟ್ಟವಾದ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 4.27 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇದುವರೆಗೆ 711.58 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,199 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ 895 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 3,044 ಮಿ.ಮೀ ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 820 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,845 ಮಿ.ಮೀ ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ 419 ಮಿ.ಮೀ ಆಗಿದ್ದು, ಕಳೆದ ವರ್ಷ 1,709 ಮಿ.ಮೀ ಮಳೆಯಾಗಿತ್ತು.

ಹೋಬಳಿವಾರು: ಮಡಿಕೇರಿ ಕಸಬಾ 8, ಸಂಪಾಜೆ 11, ಭಾಗಮಂಡಲ 4, ವಿರಾಜಪೇಟೆ ಕಸಬಾ 4, ಹುದಿಕೇರಿ 13, ಶ್ರೀಮಂಗಲ 2, ಪೊನ್ನಂಪೇಟೆ 6, ಅಮ್ಮತ್ತಿ 5.50, ಬಾಳೆಲೆ 9, ಶಾಂತಳ್ಳಿ 1.20 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT