ಪ್ರವಾಹದಲ್ಲಿ ಮುಳುಗಿದ ಸೇತುವೆ, ಗದ್ದೆ
ಗೋಣಿಕೊಪ್ಪಲು: ಒಂದೂವರೆ ತಿಂಗಳಿನಿಂದ ಕೊಡಗಿನ ಗಡಿಭಾಗ ಬಾಳೆಲೆ, ನಿಟ್ಟೂರು ಭಾಗಕ್ಕೆ ನಿರಂತರವಾಗಿ ಮಳೆ ಬೀಳುತ್ತಿದೆ. ಸೋಮವಾರವೂ ಬೆಳಿಗ್ಗೆಯಿಂದಲೂ ನಿರಂತರವಾಗಿ ಮಳೆ ಸುರಿಯಿತು. ಇದರಿಂದ ಭಾಗದ ಮಲ್ಲೂರು ಸೇತುವೆ ಒಂದು ವಾರದಿಂದ ಎರಡನೇ ಬಾರಿಗೆ ನೀರಿನಲ್ಲಿ ಮುಳುಗಡೆಯಾಗಿದೆ.
ಲಕ್ಷ್ಮಣತೀರ್ಥ ನದಿಗೆ 50 ವವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಬಾಳೆಲೆ–ಮಲ್ಲೂರು ನಡುವಿನ ಸೇತುವೆಯು ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ.
ಸೇತುವೆ ನೀರಿನಲ್ಲಿ ಮುಳುಗಡೆಯಾದರೆ ಮಲ್ಲೂರು, ಕುಂಬಾರಕಟ್ಟೆ ಭಾಗದ ಜನರಿಗೆ ಬಾಳೆಲೆಗೆ ಬರಲು ಸಂಪರ್ಕವೇ ಇಲ್ಲದಂತಾಗುತ್ತದೆ. ಇದರಿಂದ ಬಾಳೆಲೆ ಶಾಲಾ–ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.
ಕಳೆದ ವರ್ಷ ಶಾಸಕ ಕೆ.ಜಿ. ಬೋಪಯ್ಯ ಅವರು ಸ್ಥಳ ಪರಿಶೀಲನೆ ನಡೆಸಿ ಸೇತುವೆ ಮಟ್ಟವನ್ನು ಎತ್ತರಿಸುವ ಭರವಸೆ ನೀಡಿದ್ದರು. ಆದರೆ, ಅದು ಅನುಷ್ಠಾನಗೊಂಡಿಲ್ಲ. ಪ್ರವಾಹದಿಂದ ನದಿ ಬಯಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.
ಲಕ್ಷ್ಮಣತೀರ್ಥ ನದಿ ನಿರಿನ ಪ್ರವಾಹದಿಂದ ಕೊಟ್ಟಗೇರಿ, ನಿಟ್ಟೂರು ಬಾಳೆಲೆ ನಡುವಿನ ನದಿಬಯಲಿನ ಗದ್ದೆಗಳು ಜಲಾವೃತಗೊಂಡಿವೆ. ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಭಾರಿ ಮಳೆಗೆ 15 ದಿನಗಳ ಕಾಲ ಈ ಭಾಗದ ಗದ್ದೆಗಳು ಹಾಗೂ ಸೇತುವೆಗಳು ಮುಳುಗಿದ್ದವು. ಇದೀಗ ಸೆಪ್ಟೆಂಬರ್ ಮೊದಲ ವಾರದಲ್ಲಿಯೂ ಮತ್ತೆ ಎರಡನೇ ಬಾರಿಗೆ ಜಲಾವೃತಗೊಂಡಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.