ಶುಕ್ರವಾರ, ಆಗಸ್ಟ್ 23, 2019
22 °C
ಮಳೆ, ಪ್ರವಾಹ ತಂದ ಅವಾಂತರ, ₹ 579 ಕೋಟಿ ನಷ್ಟದ ಅಂದಾಜು, ಇನ್ನೂ ಹೆಚ್ಚಾಗುವ ಸಾಧ್ಯತೆ

ಕೊಡಗು: 1.18 ಲಕ್ಷ ಹೆಕ್ಟೇರ್‌ ಬೆಳೆ ಮಣ್ಣುಪಾಲು

Published:
Updated:
Prajavani

ಮಡಿಕೇರಿ: ಕೊಡಗಿನಲ್ಲಿ ಅತಿವೃಷ್ಟಿಯಿಂದ 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ಮಣ್ಣು ಪಾಲಾಗಿದ್ದು ರೈತರು ಮತ್ತೆ ನಷ್ಟಕ್ಕೆ ತುತ್ತಾಗಿದ್ದಾರೆ.

ಮೂಲಸೌಲಭ್ಯ, ಬೆಳೆಹಾನಿ ಹಾಗೂ ಮನೆ ಕುಸಿತದಿಂದ ಅಪಾರ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನಂತೆ ₹ 579 ಕೋಟಿಯಷ್ಟು ನಷ್ಟ ಸಂಭವಿಸಿದೆ. ‘ಇದು ತುರ್ತಾಗಿ ನಡೆದ ಸರ್ವೆ; ನಷ್ಟವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬೆಳೆಹಾನಿ ವಿವರ: ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ನಷ್ಟವಾಗಿದ್ದು ಕೃಷಿಕರಿಗೆ ಮಳೆ ಬರೆ ಎಳೆದಿದೆ. 3,623 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿದ್ದು, ₹ 4.52 ಕೋಟಿಯಷ್ಟು ನಷ್ಟವಾಗಿದೆ. 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ನಾಶವಾಗಿದ್ದು ಅಂದಾಜು ₹ 51.85 ಕೋಟಿ ನಷ್ಟವಾಗಿದೆ. 6,350 ಹೆಕ್ಟೇರ್‌ ಪ್ರದೇಶದಲ್ಲಿ ಕಾಳು ಮೆಣಸು ಬೆಳೆ ನೆಲಕಚ್ಚಿದ್ದು ₹ 66.65 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಅದೇ ರೀತಿ, 40 ಹೆಕ್ಟೇರ್‌ನಲ್ಲಿ ಜೋಳ, 1,579 ಹೆಕ್ಟೇರ್‌ನಲ್ಲಿ ಅಡಿಕೆ, 904 ಹೆಕ್ಟೇರ್‌ ಶುಂಠಿ, 2,241 ಹೆಕ್ಟೇರ್‌ನಲ್ಲಿ ಬಾಳೆ, 1,806 ಹೆಕ್ಟೇರ್‌ ಏಲಕ್ಕಿ, 380 ಹೆಕ್ಟೇರ್‌ನಲ್ಲಿ ವಿವಿಧ ತರಕಾರಿ ಬೆಳೆ, 18 ಹೆಕ್ಟೇರ್‌ನಲ್ಲಿ ಮಾಡಿದ್ದ ಮೀನುಗಾರಿಕೆ ಕೃಷಿಗೆ ಹಾನಿಯಾಗಿದೆ. ಒಟ್ಟು 1,18,975 ಹೆಕ್ಟೇರ್‌ ‍ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯು ಅತಿವೃಷ್ಟಿಯಿಂದ ಹಾನಿಗೀಡಾಗಿದ್ದು ₹ 266.52 ಕೋಟಿಯಷ್ಟು ಫಸಲು ನಷ್ಟವಾಗಿದೆ. 

ಮೂಲಸೌಲಭ್ಯಕ್ಕೂ ಹಾನಿ: ಪ್ರವಾಹದಿಂದ ರಸ್ತೆ, ಸರ್ಕಾರಿ ಕಟ್ಟಡ, ಕೆರೆ ಹಾಗೂ ಮೋರಿಗೂ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿ 81 ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಎಂಜಿನಿಯರಿಂಗ್‌ ವಿಭಾಗದ 786 ಕಾಮಗಾರಿ, ನೀರು ‍ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ 131 ಕಾಮಗಾರಿ, ಸಣ್ಣ ನೀರಾವರಿ ಇಲಾಖೆ 27 ಕಾಮಗಾರಿ, ಸೆಸ್ಕ್‌ನ 1,467 ಕಾಮಗಾರಿ, ನಗರಾಭಿವೃದ್ಧಿ ಇಲಾಖೆಯ 223 ಕಾಮಗಾರಿ, ಪಿಎಂಜಿಎಸ್‌ವೈನ 15 ಕಾಮಗಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ 32 ಸ್ಥಳಗಳಲ್ಲಿ ಭೂಕುಸಿತ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1 ಕಾಮಗಾರಿಗೆ ಹಾನಿಯಾಗಿದೆ.

ಒಟ್ಟು 3,020 ಕಾಮಗಾರಿಗಳಿಗೆ ಹಾನಿಯಾಗಿದ್ದು, ₹ 305.91 ಕೋಟಿಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮೀಣ ರಸ್ತೆಗಳೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೆ ತುತ್ತಾಗಿವೆ.  

Post Comments (+)