ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ನಲ್ಲಿ ಪ್ರಜ್ಜು ಸದ್ದು

Last Updated 31 ಮೇ 2018, 19:30 IST
ಅಕ್ಷರ ಗಾತ್ರ

‘ಕನ್ನಡದ ನಟಿಯರು ಪ್ರತಿಭಾವಂತರು. ಬಹುಬೇಗ ಸ್ಥಳೀಯ ಭಾಷೆ ಗ್ರಹಿಸುತ್ತಾರೆಂಬ ವಿಶ್ವಾಸವಿದೆ. ಹಾಗಾಗಿ ಟಾಲಿವುಡ್‌, ಕಾಲಿವುಡ್‌ನಲ್ಲಿ ಅವಕಾಶದ ಹೆಬ್ಬಾಗಿಲು ತೆರೆದಿದೆ. ಅಲ್ಲಿ ಒಳ್ಳೆಯ ಗೌರವವೂ ಸಿಗುತ್ತಿದೆ. ಚಂದನವನದಲ್ಲಿಯೂ ಅವಕಾಶಗಳಿಗೆ ಕೊರತೆಯಿಲ್ಲ. ಆದರೆ, ಪರಭಾಷೆಯ ಒಳ್ಳೆಯ ಚಿತ್ರಗಳಲ್ಲಿ ನಟಿಸಲು ಅವಕಾಶ ದೊರೆತಾಗ ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಅನಿವಾರ್ಯವೂ ಹೌದು’

ಇಷ್ಟನ್ನು ಹೇಳಿ ಚಂದದ ನಗು ಚೆಲ್ಲಿದರು ನಟಿ ಪ್ರಜ್ಜು ಪೂವಯ್ಯ. ಅವರ ಈ ಸ್ಪಷ್ಟನೆಗೆ ಕಾರಣವೂ ಇತ್ತು. ದಾಸರಿ ನಾರಾಯಣ್‌ ನಿರ್ದೇಶನದ ತೆಲುಗಿನ ‘ಹೆಲ್ಪ್‌ಲೈನ್’ ಚಿತ್ರದಲ್ಲಿ ಅವರು ನಟಿಸಿದ್ದರು. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರ.

ಈಗ ‘ಪ್ರೇಮ ಅಂತಾ ಈಸಿ ಕಾದು’ ಚಿತ್ರದ ಮೂಲಕ ಮತ್ತೆ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದು ಪ್ರೀತಿ, ಪ್ರೇಮ ಸಮ್ಮಿಳಿತಗೊಂಡಿರುವ ಕಥಾವಸ್ತು ಹೊಂದಿರುವ ಸಿನಿಮಾ. ತೆಲುಗಿನ ನಟ ರಾಜೇಶ್‌ ಈ ಚಿತ್ರದ ನಾಯಕ.

ಖ್ಯಾತ ನಿರ್ದೇಶಕ ರಾಜಮೌಳಿ ಅವರ ಗರಡಿಯಲ್ಲಿ ಪಳಗಿರುವ ಈಶ್ವರ್‌ ಈ ಸಿನಿಮಾದ ನಿರ್ದೇಶಕ. ‘ಶೀಘ್ರವೇ, ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. ಆ ಬಳಿಕ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ ಅವರು.

ಪ್ರಜ್ಜು ಪೂವಯ್ಯ

ಪ್ರಜ್ಜು ಹುಟ್ಟಿದ್ದು ಕೊಡಗಿನಲ್ಲಿ. ಆದರೆ, ಶಿಕ್ಷಣ ಪೂರೈಸಿದ್ದು ಮಂಗಳೂರಿನಲ್ಲಿ. ಅವರ ತಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿ. ತಾಯಿ ಗೃಹಿಣಿ. ಪ್ರಜ್ಜು ಮೊದಲಿಗೆ ಬಣ್ಣ ಹಚ್ಚಿದ್ದು ಹದಿನಾಲ್ಕನೇ ವಯಸ್ಸಿಗೆ. ನಂದಿನಿ ಹಾಲಿನ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅವರು ನಟನೆಯ ಗೀಳು ಹಚ್ಚಿಕೊಂಡರು.

ನಟನೆಯ ಪಾಠ ಕಲಿಯಲು ಮುಂಬೈಗೂ ಹಾರಿದರು. ಅಲ್ಲಿನ ಸುಭಾಷ್‌ ಘಾಯ್‌ ಅವರ ಶಾಲೆಯಲ್ಲಿ ನಟನೆಯ ಪಟ್ಟು ಕಲಿತರು. ಬಳಿಕ ಗಾಂಧಿನಗರದಲ್ಲಿ ಸಿಕ್ಕಿದ ಅವಕಾಶ ಬಳಸಿಕೊಂಡು ಒಂದೊಂದೇ ಮೆಟ್ಟಿಲು ಏರಿದರು. ‘ಪಾತರಗಿತ್ತಿ’, ‘ಅಸ್ತಿತ್ವ’ ಸೇರಿದಂತೆ ಏಳು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಅವರು ನಟಿಸಿರುವ ‘ಆದರ್ಶ’ ಚಿತ್ರ ಈ ವಾರ(ಜೂನ್ 1ರಂದು) ತೆರೆಕಾಣುತ್ತಿದೆ. ಇದರಲ್ಲಿ ಅವರದು ಕಾಲೇಜು ಹುಡುಗಿಯ ಪಾತ್ರ. ‘ಈ ಚಿತ್ರದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿಲ್ಲ. ಸಿಂ‍ಪಲ್‌ ಆಗಿರುವ ಕಾಲೇಜು ಹುಡುಗಿಯ ಪಾತ್ರ. ಈ ಪಾತ್ರಕ್ಕಾಗಿ ಐದು ಕೆ.ಜಿ. ತೂಕ ಕೂಡ ಹೆಚ್ಚಿಸಿಕೊಂಡಿದ್ದೆ. ಚಿತ್ರೀಕರಣ ನನ್ನ ಕಾಲೇಜಿನ ದಿನಗಳನ್ನು ನೆನಪಿಸಿತು’ ಎನ್ನುತ್ತಾರೆ ಅವರು.

ಪ್ರಜ್ಜು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಕೂಡ ಪೂರೈಸಿದ್ದಾರೆ. ಉದ್ಯೋಗಕ್ಕಾಗಿ ಖಾಸಗಿ ಕಂಪನಿಗಳತ್ತ ಮುಖ ಮಾಡಲು ಅವರಿಗೆ ಮನಸ್ಸಿಲ್ಲ. ಈಗ ನಟನೆಯೇ ಅವರ ವೃತ್ತಿ. ಜೊತೆಗೆ, ಮಾಡೆಲಿಂಗ್‌ನಲ್ಲೂ ಅವರು ಬ್ಯುಸಿ. ಕನ್ನಡದಲ್ಲಿಯೇ ಗಟ್ಟಿಯಾಗಿ ನೆಲೆಯೂರುವ ಆಸೆ ಅವರದು.

‘ಸವಾಲಿನ ಪಾತ್ರಗಳೆಂದರೆ ನನಗೆ ಇಷ್ಟ. ಅದರಲ್ಲೂ ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಆಸೆಯಿದೆ. ಅಂತಹ ಚಿತ್ರಗಳಲ್ಲಿ ನಟಿಸಲು ಅವಕಾಶ ಲಭಿಸಿದರೆ ಖಂಡಿತ ತಿರಸ್ಕರಿಸಲಾರೆ. ಅದೇ ಮಾದರಿಯ ಚಿತ್ರಗಳಿಗೆ ಸೀಮಿತವಾಗುವುದಿಲ್ಲ. ಎಲ್ಲ ತರಹದ ಪಾತ್ರಗಳಲ್ಲೂ ನಟಿಸಲು ಸಿದ್ಧ’ ಎನ್ನುತ್ತಾರೆ ಅವರು.

ದಶಕದ ಹಿಂದೆ ಗಾಂಧಿನಗರದಲ್ಲಿ ಮುಂಬೈ ಬೆಡಗಿಯರ ಹೆಜ್ಜೆ ಸಪ್ಪಳ ಜೋರಿತ್ತು. ಪರಭಾಷೆಯ ನಟಿ ಮಣಿಗಳಿಗೆ ಅವರು ಕೇಳಿದಷ್ಟು ಸಂಭಾವನೆ ನೀಡಿ ಕನ್ನಡದಲ್ಲಿ ನಟನೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈಗ ಚಿತ್ರಣ ಬದಲಾಗಿದೆ. ಕನ್ನಡದ ನಟಿಯರು ತೆಲುಗು, ತಮಿಳು, ಮಲಯಾಳ ಚಿತ್ರರಂಗಕ್ಕೆ ಲಗ್ಗೆ ಇಟ್ಟಿರುವುದು ಪ್ರಜ್ಜು ಅವರಿಗೆ ಖುಷಿ ಕೊಟ್ಟಿದೆಯಂತೆ.

‘ನಾವು ಕನ್ನಡದಲ್ಲಿ ಲಭಿಸಿದ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇಲ್ಲಿನ ಚಿತ್ರಗಳಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿಯೇ ಪರಭಾಷೆಗಳಿಂದ ಅವಕಾಶಗಳು ಬರುತ್ತವೆ. ಈ ಅವಕಾಶವನ್ನು ತಿರಸ್ಕರಿಸಬಾರದು. ಇದು ನಟಿಯರ ವೃತ್ತಿಜೀವನದ ಏಳಿಗೆಗೂ ಸಹಕಾರಿ. ಮುಂಬೈ ಹುಡುಗಿಯರಿಗಿಂತ ಕನ್ನಡದ ನಟಿಯರು ನಟನೆಯಲ್ಲಿ ಮುಂದಿರುವುದು ಸಂತಸದ ಸಂಗತಿ’ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT