ಮಳೆ ನಿಂತರೂ ಇಳಿಯದ ಪ್ರವಾಹ

7

ಮಳೆ ನಿಂತರೂ ಇಳಿಯದ ಪ್ರವಾಹ

Published:
Updated:
Deccan Herald

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆ ಇಳಿಮುಖವಾಗಿದ್ದರೂ ಕೆಲ ಪ್ರದೇಶಗಳಲ್ಲಿ ನೀರು ಇಳಿಯದಿರುವುದರಿಂದ ಸಮಸ್ಯೆ ಹಾಗೆಯೇ ಮುಂದುವರಿದಿದೆ.

ಕೆಲವು ದಿನಗಳಿಂದ ಸುರಿದಿದ್ದ ಭಾರಿ ಮಳೆಯು ಶನಿವಾರ ಬಿಡುವು ನೀಡಿದೆ. ಇದರಿಂದ ಭಯಭೀತರಾಗಿದ್ದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತಾಲ್ಲೂಕಿನ ಬೇತ್ರಿಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಮೀರಿ ಹರಿದು ಹೆಮ್ಮಾಡು ಗ್ರಾಮ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದೀಗ ಮಳೆ ಇಳಿಮುಖಗೊಂಡು ಕಾವೇರಿ ನದಿಯ ನೀರಿನ ಮಟ್ಟ ಇಳಿಮುಖಗೊಂಡಿದ್ದರೂ ಹೆಮ್ಮಾಡು ಗ್ರಾಮದಲ್ಲಿ ಶನಿವಾರವೂ ದ್ವೀಪದ ಸ್ಥಿತಿಯಲ್ಲಿಯೇ ಇತ್ತು.

ಗ್ರಾಮದಲ್ಲಿನ ಮಸೀದಿ ರಸ್ತೆ ಸೇರಿದಂತೆ ಸುಮಾರು 50 ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಮಹಿಳೆಯರು ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ಸಾಗಿಸುವಲ್ಲಿ ಸ್ಥಳೀಯ ಯುವಕರ ತಂಡ ನಿರಂತರ ಶ್ರಮ ವಹಿಸಿದೆ. ಕೇವಲ ತೆಪ್ಪವೊಂದರ ಸಹಾಯದಿಂದ ಊರಿನ ಯುವಕರ ತಂಡವೊಂದು ಹಗಲಿರುಳೆನ್ನದೆ ಜನರನ್ನು ಸಾಗಿಸುವುದರೊಂದಿಗೆ ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ನೀಡುವಲ್ಲಿ ನೆರವಾಗಿದೆ. 

ಗ್ರಾಮವನ್ನು ಆವರಿಸಿರುವ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಶನಿವಾರವೂ ಸಂಪೂರ್ಣ ಇಳಿಕೆಯಾಗಿಲ್ಲ. ಕಳೆದ 2 ದಿನಗಳಿಂದ ಮುಳುಗಡೆಯಾಗಿದ್ದ ಬೇತ್ರಿಯಲ್ಲಿನ ವಿರಾಜಪೇಟೆ–ಮಡಿಕೇರಿ ಹೆದ್ದಾರಿಯಲ್ಲಿನ ಕಾವೇರಿ ಹೊಳೆಯ ಸೇತುವೆ ಬಳಿ ನೀರಿನ ಮಟ್ಟ ಕಡಿಮೆಯಾಗಿದೆ. ಜತೆಗೆ ಮಳುಗಡೆಯಾಗಿದ್ದ ಬೇತ್ರಿ ಸಮೀಪದಲ್ಲಿನ ಮತ್ತೊಂದು ಸೇತುವೆಯಲ್ಲಿಯೂ ನೀರಿನ ಮಟ್ಟ ಇಳಿಮುಖಗೊಂಡಿದೆ. ಆದರೆ ಪ್ರವಾಹದ ನೀರಿನ ಹೊಡೆತಕ್ಕೆ ರಸ್ತೆಯು ಸಾಕಷ್ಟು ಹಾನಿಗೀಡಾಗಿದೆ. ಇದರಿಂದ ವಾಹನ ಸಂಚಾರದ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.

ಪಟ್ಟಣದ ನೆಹರು ನಗರದಲ್ಲಿ ಕೆಲವು ಮನೆಗಳು ಭಾಗಶಃ ಕುಸಿದಿದ್ದರೆ, ಮತ್ತೆ ಕೆಲವು ಮನೆಗಳು ಕುಸಿಯುವ ಆತಂಕ ಎದುರಾಗಿದೆ. ಜತೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಪಟ್ಟಣ ಪಂಚಾಯಿತಿಯು ನೆಹರು ನಗರದ ಸುಮಾರು 30 ಮಂದಿಯನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಿದೆ.

‘ಪರಿಸ್ಥಿತಿ ಹೀಗೇ ಮುಂದುವರಿದರೆ ಮಕ್ಕಳ ವಿದ್ಯಾಭ್ಯಾಸ, ನಮ್ಮ ಭವಿಷ್ಯ ಎತ್ತ ಸಾಗುವುದೋ ತಿಳಿಯದಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿ ಸಹಾಯ ಹಸ್ತ ಚಾಚುವುದೋ ತಿಳಿದಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ತಾತ್ಕಾಲಿಕ ಪರಿಹಾರ ನೀಡಿ ಕೈತೊಳೆದುಕೊಳ್ಳುವುದೋ’ ಎಂದು ಆತಂಕ ವ್ಯಕ್ತಪಡಿಸಿದರು ಗಂಜಿಕೇಂದ್ರದಲ್ಲಿರುವ ಸಂತ್ರಸ್ತರು.

ಪಟ್ಟಣದ ಸುಂಕದ ಕಟ್ಟೆಯ ವ್ಯಾಪ್ತಿಯಲ್ಲಿಯೂ ಕೆಲವು ಮನೆಗಳು ಭಾಗಶಃ ಕುಸಿದಿದ್ದು ಸುಂಕದಕಟ್ಟೆಯಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮ ಕುಮಾರ್‌ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !