ಬದಲಿ ಮಾರ್ಗದಲ್ಲೂ ತಪ್ಪದ ತಾಪತ್ರಯ!

7
ಸಂಪಾಜೆ, ಕುಶಾಲನಗರದ ನಡುವೆ ಸೆ.29ರ ತನಕ ಭಾರಿ ವಾಹನಗಳ ಸಂಚಾರಕ್ಕಿಲ್ಲ ಅವಕಾಶ

ಬದಲಿ ಮಾರ್ಗದಲ್ಲೂ ತಪ್ಪದ ತಾಪತ್ರಯ!

Published:
Updated:
Deccan Herald

ಮಡಿಕೇರಿ: ಮಡಿಕೇರಿ– ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂಕುಸಿತ ಉಂಟಾಗಿದ್ದು ವಿರಾಜಪೇಟೆ ರಸ್ತೆಯ ಮೇಕೇರಿ ಮೂಲಕ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಸರಕು ಸಾಗಣೆಯ ಭಾರಿ ಮಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗದಲ್ಲಿ ಅಡುಗೆ ಅನಿಲ, ಹಾಲು ಹಾಗೂ ಇಂಧನ ಪೂರೈಕೆ ವಾಹನ ಹಾಗೂ ಶಾಲಾ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಬದಲಿ ಮಾರ್ಗ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಗಂಟೆಗಟ್ಟಲೆ ಟ್ರಾಫಿಕ್‌ ಕಿರಿಕಿರಿ ಅನುಭವಿಸುವಂತಾಗಿದೆ. ಮೊದಲ ದಿನವೇ ಕೆಟ್ಟ ಪರಿಸ್ಥಿತಿ ಎದುರಾಗಿದ್ದು ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

ಮೇಕೇರಿ– ತಾಳತ್ತಮನೆ ಸಂಪರ್ಕದ ಸುಮಾರು 4 ಕಿ.ಮೀ ರಸ್ತೆ ತಂಬಾ ಇಕ್ಕಟ್ಟಾಗಿದೆ. ತಿರುವುಗಳೇ ಹೆಚ್ಚಾಗಿರುವ ಮಾರ್ಗದಲ್ಲಿ ಲಾರಿ ಹಾಗೂ ಬಸ್‌ಗಳು ನಿಂತು, ತೊಂದರೆಗೀಡಾದವು.

‘ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ಮೊದಲ ದಿನ ರಾಜಹಂಸ, ಐರಾವತ ಬಸ್‌ಗಳು ಮತ್ತು ಖಾಸಗಿ ಲಕ್ಸುರಿ ಬಸ್‌ಗಳು ರಸ್ತೆ ತಿರುವುಗಳಲ್ಲಿ ನಿಂತಿದ್ದವು. ಬಸ್‌ವೊಂದು ರಸ್ತೆ ಮಧ್ಯದಲ್ಲಿಯೇ ಒಂದು ಗಂಟೆ ನಿಂತಿತ್ತು. ಈ ಬಾರಿ ಸುರಿದ ಭಾರಿ ಮಳೆಗೆ ತಾಳತ್ತಮನೆ ರಸ್ತೆಯೂ ಸಂಪೂರ್ಣ ಹಾಳಾಗಿದೆ. ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಮೇಕೇರಿ ಭಾಗದ ರಸ್ತೆಗಳು ಈ ಮೊದಲೇ ಹಾಳಾಗಿತ್ತು, ಇನ್ನು ಈ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಇನ್ನಷ್ಟು ಸಮಸ್ಯೆಗಳು ಆಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದರು ಮೇಕೇರಿ ನಿವಾಸಿ ಮಂಜೇಶ್‌.

ಎರಡು ಕಡೆ ಗೇಟ್: ಜಿಲ್ಲಾಧಿಕಾರಿ ಆದೇಶದಂತೆ ಪೊಲೀಸರು ಕಾರ್ಯ ಪ್ರವೃತರಾಗಿದ್ದು, ಭಾಗಮಂಡಲ ಹಾಗೂ ಮಡಿಕೇರಿಯ ಜಿಟಿ ವೃತ್ತದಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ರಸ್ತೆ ಕುಸಿತ ಆಗಿರುವ ಸ್ಥಳದಲ್ಲಿ ಮರಳಿನ ಚೀಲಗಳನ್ನು ಅಡ್ಡ ಇಡಲಾಗಿದೆ.

ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮುನ್ನೆಚ್ಚರಿಕೆ ಹಾಗೂ ದುರಸ್ತಿ ಕಾರ್ಯ ನಿಮಿತ್ತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸುವುದರೊಂದಿಗೆ ಬದಲಿ ಮಾರ್ಗ ವ್ಯವಸ್ಥೆ ಕೈಗೊಳ್ಳಲಾಗಿದೆ. ತಾತ್ಕಾಲಿಕ ಸಂಚಾರ ಯೋಗ್ಯ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಡಿಕೇರಿ – ಸಂಪಾಜೆ ನಡುವೆ ಸಂಚರಿಸುವ ಎಲ್ಲ ವಾಹನಗಳು ವಿರಾಜಪೇಟೆ ರಸ್ತೆಯ ಮೇಕೇರಿ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !