ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ: ಕುಶಾಲನಗರದಲ್ಲಿ ಬೀದಿಬದಿ ವ್ಯಾಪಾರಿಗಳ ಪರದಾಟ

Last Updated 17 ಏಪ್ರಿಲ್ 2021, 8:52 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಸಾಧಾರಣ ಮಳೆ ಸುರಿಯಿತು.

ಮಧ್ಯಾಹ್ನ ಎರಡು ಗಂಟೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಸಂಜೆ ಆರು ಗಂಟೆಗೆ ತುಂತುರು ಹನಿಗಳಿಂದ ಆರಂಭಗೊಂಡ ಮಳೆ, ಅರ್ಧ ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು.

ದಿಢೀರ್‌ ಸುರಿದ ಮಳೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಅಕ್ಕಪಕ್ಕದ ಅಂಗಡಿಗಳ ಮೊರೆ ಹೋದರು. ಮಳೆಯಿಂದಾಗಿ ಜನರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಯಿತು.

ಗುಡ್ಡೆಹೊಸೂರು, ನಂಜರಾಯ ಪಟ್ಟಣ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗ ಪುರ ಗ್ರಾಮಗಳಲ್ಲಿ ಕೆಲಕಾಲ ಜೋರಾಗಿ ಮಳೆ ಸುರಿಯಿತು.

ಶನಿವಾರಸಂತೆ ವರದಿ

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿ ಹಾಗೂ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು.

ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ಆರಂಭವಾದ ಮಳೆ ಸಾಧಾರಣವಾಗಿ ಸುರಿಯಿತು. ಪಟ್ಟಣದಲ್ಲಿ 7 ಸೆಂಟ್, ಕಾಜೂರು, ದುಂಡಳ್ಳಿ, ಮಾದ್ರೆ, ಬಿಳಾಹ, ಅಪ್ಪಶೆಟ್ಟಳ್ಳಿ ಗ್ರಾಮಗಳಲ್ಲಿ 15 ರಿಂದ 20 ಸೆಂಟ್ ಮಳೆಯಾಗಿದೆ.

‘ಈಗ ಮಳೆಯ ಅಗತ್ಯವಿತ್ತು. ಒಂದೆರೆಡು ಇಂಚು ಮಳೆ ಬೀಳಬೇಕು, ಭೂಮಿ ಹದವಾಗಬೇಕು. ಕಾಫಿ, ಕಾಳುಮೆಣಸು, ಶುಂಠಿ, ಹಸಿರು ಮೆಣಸಿನಕಾಯಿಗೆ ಒಳ್ಳೆಯದು. ತುಂತುರಾಗಿ ಸುರಿದರೆ ಮರುದಿನ ಮತ್ತೆ ಭೂಮಿ ಒಣಗುತ್ತದೆ. ರೊಬಸ್ಟಾ ಕಾಫಿ ಹೂ ಅರಳುವುದಿಲ್ಲ’ ಎಂದು ದೊಡ್ಡಬಿಳಾಹ ಗ್ರಾಮದ ಪ್ರಗತಿಪರ ರೈತ ಬಿ.ಎಂ.ಪ್ರಕಾಶ್ ಹೇಳುತ್ತಾರೆ.

ನಾಪೋಕ್ಲು: ಬಿರುಸಿನ ಮಳೆ

ನಾಪೋಕ್ಲು: ಶುಕ್ರವಾರ ಮಧ್ಯಾಹ್ನ ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ ಸುರಿದಿದೆ.

ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಮಳೆ ಸುಮಾರು ಮುಕ್ಕಾಲು ಗಂಟೆ ಸುರಿಯಿತು. ಇಲ್ಲಿಗೆ ಸಮೀಪದ ಬೇತು ಗ್ರಾಮ ವ್ಯಾಪ್ತಿಯಲ್ಲಿ 35 ಮಿ.ಮೀ ಮಳೆ ಸುರಿದಿದೆ. ದಿಢೀರ್‌ ಸುರಿದ ಮಳೆಗೆ ಗ್ರಾಮೀಣ ಪ್ರದೇಶಗಳ ಮನೆಯಂಗಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿಕೊಂಡು ಜನರು ಸಮಸ್ಯೆ ಎದುರಿಸುವಂತಾಯಿತು.

ಶೌಚಾಲಯಕ್ಕೆ ಹಾನಿ: ಸಮೀಪದ ಯವಕಪಾಡಿ ಗ್ರಾಮದಲ್ಲಿ ಬಿರುಸಿನ ಮಳೆ ಸುರಿದಿದೆ. ಇಲ್ಲಿನ ನಿವಾಸಿ ಕುಡಿಯರ ಗಣೇಶ್ ಎಂಬುವವರ ಶೌಚಾಲಯದ ಶೀಟ್‌ಗಳ ಮೇಲೆ ಬೆಟ್ಟದಿಂದ ದೊಡ್ಡ ಗಾತ್ರದ ಕಲ್ಲೊಂದು ಉರುಳಿ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ತೆರಳಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಪಿಡಿಒ ಗಮನಕ್ಕೆ ತರಲಾಗಿದ್ದು, ಪಂಚಾಯಿತಿ ವತಿಯಿಂದ ತಾತ್ಕಾಲಿಕ ಪರಿಹಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT