ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಂಗಿ ಜಲಾಶಯ: ಮಳೆಗಾಲ ಆರಂಭ, ಕೊಡಗು ಜನರ ಆತಂಕ

ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹ, ಬಹುಬೇಗ ಭರ್ತಿಯಾಗುವ ಸಾಧ್ಯತೆ
Last Updated 28 ಮೇ 2022, 4:07 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಈ ವರ್ಷ ಭರ್ಜರಿ ಮುಂಗಾರು ಪೂರ್ವ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಎಲ್ಲೆಲ್ಲೂ ಹಸಿರು ಉಕ್ಕುತ್ತಿದೆ. ಅರಣ್ಯ ಪ್ರದೇಶದಲ್ಲೂ ಹಸಿರು ನಳನಳಿಸುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗೂ ತೊಂದರೆ ಆಗಿಲ್ಲ.

ಇನ್ನೇನು ಮತ್ತೊಂದು ‘ಮಳೆಗಾಲ’ ಆರಂಭವಾಗಲು ಕೆಲವು ದಿನಗಳು ಬಾಕಿಯಿದೆ. ಈ ವರ್ಷದ ಮಳೆಗಾಲ ಹೇಗಿರಲಿದೆ ಎಂಬ ಆತಂಕದ ನುಡಿಗಳು ಕೇಳಿಬರುತ್ತಿವೆ. 2018ರಿಂದ ಸತತ ಮೂರು ವರ್ಷ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದ ಕಾರಣಕ್ಕೆ ಈ ಆತಂಕ ಎಲ್ಲೆಡೆಯಿದೆ.

ಮುಂಗಾರು ಪೂರ್ವ ಮಳೆಯು ಮೇನಲ್ಲಿಯೇ ಅಬ್ಬರಿಸಿದರೆ ಸಹಜವಾಗಿ ಮುಂಗಾರು ಮಳೆ ವಿಳಂಬವಾಗಲಿದೆ ಎಂಬುದು ಹಿರಿಯರ ಅಭಿಪ್ರಾಯ. ಆದರೆ, 2018ರಲ್ಲಿ ಪ್ರಾಕೃತಿಕ ವಿಕೋಪದ ಸಂಭವಿಸಿದ್ದ ವರ್ಷದಲ್ಲಿ ಏಪ್ರಿಲ್‌ ಹಾಗೂ ಮೇನಲ್ಲಿಯೇ ಭಾರಿ ಮಳೆ ಸುರಿದಿತ್ತು. ಈ ವರ್ಷವೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.

ಹೋಬಳಿವಾರು ನೋಡಲ್‌ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನದಿ ಪಾತ್ರ ಹಾಗೂ ಸೂಕ್ಷ್ಮ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆಯಾಗಿ ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭವಾಗಿವೆ.

ಈ ವರ್ಷ ಮಹಾ ಮಳೆ ಸುರಿದು ಅನಾಹುತ ಸಂಭವಿಸಿದರೆ ಜನ ಹಾಗೂ ಜಾನುವಾರು ರಕ್ಷಣೆಗೆ ಅನುಕೂಲವಾಗಲೆಂದು ಹಾರಂಗಿ ಹಿನ್ನೀರಿನಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯದ ತಾಲೀಮು ನಡೆಸಿದ್ದಾರೆ.

ಬುಧವಾರದ ವೇಳೆಗೆ ಎನ್‌ಡಿಆರ್‌ಎಫ್‌ನ ಒಂದು ತಂಡವು ಮಡಿಕೇರಿಗೆ ಆಗಮಿಸಲಿದೆ. ರಕ್ಷಣಾ ಸಾಮಗ್ರಿಗಳು ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ರ್‍ಯಾಫ್ಟರ್‌ಗಳನ್ನು ಸಜ್ಜು ಮಾಡಿಕೊಳ್ಳಲಾಗಿದೆ. ದುಬಾರಿಯ ರ್‍ಯಾಫ್ಟಿಂಗ್‌ ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ.

ಮಳೆ ಎಷ್ಟು?: ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಸರಾಸರಿ 42.9 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 44.4 ಸೆಂ.ಮೀ ಮಳೆಯಾಗಿತ್ತು. ಸರಾಸರಿ 2 ಸೆಂ.ಮೀ.ನಷ್ಟು ಮಳೆ ಕಡಿಮೆಯಾದರೂ ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ ಭಾಗದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆ ಸುರಿದಿದೆ.

ಕಳೆದ ವಾರ ನಿರಂತರ ಮಳೆಯಿಂದ ಕಾಫಿ ತೋಟದಲ್ಲಿ ಮಳೆಗಾಲಕ್ಕೂ ಮೊದಲು ನಿರ್ವಹಿಸಬೇಕಾದ ಕೆಲಸ ಗಳೂ ಸ್ಥಗಿತಗೊಂಡಿದ್ದವು. ಈಗ ಮಳೆ ಬಿಡುವು ನೀಡಿದೆ. ಕಾಫಿ ತೋಟದಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಕಾರ್ಮಿಕರು ತೋಟದತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬರುತ್ತಿದೆ.

ಹಾರಂಗಿಯಲ್ಲಿ 2,849.98 ಅಡಿ ನೀರು
ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾದ ಹಾರಂಗಿಯ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, 2,849.98 ಅಡಿ ನೀರಿನ ಸಂಗ್ರಹವಿದೆ. ಮುಂಗಾರು ಆರಂಭದಲ್ಲಿ ಜೋರಾಗಿ ಸುರಿದರೆ ಜೂನ್‌ 15ರ ವೇಳೆಗೆ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಈ ಅವಧಿಯಲ್ಲಿ 2,822 ಅಡಿಯಷ್ಟು ನೀರು ಸಂಗ್ರಹವಿತ್ತು. ಕಳೆದ ವರ್ಷಕ್ಕಿಂತ 27 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಿದೆ. ಚಿಕ್ಲಿಹೊಳೆ ಜಲಾಶಯವು ಬೇಸಿಗೆ ಅವಧಿಯಲ್ಲಿ ಭರ್ತಿಯಾಗಿದ್ದು, ನೀರು ಹೊರಗೆ ಹರಿಯುತ್ತಿದೆ. ಪ್ರವಾಸಿಗರನ್ನು ಸೆಳೆಯುತ್ತಿದೆ.

*
ಭೂವಿಜ್ಞಾನಿಗಳ ತಂಡವು ಜಿಲ್ಲೆಗೆ ಆಗಮಿಸಿ ಸೂಕ್ಷ್ಮ ಪ್ರದೇಶಗಳನ್ನು ಪರಿಶೀಲಿಸಲಿದೆ. ಮಳೆಗಾಲ ಮುಗಿಯುವವರೆಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡ ಜಿಲ್ಲೆಯಲ್ಲೇ ಇರಲಿವೆ.
–ಡಾ.ಬಿ.ಸಿ.ಸತೀಶ, ಜಿಲ್ಲಾಧಿಕಾರಿ

***
ಹಿಂದೆ ಇದಕ್ಕಿಂತಲೂ ಹೆಚ್ಚಿನ ಮಳೆ ಸುರಿದರೂ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ.
–ರಮೇಶ್‌, ನಾಪೋಕ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT