ವಿಜೃಂಭಣೆಯಿಂದ ಜರುಗಿದ ಶ್ರೀ ರಾಮಲಿಂಗೇಶ್ವರ ವಾರ್ಷಿಕ ಬ್ರಹ್ಮ ರಥೋತ್ಸವ

ಭಾನುವಾರ, ಏಪ್ರಿಲ್ 21, 2019
24 °C

ವಿಜೃಂಭಣೆಯಿಂದ ಜರುಗಿದ ಶ್ರೀ ರಾಮಲಿಂಗೇಶ್ವರ ವಾರ್ಷಿಕ ಬ್ರಹ್ಮ ರಥೋತ್ಸವ

Published:
Updated:
Prajavani

ಕುಶಾಲನಗರ: ಉತ್ತರ ಕೊಡಗಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ರಾಮಸ್ವಾಮಿ ಕಣಿವೆ ಗ್ರಾಮದಲ್ಲಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ರಾಮನವಮಿ ಅಂಗವಾಗಿ ಶನಿವಾರ ನಡೆದ ರಾಮಲಿಂಗೇಶ್ವರ ವಾರ್ಷಿಕ ಬ್ರಹ್ಮರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಕಾವೇರಿ ನದಿಯ ದಂಡೆ ಮೇಲಿರುವ ರಾಮಸ್ವಾಮಿ ಕಣಿವೆಯಲ್ಲಿ ವೈಶಿಷ್ಟ್ಯಪೂರ್ಣವಾಗಿ ನಡೆದ ರಥೋತ್ಸವದಲ್ಲಿ ಭಕ್ತರು ತೇರನ್ನು ಎಳೆದು ಪುನೀತರಾದರು. ಕೊಡಗು ಅಲ್ಲದೆ ಹಾಸನ, ಮೈಸೂರು ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು.

ರಥೋತ್ಸವದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಿಗೆ ಸೇರಿ ರಥವನ್ನು ಎಳೆಯುವ ಮೂಲಕ ಭಾವೈಕ್ಯವನ್ನು ಸಾರಿದರು. ಭಕ್ತಾದಿಗಳು ಜೈ ಜೈ ರಾಮ, ಹನುಮ, ಲಕ್ಷ್ಮಣ, ಸೀತೆ ಎಂಬ ಜಯಘೋಷಗಳೊಂದಿಗೆ ಸಂಭ್ರಮ, ಸಡಗರದಿಂದ ರಾಮಲಿಂಗೇಶ್ವರ ದೇವಸ್ಥಾನದಿಂದ ಕಣಿವೆ ಅರಳಿಮರದವರೆಗೆ ತೇರನ್ನು ಎಳೆದು ಸಂಭ್ರಮಿಸಿದರು.

ಕಾಶಿಯಿಂದ ತರಿಸಿದ್ದ ತೀರ್ಥವನ್ನು ಹೆಬ್ಬಾಲೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ, ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್.ಎನ್.ಬಸವರಾಜು, ಕಾರ್ಯದರ್ಶಿ ಎಚ್.ಪಿ.ರಾಜು, ಖಜಾಂಚಿ ಎಚ್.ಎಸ್.ಬಸಪ್ಪ ನೇತೃತ್ವದಲ್ಲಿ ಅಡ್ಡಪಲ್ಲಕ್ಕಿ ಮೇಲೆ ವೀರಭದ್ರೇಶ್ವರ ಸ್ವಾಮಿಯನ್ನು ಕೂರಿಸಿ ಮೆರವಣಿಗೆ ಮೂಲಕ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ನಂತರ, ದೇವರಿಗೆ ಗಂಗಾಜಲದಿಂದ ಅಭಿಷೇಕ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.

ವಿವಿಧ ಪುಷ್ಪ, ಧ್ವಜಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ರಾಮ, ಲಕ್ಷ್ಮಣ, ಆಂಜನೇಯ ಸ್ವಾಮಿಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ, ಮಧ್ಯಾಹ್ನ 2.30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ ಗುಡಿಹಟ್ಟಿ ಮಾಜಿ ಶಾಸಕ ದಿ.ನಿಂಗರಾಜಯ್ಯ ಅವರ ಪುತ್ರ ಜಿ.ಎಲ್.ನಾರಾಯಣ ಮತ್ತು ಕುಟುಂಬಸ್ಥರು ರಥ ಬಲಿಪೂಜೆ ನೆರವೇರಿಸಿದರು. ಭಕ್ತಾದಿಗಳು ಮೆರವಣಿಗೆಯುದ್ದಕ್ಕೂ ರಥಕ್ಕೆ ಈಡುಗಾಯಿಯೊಂದಿಗೆ ಜವನ, ಹೂವು, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು. ತ್ಯಾಗತ್ತೂರಿನ ಪೊನ್ನುಮುತ್ತಪ್ಪ ಚಂಡೆ ವಾದ್ಯಮೇಳ ರಥೋತ್ಸವಕ್ಕೆ ಮೆರುಗು ನೀಡಿತು.

ದೇವಸ್ಥಾನದಲ್ಲಿ ನರಹರಿ ಶರ್ಮಾ ನೇತೃತ್ವದಲ್ಲಿ ಪುರೋಹಿತರಾದ ರಾಘವೇಂದ್ರಾಚಾರ್ ಅವರು ಬೆಳಿಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯಗಳು ನೆರವೇರಿಸಿದರು. ಭಕ್ತಾದಿಗಳು ರಾಮ, ಲಕ್ಷ್ಮಣ, ಆಂಜನೇಯ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಟಿ.ಎನ್.ಶೇಷಾಚಲ, ಗೌರವಾಧ್ಯಕ್ಷ ಇ.ಎಸ್.ಗನೇಣ್ ನೇತೃತ್ವದಲ್ಲಿ ಉತ್ಸವಗಳು ಜರುಗಿದವು.

ದೇವಸ್ಥಾನ ಸಮಿತಿ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆ ಎ.ಎಸ್.ಐ ಅಪ್ಪಾಜಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಕುಶಾಲನಗರ ಗಣಪತಿ ದೇವಸ್ಥಾನ ಸಮಿತಿ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರಬಾಬು, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಕೆ.ಎಲ್.ಮಹೇಶ್ ಕುಮಾರ್, ಕೆ.ಎಸ್.ಮಾಧವ, ಕೆ.ಕೆ.ಮಂಜುನಾಥ್ ಸ್ವಾಮಿ, ಆರ್.ಆರ್.ಜಯರಾಮ್, ಕೆ.ಆರ್.ಲೋಕೇಶ್, ಆರ್.ಆರ್.ಮಧು, ಶಿರಗಜೆ ನವೀನ್, ಟಿ.ಎಂ.ಕಾರ್ತಿಕ್, ಕೆ.ಟಿ, ಶಿವಕುಮಾರ್, ಆರ್.ಎಸ್.ಪ್ರಭುದೇವ್, ಕೆ.ಎಂ.ಕೃಷ್ಣಮೂರ್ತಿ, ಕೆ.ಎಸ್.ರಮೇಶ್, ಕೆ.ಎಂ.ಪ್ರಶಾಂತ್, ಕೆ.ಎಂ.ರಾಕೇಶ್, ಕೆ.ಕೆ.ಶ್ರೀನಿವಾಸ್, ಕೆ.ಎನ್. ನರಸಿಂಹಶೆಟ್ಟಿ, ಕೆ.ಆರ್.ಮಂಜುನಾಥ್, ಎಚ್.ಡಿ.ಹೇಮರಾಜು, ಕೆ.ಎಂ.ಪರಮೇಶ್, ಕೆ.ಎ.ಪದ್ಮಾವತಿ, ಆರ್.ವಿ.ನಾರಾಯಣ ಮೂರ್ತಿ, ಕೆ.ಪಿ.ಪರಶಿವ, ನಂಜುಂಡ, ಕೆ.ಎಸ್.ಮಹೇಶ್, ಕೆ.ಪಿ.ನಾಗೇಂದ್ರ, ಕೆ.ಸಿ.ನಂಜುಂಡಸ್ವಾಮಿ, ಆರ್.ಆರ್.ಕುಮಾರ್, ಎಚ್.ಎಸ್.ದಿವಾಕರ, ಮೇಲ್ವಿಚಾರಕ ಕೃಷ್ಣಪ್ಪ ಇದ್ದರು.

ತೂಗುಸೇತುವೆ ಆಕರ್ಷಣೆ

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಜಾತ್ರೆಗೆ ಬಂದ ಭಕ್ತರು ಈ ಸೇತುವೆ ಮೇಲೆ ಸಂಚರಿಸಿ ಸಂಭ್ರಮಿಸಿದರು. ಯುವಕ ಯುವತಿಯರು ತಮ್ಮ ಮೊಬೈಲ್‌ಗಳಿಂದ ಸೆಲ್ಫಿ ತೆಗೆದುಕೊಂಡು ಪುಳಕಿತರಾದರು. ಅದೇ ರೀತಿ ಹಾರಂಗಿಯಿಂದ ಹಾದುಹೋಗಿರುವ ಎಡದಂಡೆ ಮೇಲ್ಗಾಲುವೆ ಸೇತುವೆ ಮೇಲೆ ಕೂಡ ಯಾವುದೇ ಭಯವಿಲ್ಲದೆ ಯುವಕರು ಸಂಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !