ಮಂಗಳವಾರ, ಆಗಸ್ಟ್ 3, 2021
27 °C

ಮಡಿಕೇರಿ: ‘ದುಡ್ಡು ಹೊಡೆದವರ ವಿರುದ್ಧ ಹೋರಾಟ’: ಮಾಜಿ ಸಚಿವ ರಮಾನಾಥ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೋವಿಡ್‌ ಹೆಸರಿನಲ್ಲಿ ದುಡ್ಡು ಹೊಡೆದವರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಇಲ್ಲಿ ಶನಿವಾರ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಗದ ವಿರುದ್ಧ ಹೋರಾಟ ನಡೆಸಬೇಕೇ ವಿನಾ ರೋಗಿಯ ವಿರುದ್ಧ ಅಲ್ಲ ಎಂಬ ಮಾತಿದೆ. ಆದರೆ, ರಾಜ್ಯ ಸರ್ಕಾರವು ರೋಗದ ಹೆಸರಿನಲ್ಲಿ ಜನರ ದುಡ್ಡು ಹೊಡೆದಿದೆ’ ಎಂದು ರೈ ಕಿಡಿಕಾರಿದರು.

‘ಜಗತ್ತಿಗೆ ಕೋವಿಡ್‌ನಿಂದ ಭೀಕರ ಸಂಕಷ್ಟ ಎದುರಾಗಿದೆ. ನಮ್ಮ ರಾಷ್ಟ್ರದಲ್ಲೂ ಅಲ್ಲೋಲ, ಕಲ್ಲೋಲವೇ ಸೃಷ್ಟಿಯಾಗಿದೆ. ಆದರೆ, ಕೇಂದ್ರ, ರಾಜ್ಯ ಸರ್ಕಾರಗಳು, ಕೋವಿಡ್‌ ನಿಯಂತ್ರಣಕ್ಕೆ ತರಲು ಸಂಪೂರ್ಣ ವಿಫಲವಾಗಿವೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ರೈ ಆಗ್ರಹಿಸಿದರು.

‘ಲಾಕ್‌ಡೌನ್‌ ಮಾಡುವ ಸಂದರ್ಭದಲ್ಲಿ ದೇಶದಲ್ಲಿ ಕೇವಲ 560 ಪ್ರಕರಣಗಳಿದ್ದವು, ರಾಜ್ಯದಲ್ಲಿ ಒಂದೇ ಒಂದು ಪ್ರಕರಣವಿತ್ತು. ಇಂದು ದೇಶದಲ್ಲಿ 16 ಲಕ್ಷ ಪ್ರಕರಣ, ರಾಜ್ಯದಲ್ಲಿ 1.24 ಲಕ್ಷ ಪ್ರಕರಣಗಳಿವೆ. ದೇಶದಲ್ಲಿ 35 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಅದೇ ರಾಜ್ಯ 2,060 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದು ದೂರಿದರು.

‘ಪಿ.ಎಂ ಕೇರ್‌ನಿಂದ ಪ್ರತಿ ವೆಂಟಿಲೇಟರ್‌ಗೆ ₹ 4 ಲಕ್ಷ ನೀಡಿ ಖರೀದಿಸಲಾಗಿದೆ. ಅದೇ ವೆಂಟಿಲೇಟರ್‌ಗೆ ತಮಿಳುನಾಡು ಸರ್ಕಾರವು ₹ 4 ಲಕ್ಷ ನೀಡಿದೆ. ಅದೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಅದೇ ವೆಂಟಿಲೇಟರ್‌ಗೆ ₹ 18 ಲಕ್ಷ ನೀಡಿ ಖರೀದಿಸಿದೆ. ಪ್ರತಿ ಮಾಸ್ಕ್‌ಗೆ ₹ 50ರಿಂದ ₹ 60 ಇದೆ. ಅದಕ್ಕೆ ಸರ್ಕಾರ ₹ 120ರಿಂದ ₹ 150 ಖರ್ಚು ಮಾಡಿದೆ. ಥರ್ಮಲ್‌ ಸ್ಕ್ಯಾನರ್‌ಗೂ ದುಪ್ಪಟ್ಟು ಹಣ ನೀಡಲಾಗಿದೆ. ಆಕ್ಸಿಜನ್‌ ಉಪಕರಣಕ್ಕೂ ಹೆಚ್ಚಿನ ಹಣ ನೀಡಲಾಗಿದೆ’ ಎಂದು ಆಪಾದಿಸಿದರು.

‘ಹಾಸಿಗೆ, ದಿಂಬು, ಮಂಚ, ಹಾಲು ಹಾಗೂ ಆಹಾರ ವಿತರಣೆಯಲ್ಲೂ ಅಕ್ರಮ ನಡೆದಿರುವುದು ಕಂಡುಬಂದಿದೆ’ ಎಂದು ರೈ ಹೇಳಿದರು.

‘ಸರ್ಕಾರವು ವೈದ್ಯಕೀಯ ಉಪಕರಣಗಳ ಖರೀದಿಗೆ ₹ 2 ಸಾವಿರ ಕೋಟಿಯಷ್ಟು ಖರ್ಚು ಮಾಡಿದೆ ಎಂದು ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಆಗ ಸಚಿವರಾದ ಶ್ರೀರಾಮುಲು ಹಾಗೂ ಅಶ್ವಥ್‌ ನಾರಾಯಣ್‌ ಅವರು, ಕೇವಲ ₹ 324 ಕೋಟಿ ಖರ್ಚು ಮಾಡಲಾಗಿದೆ ಎಂದು ವಿವರಿಸಿದ್ದರು. ಕೊನೆಗೆ ಸಿದ್ದರಾಮಯ್ಯ ಅವರು, ₹ 4 ಸಾವಿರ ಕೋಟಿಯಷ್ಟು ಖರ್ಚಾಗಿದೆ ಎಂದು ಹೇಳಿದಾಗ, ₹ 2 ಸಾವಿರ ಕೋಟಿ ಖರ್ಚು ಮಾಡಲಾಗಿದೆಯೆಂದು ಐವರು ಸಚಿವರು ಪತ್ರಿಕಾಗೋಷ್ಠಿ ನಡೆಸಿದ್ದರು. ಅವರ ಹೇಳಿಕೆ ತಾಳೆ ಆಗುತ್ತಿಲ್ಲ. ಸಂಶಯ ಮೂಡುತ್ತಿದ್ದು ತನಿಖೆ ನಡೆಸಬೇಕು’ ಎಂದು ರಮಾನಾಥ ರೈ ಒತ್ತಾಯಿಸಿದರು.

‘ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಸಣ್ಣಪುಟ್ಟ ಆರೋಪ ಕೇಳಿ ಬಂದಾಗಲೂ ತನಿಖೆ ನಡೆಸಿದ್ದೇವೆ. ಬಿಜೆಪಿಯವರಿಗೆ ತನಿಖೆಗೆ ವಹಿಸಲು ಏಕೆ ಹೆದರಿಕೆ’ ಎಂದು ಪ್ರಶ್ನಿಸಿದರು.

ಮಾಜಿ ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ‘ಕೊರೊನಾ ಸೋಂಕು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸೂಕ್ತ ಸಲಹೆಗಳನ್ನು ವಿಪಕ್ಷವಾಗಿ ಕಾಂಗ್ರೆಸ್ ನೀಡುತ್ತಲೇ ಬಂದಿದೆ. ಆದರೂ ಬಿಜೆಪಿಯಿಂದ ಆಡಳಿತ ವೈಫಲ್ಯ ಎದ್ದು ಕಾಣಿಸುತ್ತಿದೆ’ ಎಂದು ಕಿಡಿಕಾರಿದರು.

‘ಕೊರೊನಾ ನಿಯಂತ್ರಣ ಸಂಬಂಧ ಕಾಂಗ್ರೆಸ್‌ ಸಹಕಾರ ನೀಡುತ್ತಿದೆ. ಆದರೆ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಬಿಜೆಪಿಯ ಅವ್ಯವಹಾರಕ್ಕೆ ಕಾಂಗ್ರೆಸ್ ಸಹಕಾರ ನೀಡಲಿಲ್ಲ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿಯ ಬಂಡವಾಳ ರಾಜ್ಯದಲ್ಲಿ ಈಗ ಬಯಲಾಗಿದೆ. ‘ಪಾರ್ಟಿ ವಿತ್‌ ಎ ಡಿಫರೆಂಟ್’ ಎಂಬ ಬಿಜೆಪಿ ನಿಜವಾದ ಬಣ್ಣ ಬಯಲಾಗಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ತನ್ನ ಬಂಡವಾಳವನ್ನೂ ಹಲವು ವರ್ಷಗಳ ಹಿಂದೆಯೇ ಬಯಲಾಗಿಸಿದೆ. ಕರ್ನಾಟಕದಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಕೇರಳದಲ್ಲಿ ಆರೋಗ್ಯ ಸಚಿವೆಯಾಗಿರುವ ಶೈಲಜಾ ಅವರ ಕೆಲಸ ಉತ್ತಮವಾಗಿತ್ತು. ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಶಂಸೆ ಮಾಡಿದೆ’ ಎಂದು ಹೇಳಿದರು.

‘ದೇಶದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಕೇರಳದಂತೆ ಕರ್ನಾಟಕದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸಚಿವರಲ್ಲೇ ಸಮನ್ವಯದ ಕೊರತೆಯಿದೆ. ಪರಿಣಾಮಕಾರಿ ನಿಯಂತ್ರಣ ಅಸಾಧ್ಯವಾದ ಪರಿಸ್ಥಿತಿಯಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಮನೆ ಬಿಟ್ಟು ಹೊರಬರಬೇಕು. ಕೊರೊನಾ ರೋನಾ ಸಂಕಷ್ಟದ ಸಂದರ್ಭದಲ್ಲಿ ಲೂಟಿಗಿಳಿದ ಇಲಾಖೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ತನಿಖೆಗೆ ಆದೇಶಿಸಬೇಕು’ ಎಂದು ಮಾಜಿ ಸಂಸದರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಮುಖಂಡರಾದ ಟಿ.ಪಿ.ರಮೇಶ್‌, ಅರುಣ್‌ ಮಾಚಯ್ಯ, ಪೊನ್ನಣ್ಣ, ಅರುಣ್‌ ಮಾಚ್ಚಯ್ಯ, ಕೆ.ಎಂ.ಲೋಕೇಶ್‌, ಮಂಜುಳಾ ರಾಜ್‌ ಮೊದಲಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು