ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಲ್ಲಿ ಕೊಡಗು ಡಿಸಿಸಿ ಬ್ಯಾಂಕ್

ಇಂದು 97ನೇ ವಾರ್ಷಿಕ ಮಹಾಸಭೆ; ರಾಜ್ಯದಲ್ಲೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ
Last Updated 8 ಸೆಪ್ಟೆಂಬರ್ 2022, 16:41 IST
ಅಕ್ಷರ ಗಾತ್ರ

ಮಡಿಕೇರಿ:‘ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ₹ 12.87 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದೆ. ಇಲ್ಲಿಯವರೆಗಿನ ಅತೀ ಹೆಚ್ಚಿನ ಲಾಭ ಇದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ತಿಳಿಸಿದರು.

‘101ನೇ ವರ್ಷದಲ್ಲಿ ಲಾಭದ ಹಳಿಯ ಮೇಲೆ ದಾಪುಗಾಲಿಕ್ಕುತ್ತಿರುವ ಬ್ಯಾಂಕಿನಲ್ಲಿ ಒಟ್ಟು 286 ಸಹಕಾರ ಸಂಘಗಳು ಸದಸ್ಯತ್ವ ಹೊಂದಿವೆ. ₹ 27.25 ಕೋಟಿ ಷೇರು ಬಂಡವಾಳ ಸಂಗ್ರಹಿಸಲಾಗಿದೆ’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬ್ಯಾಂಕಿಗೆ ಸಂಯೋಜಿಸಿದ ಸಹಕಾರಿ ಸಂಘಗಳ ವ್ಯವಹಾರಕ್ಕಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ನಗದು ಸಾಲ, ವ್ಯವಹಾರ ಸಾಲಗಳನ್ನು ನೀಡಲಾಗಿದೆ. ರಾಜ್ಯದಲ್ಲೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ವಿಧಾನಸಭೆಯಲ್ಲೇ ಶ್ಲಾಘಿಸಿದ್ದರು’ ಎಂದು ಅವರು ಸ್ಮರಿಸಿದರು.

‘ರೈತ ವಿರೋಧಿ ನೀತಿಯನ್ನು ಬ್ಯಾಂಕ್ ಅನುಸರಿಸುತ್ತಿಲ್ಲ. ಸಾಲ ವಸೂಲಾತಿಗೆ ಅನಗತ್ಯವಾಗಿ ಕಿರುಕುಳ ನೀಡುವಂತಹ, ಬೆದರಿಸುವಂತಹ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಾನೂನು ಪ್ರಕಾರವೇ ಸಾಲ ವಸೂಲಾತಿ ನಡೆಯುತ್ತಿದೆ’ ಎಂದರು.

‘ಜಿಲ್ಲೆಯ 73 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಏಕರೂಪದ ತಂತ್ರಾಂಶ ಅಳವಡಿಸಲು ₹ 1.25 ಕೋಟಿಯನ್ನು ನಿಗದಿ ಮಾಡಲಾಗಿದೆ. ಜಿಲ್ಲೆಯ ಸಹಕಾರ ಸಂಘಗಳ ಅನುಕೂಲಕ್ಕಾಗಿ 31 ಮೈಕ್ರೊ ಎಟಿಎಂಗಳನ್ನು ನೀಡಲಾಗಿದೆ ’ಎಂದು ಹೇಳಿದರು.

ಮುಂಬರುವ ಸಾಲಿನ ಗುರಿಗಳು

ಹೆಚ್ಚಿನ ಠೇವಣಿ ಸಂಗ್ರಹ, ವಿವಿಧ ಸಾಲಸೌಲಭ್ಯ ನೀಡಿಕೆ, ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸುವುದರೊಂದಿಗೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ, ಮಡಿಕೇರಿ ತಾಲ್ಲೂಕಿನ ಸಂಪಾಜೆ, ಭಾಗಮಂಡದಲ್ಲಿ ಹೊಸ ಶಾಖೆ ತೆರೆಯುವ ಗುರಿ ಹೊಂದಲಾಗಿದೆ ಎಂದರು.

ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಶಾಖೆಗಳಿಗೆ ಸ್ವಂತ ಕಟ್ಟಡ, ಶತಮಾನೋತ್ಸವ ಕಟ್ಟಡ ಪೂರ್ಣಗೊಳಿಸುವುದು, ಸಮೂಹ ಸಾಲ ಯೋಜನೆಯ ಅನುಷ್ಠಾನದಂತಹ ಮಹತ್ವದ ಗುರಿಯನ್ನಿರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ಪದಾಧಿಕಾರಿಗಳಾದ ಕಿಮ್ಮುಂಡೀರ ಜಗದೀಶ್, ಕೇಟೋಳಿರ ಹರೀಶ್‌ ಪೂವಯ್ಯ, ಕನ್ನಂಡ ಸಂಪತ್, ಪ್ರಧಾನ ವ್ಯವಸ್ಥಾಪಕಿ ಎ.ಎಸ್.ಪಾರ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT