ಮಡಿಕೇರಿ: ಸೇನಾ ಗೌರವದೊಂದಿಗೆ ಬಿ.ಸಿ. ನಂದ ಅಂತ್ಯಸಂಸ್ಕಾರ

7

ಮಡಿಕೇರಿ: ಸೇನಾ ಗೌರವದೊಂದಿಗೆ ಬಿ.ಸಿ. ನಂದ ಅಂತ್ಯಸಂಸ್ಕಾರ

Published:
Updated:

ಮಡಿಕೇರಿ: ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಿದ್ದಂಡ ಚಂಗಪ್ಪ ನಂದ (87) ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ ಸೇನಾ ಗೌರವದೊಂದಿಗೆ ನೆರವೇರಿತು.

ನಂದ ಅವರು ಭೂಸೇನೆಯ ಉತ್ತರ ವಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 

ತಾಲ್ಲೂಕಿನ ಹೆಬ್ಬಟ್ಟಗೇರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಸೈನಿಕರು, ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಕುಟುಂಬ ವರ್ಗದವರು ನಂದ ಅವರನ್ನು ನೆನೆದು ಕಣ್ಣೀರಿಟ್ಟರು.

ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಅಂತ್ಯಸಂಸ್ಕಾರದ ಸ್ಥಳಕ್ಕೆ ಸೇನಾಧಿಕಾರಿಗಳು ಕೊಂಡೊಯ್ದರು. ಸೇನೆಯ ಉತ್ತರ ವಲಯ, ದಕ್ಷಿಣ ವಲಯ ಹಾಗೂ ಸೇನಾ ಮುಖ್ಯಸ್ಥರ ಪರವಾಗಿ ಲೆಫ್ಟಿನೆಂಟ್‌ ಕರ್ನಲ್‌ ದಿನೇಶ್‌ ಕುಮಾರ್ ಹಾಗೂ ಕರ್ನಲ್‌ ಬೆಳ್ಯಪ್ಪ ಅವರು ಪುಷ್ಪ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವವನ್ನು  ದಿನೇಶ್‌ಕುಮಾರ್‌ ಅವರು ನಂದ ಅವರ ಪತ್ನಿ ಲೀಲಾ ಅವರಿಗೆ ಹಸ್ತಾಂತರಿಸಿದರು. ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಕೊಡವ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಪುತ್ರಿ ದೇವಿಕಾ ಅವರು ಅಂತಿಮ ಸಂಸ್ಕಾರದ ವಿಧಾನ ನೆರವೇರಿಸಿದರು. ಬಳಿಕ ಶವವನ್ನು ತೋಟದಲ್ಲಿ ಹೂಳಲಾಯಿತು.

ನಿವೃತ್ತ ಮೇಜರ್‌ ಜನರಲ್‌ಗಳಾದ ಎಸ್‌.ಕೆ. ಕಾರ್ಯಪ್ಪ, ಕೆ.ಪಿ. ನಂಜಪ್ಪ, ನಿವೃತ್ತ ಮೇಜರ್‌ ಬಿ.ಎ. ನಂಜಪ್ಪ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !