ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸೈನಿಕರ ಕಷ್ಟಗಳಿಗೆ ಸ್ಪಂದನೆ: ಭರವಸೆ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಕ್ರೀಡಾಕೂಟ ಆಯೋಜನೆ; ವೈದ್ಯಕೀಯ ತಪಾಸಣೆ
Last Updated 19 ಡಿಸೆಂಬರ್ 2022, 11:34 IST
ಅಕ್ಷರ ಗಾತ್ರ

ಮಡಿಕೇರಿ: ‘ದೇಶವನ್ನು ಸಂರಕ್ಷಿಸುವ ಕಾರ್ಯದಲ್ಲಿ ಸೈನಿಕರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಬಹುದೊಡ್ಡ, ಪವಿತ್ರ ವೃತ್ತಿ ನಿರ್ವಹಿಸಿದ ಮಾಜಿ ಸೈನಿಕರ ಎಲ್ಲ ಸಮಸ್ಯೆಗಳನ್ನು ಪ್ರಸಕ್ತ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ನಿವಾರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಶಾಸಕ ಕೆ.ಜಿ.ಬೋಪಯ್ಯ ಭರವಸೆ ನೀಡಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕವು ಇಲ್ಲಿನ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಟೋಟ ಸ್ಪರ್ಧೆ, ವೈದ್ಯಕೀಯ ತಪಾಸಣೆ ಹಾಗೂ ಬೃಹತ್ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಮಾಜಿ ಸೈನಿಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಿದೆ. ಅವರ ಎಲ್ಲ ಸಮಸ್ಯೆಗಳನ್ನೂ ಹಂತಹಂತವಾಗಿ ನಿವಾರಿಸುವ ಪ್ರಯತ್ನ ಮಾಡಲಾ ಗುವುದು’ ಎಂದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ‘ಈಗಾಗಲೇ ಜಿಲ್ಲಾಡಳಿತವು ಮಾಜಿ ಸೈನಿಕರ ಸಂಕಷ್ಟವನ್ನು ಆಲಿಸಿದೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಇನ್ನು ಮುಂದೆಯೂ ಮಾಡಲಾಗುವುದು’ ಎಂದು ಹೇಳಿದರು.

ಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ, ‘ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಕಾರ್ಯ ನಿಜಕ್ಕೂ ಶ್ಲಾಘನೀಯ. ಎಲ್ಲ ಮಾಜಿ ಸೈನಿಕರ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿದೆ. ಈ ಸಂಘದ ಕಚೇರಿಗೆ ನಿವೇಶನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮತ್ತೊಬ್ಬ ಸಮಾಜ ಸೇವಕ ಹೇಮಕುಮಾರ್ ಮಾತನಾಡಿ, ‘₹1 ಲಕ್ಷ ನೆರವು ನೀಡಲಾಗುವುದು’ ಎಂದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಪಿ.ಸೋಮಣ್ಣ, ‘ನಾಪಂಡ ಮುತ್ತಪ್ಪ ಅವರು ನೀಡುವ ನಿವೇಶನದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗುವುದು. ಇಂತಹದ್ದೊಂದು ಕ್ರೀಡಾಕೂಟವನ್ನು ಪ್ರತಿ ವರ್ಷವೂ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಸೈನಿಕ ಭವನವೊಂದನ್ನು ನಿರ್ಮಿಸಬೇಕು. ಎಲ್ಲ ಮಾಜಿ ಸೈನಿಕರಿಗೆ ಜಮೀನು ಇಲ್ಲವೇ ನಿವೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಸೈನಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ 43ಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು. ಸುಮಾರು ಒಂದು ಸಾವಿರ ಮಂದಿ ಭಾಗವಹಿಸಿದ್ದರು. ನೂರಾರು ಮಂದಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಜಿಲ್ಲೆಯ 6ಕ್ಕೂ ಹೆಚ್ಚು ಸಂಘದವರೂ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಓಂಕಾರೇಶ್ವರ ದೇಗುಲದಿಂದ ಕ್ರೀಡಾಜ್ಯೋತಿಯನ್ನು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತರಲಾಯಿತು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಟಿ.ಜಿ.ನಾಣಯ್ಯ, ಕೆ.ಕೆ.ಪೂಣಚ್ಚ, ಎಚ್.ಎ.ಚಿನ್ನಪ್ಪ, ರಾಷ್ಟಮಟ್ಟದ ಕ್ರೀಡಾಪಟು ಬಾರನ ರಂಗನಾಥ್ ಭಾಗವಹಿಸಿದ್ದರು. ಮುಖಂಡರಾದ ಸುಧೀರ್, ಕುಟ್ಟಪ್ಪ, ಕಾಳಪ್ಪ, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT