ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರಂಬಳ್ಳಿ: ಚರಂಡಿ ವ್ಯವಸ್ಥೆ ಇಲ್ಲ

ಸೊಳ್ಳೆಗಳ ಹಾವಳಿ; ರೋಗಗಳ ಭೀತಿಯಲ್ಲಿ ಜನರು
Last Updated 12 ಜೂನ್ 2018, 10:46 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕುಂತೂರು ಗ್ರಾಮ ಪಂಚಾಯಿತಿಗೆ ಸೇರಿದ ತೇರಂಬಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಕಸ– ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ತುಳುಕುತ್ತಿದೆ. ಸಾರ್ವಜನಿಕರು ಹಾಗೂ ಊರಿನ ಗ್ರಾಮದವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗ್ರಾಮದಲ್ಲಿ ಕೆಲವು ಬಡಾವಣೆಗಳಲ್ಲಿ ಮಾತ್ರ ಚರಂಡಿ ಇದ್ದು, ಉಳಿದ ಬಡಾವಣೆಗಳಿಗೆ ಚರಂಡಿಗಳಿಲ್ಲ. ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೇ ಒಂದೇ ಕಡೆ ನಿಂತು ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ಜೊತೆಗೆ ಗಿಡ ಗಂಟಿಗಳು ಹೆಮ್ಮರವಾಗಿ ಬೆಳೆದು ಅನೈರ್ಮಲ್ಯ ಉಂಟಾಗಿದೆ.

ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ನಿವಾಸಿಗಳು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಮಳೆಗಾಲದಲ್ಲಂತೂ ಚರಂಡಿ ನೀರಿನ ಜೊತೆಗೆ
ಮಳೆ ನೀರು ಸೇರಿ ಕೆರೆಯಂತೆ ಮಾರ್ಪಾಡಾಗುತ್ತದೆ. ನಿವಾಸಿಗಳ ಮನೆಯ ಮುಂದೆ ಕೊಳಚೆ ನೀರು ನಿಂತು ಕೊಳ್ಳುತ್ತಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಕೆಲವು ಬಡಾವಣೆಗಳಲ್ಲಿ ರಸ್ತೆಯೂ ಇಲ್ಲ. ಮಳೆ ನೀರು ಬಂದರೆ ಕೆಸರು ಗದ್ದೆಯಾಗಿ ಮಾರ್ಪಡಾಗುತ್ತದೆ. ರಸ್ತೆ ಇಲ್ಲದ ಕಾರಣ ಬಡಾವಣೆಯ
ಹಲವೆಡೆ ಇರುವ ಹಳ್ಳಗಳಲ್ಲಿಯೂ ನೀರು ನಿಂತಿದೆ.

ಸೊಳ್ಳೆಗಳಿಂದಾಗಿ ಗ್ರಾಮದವರು ಡೆಂಗಿಯಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿಂದ ಬರುವ ವಾಸನೆಗೆ ತಮ್ಮ ನೆಮ್ಮದಿಯೇ ಹಾಳಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿ ಇಲ್ಲದ ಕಾರಣ ವಾಸಿಸುವುದೇ ಕಷ್ಟವಾಗಿದೆ. ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು
ಶಿವಣ್ಣ, ಗ್ರಾಮದ ನಿವಾಸಿ 

–ಅವಿನ್ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT