ಮಡಿಕೇರಿ | ಮಳೆ ನಿಂತ ಕೂಡಲೇ ರಸ್ತೆ ನಿರ್ಮಾಣ: ಶಾಸಕ ಎಂ.ಪಿ.ಅಪ್ಪಚ್ಚುರಂಜನ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಸಂಪೂರ್ಣ ನಿಂತ ತಕ್ಷಣವೇ ಸಮರೋಪಾದಿಯಲ್ಲಿ ಕಾಮಗಾರಿ ಯನ್ನು ಕೈಗೊಂಡು ಮಡಿಕೇರಿಯ ಎಲ್ಲ ರಸ್ತೆಗಳನ್ನೂ ಸರ್ವಋತು ರಸ್ತೆಗಳನ್ನಾಗಿ ನಿರ್ಮಿಸಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೂಚಿಸಿದರು.
ಇಲ್ಲಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ನಗರೋತ್ಥಾನದ 4ನೇ ಹಂತದ ಅನುದಾನದಲ್ಲಿ ₹ 40 ಕೋಟಿ ಬಂದಿದ್ದು, ಇದರಲ್ಲಿ ₹ 13 ಕೋಟಿಯನ್ನು ರಸ್ತೆ, ಚರಂಡಿ ನಿರ್ಮಾಣಕ್ಕಾಗಿಯೇ ಮೀಸಲಿರಿಸಲಾಗಿದೆ ಎಂದು ಪೌರಾ ಯುಕ್ತ ವಿಜಯ್ ಮಾಹಿತಿ ನೀಡಿದರು.
‘ರಸ್ತೆ ಸರಿ ಇಲ್ಲ ಎಂಬ ಒಂದೇ ಕಾರಣಕ್ಕೆ ಜನರು ಹೀಗಾಗಲೇ ಜನಪ್ರತಿನಿಧಿಗಳನ್ನು ಹರಾಜಾಕುತ್ತಿದ್ದಾರೆ. ಟೆಂಡರ್ ಆದಷ್ಟು ಬೇಗ ಅಂತಿಮವಾಗಬೇಕು. ಇನ್ನು ಸಹಿಸಲು ಸಾಧ್ಯವೇ ಇಲ್ಲ. ಮಳೆ ನಿಂತ ಬಳಿಕ ಕಾಮಗಾರಿ ಆರಂಭಿಸಬೇಕು’ ಎಂದು ಅಪ್ಪಚ್ಚುರಂಜನ್ ನಿರ್ದೇಶನ ನೀಡಿದರು.
‘ಕ್ರಿಯಾಯೋಜನೆಯ ಒಂದು ಪ್ರತಿ ನೀಡಿದರೆ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬೇಗನೇ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು’ ಎಂದೂ ಭರವಸೆ ನೀಡಿದರು.
ಎಸ್‌ಡಿಪಿಐ ಸದಸ್ಯ ಅಮೀನ್ ಮೊಯಿಸಿನ್ ಮಾತನಾಡಿ, ‘1,200 ಮಂದಿ ನಿವೇಶನರಹಿತರು ನಿವೇಶನಕ್ಕಾಗಿ ಕಾಯುತ್ತಿದ್ದಾರೆ’ ಎಂದು ವಿಷಯ ಪ್ರಸ್ತಾಪಿಸಿದರು.
ಪ್ರತಿಕ್ರಿಯಿಸಿದ ಅಪ್ಪಚ್ಚುರಂಜನ್, ‘ನಿವೇಶನರಹಿತರಿಗೆ ಮಡಿಕೇರಿ ನಗರದ ಒಳಗೆ ನಿವೇಶನ ನೀಡಲು ಎಲ್ಲೂ ಜಾಗವಿಲ್ಲ. ಸದ್ಯ, ಹೊರವಲಯದಲ್ಲಿ 3 ಜಾಗಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬಡಾವಣೆ ನಿರ್ಮಿಸಿ ನಿವೇಶನರಹಿತರಿಗೆ ನೀಡಲಾಗುವುದು’ ಎಂದು ಹೇಳಿದರು.
7 ತಿಂಗಳಿಂದಲೂ ಸಂಬಳ ಇಲ್ಲ!: ಎಸ್‌ಡಿಪಿಐ ಸದಸ್ಯರು ಸಭೆಯ ಆರಂಭದಲ್ಲೇ ನಗರಸಭೆಯ ಹೊರಗುತ್ತಿಗೆ ಸಿಬ್ಬಂದಿಗೆ ಕಳೆದ 7 ತಿಂಗಳುಗಳಿಂದಲೂ ವೇತನ ಪಾವತಿ ಆಗಿದಿರುವ ವಿಷಯ ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಅಧ್ಯಕ್ಷೆ ಅನಿತಾ ಪೂವಯ್ಯ, ‘ನಮಗೂ ಹೊರಗುತ್ತಿಗೆ ಸಿಬ್ಬಂದಿಯ ಬಗ್ಗೆ ಕಾಳಜಿ ಇದ್ದು, ಇನ್ನು ಮುಂದೆ ಪ್ರತಿ ತಿಂಗಳೂ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.
‘ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಬಳಿಕವೂ 7 ತಿಂಗಳಿಂದ ಸಿಬ್ಬಂದಿಗೆ ವೇತನ ಇಲ್ಲ ಎನ್ನುವುದು ನಿಮ್ಮ ಕಾಳಜಿಯನ್ನು ತೋರಿಸುತ್ತದೆ. ಅಷ್ಟು ಕಾಳಜಿ ಇದ್ದಿದ್ದರೆ ಒಂದೇ ತಿಂಗಳಲ್ಲಿ ವೇತನ ಪಾವತಿಸಬೇಕಿತ್ತು. ನಿಮ್ಮ ಮೊಬೈಲ್ ಬಿಲ್ ₹ 25 ಸಾವಿರವನ್ನು ತೆಗೆದುಕೊಂಡಿದ್ದೀರಿ’ ಎಂದು ಎಸ್‌ಡಿಪಿಐನ ಅಮಿನ್ ಮೊಯಿಸಿನ್ ಹೇಳಿದಾಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ‘ಸರ್ಕಾರದ ನಿಯಮದಂತೆ ನೀವು ಗೌರವಧನ ತೆಗೆದುಕೊಂಡಂತೆ ಅಧ್ಯಕ್ಷರು ಅವರಿಗೆ ಸರ್ಕಾರ ನೀಡುವ ಸವಲತ್ತು ತೆಗೆದು ಕೊಂಡಿದ್ದಾರೆ. ಇದನ್ನೂ ಪ್ರಶ್ನಿಸುವುದು ನಿಮ್ಮ ಸಣ್ಣತನ’ ಎಂದು ಆಡಳಿತ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತ ವಿಜಯ್ ಪ್ರತಿಕ್ರಿಯಿಸಿ, ‘ಹೊರಗುತ್ತಿಗೆಯ ಟೆಂಡರ್‌ಗೆ ಆಡಳಿತಾತ್ಮಕ ಮಂಜೂರಾತಿ ಆಗಿದೆ. ಸದ್ಯದಲ್ಲೇ, ಎಲ್ಲ ಬಾಕಿ ವೇತನ ಪಾವತಿ ಆಗುತ್ತದೆ’ ಎಂದರು.
ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ‘ಸದಸ್ಯರೊಬ್ಬರು ಮಡಿಕೇರಿಯಲ್ಲಿ ಬಾಂಬ್ ಹಾಕುವ ಕುರಿತು ಮಾತನಾಡಿರುವ ಆರೋಪ ಕುರಿತು ಪ್ರಕರಣ ದಾಖಲಾಗಿದೆ. ನಮಗೆ ಸಭೆಗೆ ಬರಲು ಹೆದರಿಗೆ ಆಗುತ್ತಿದೆ. ಎಲ್ಲರನ್ನೂ ಪರಿಶೀಲಿಸಿ ನಂತರ ಸಭೆ ಆರಂಭಿಸಬೇಕಿತ್ತು’ ಎಂಬ ಮಾತುಗಳು ಬಹುತೇಕ ಸದಸ್ಯರ ಮುಖದಲ್ಲಿ ನಗು ತರಿಸಿತು.
ಸಭಾತ್ಯಾಗ: ನಗರಸಭೆ ಅಧ್ಯಕ್ಷೆ ಅವರ ಕೊಠಡಿಯಲ್ಲಿ ಸಿ.ಸಿ ಟಿವಿ ಕ್ಯಾಮೆರಾವನ್ನು ಬಾಗಿಸಿ ಇಡಲಾಗಿದೆ ಎಂದು ಆರೋಪಿಸಿದ ಎಸ್‌ಡಿಪಿಐ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ
ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.