ಮುಗಿದ ವರ್ಷದಲ್ಲಿಯೇ ಕಿತ್ತು ಬಂದ ರಸ್ತೆ.

ಸೋಮವಾರಪೇಟೆ: ಅಬ್ಬೂರುಕಟ್ಟೆ ಗ್ರಾಮದಿಂದ ಹೊಸಳ್ಳಿ ಗ್ರಾಮದ ಮೂಲಕ ಕಣಿವೆಗೆ ಸಂಪರ್ಕಿಸುವ ₹523.10 ಲಕ್ಷ ವೆಚ್ಚದ 5.29 ಕಿ. ಮೀ. ದೂರದ ರಸ್ತೆ ಕಾಮಗಾರಿ ಒಂದು ವರ್ಷದ ಹಿಂದೆ ಪೂರ್ಣಗೊಂಡಿದ್ದು, ವರ್ಷ ಕಳೆಯುವುದರೊಳಗೆ ಮತ್ತೆ ಕಿತ್ತುಹೋಗಿದೆ.
ಕಳೆದ ಹಲವು ವರ್ಷಗಳಿಂದ ಕಿತ್ತುಹೋದ ರಸ್ತೆಯಲ್ಲಿ ಜನರು ಸಂಚರಿಸಲು ಪರದಾಡುತ್ತಿದ್ದರು. ರಸ್ತೆಯನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ, ರಸ್ತೆಯನ್ನು ‘ನಮ್ಮ ಊರು ನಮ್ಮ ರಸ್ತೆ’ ಯೋಜನೆಯಡಿ, ಬೆಂಗಳೂರಿನ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಂಗಳೂರು ವಿಭಾಗದ ಮೂಲಕ ರಸ್ತೆ ಕಾಮಗಾರಿಗೆ ಯೋಜನೆ ತಯಾರಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು.
25 ಜೂನ್ 2015ರಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ರವರು ಭೂಮಿ ಪೂಜೆ ನೆರವೇರಿಸುವ ಮೂಲಕ ಇದಕ್ಕೆ ಚಾಲನೆ ನೀಡಿದ್ದರು. ಈ ಯೋಜನೆಯನ್ನು 2016ರ ಮೇ 24ರಂದು ಜನರ ಅನುಕೂಲಕ್ಕೆ ಬಿಟ್ಟುಕೊಡಬೇಕಾಗಿತ್ತಾದರೂ ಕಾಮಗಾರಿಯನ್ನು ಮುಗಿಸಿರಲಿಲ್ಲ. ನಂತರ ಜನರ ಒತ್ತಾಯದ ನಂತರ 2017ರಲ್ಲಿ ರಸ್ತೆ ಕಾಮಗಾರಿ ಮುಕ್ತಾಯಗೊಂಡಿತ್ತು.
ಗ್ರಾಮಸ್ಥರಾದ ಮಹೇಶ್ ಮಾತನಾಡಿ, ‘ಈ ಹಿಂದೆ ಗುಂಡಿಗಳಿಂದ ತುಂಬಿದ್ದ ಡಾಂಬರ್ ರಸ್ತೆಯಲ್ಲಿ ಕಷ್ಟದಿಂದ ಸಂಚರಿಸುತ್ತಿದ್ದೆವು. ಆದರೆ, ನೂತನ ರಸ್ತೆ ನಿರ್ಮಾಣ ಮಾಡಿದರೂ ಅದು ಅಲ್ಲಲ್ಲಿ ಕಿತ್ತು ಬರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹಿಂದಿನ ಸ್ಥಿತಿಗೆ ರಸ್ತೆ ಬರುವುದು. ಸರ್ಕಾರದ ಕೋಟ್ಯಂತರ ಹಣ ನೀರು ಪಾಲಾಗುತ್ತಿದೆ. ಇದಕ್ಕೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಗುತ್ತಿಗೆದಾರರು ಒಂದು ವರ್ಷದಲ್ಲಿ ಮುಗಿಸಬೇಕಾದ ಕಾಮಗಾರಿಯನ್ನು ಎರಡು ವರ್ಷ ತೆಗೆದುಕೊಂದು ಮಾಡಿದ್ದಾರೆ. ಬಹುನಿರೀಕ್ಷಿತ ರಸ್ತೆ ಕಾಮಗಾರಿ ಕಿತ್ತು ಬರುತ್ತಿದ್ದು, ಜನರಿಗೆ ನಿರಾಸೆಯಾಗಿದೆ. ಎಷ್ಟೋ ವರ್ಷಗಳಿಗೆ ಒಮ್ಮೆ ಮಾಡುವ ರಸ್ತೆಯನ್ನು ಗುಣಮಟ್ಟದಿಂದ ಮಾಡಿದ್ದರೆ, ಮುಂದಿನ ಹತ್ತು ವರ್ಷಗಳವರೆಗೆ ಬಾಳಿಕೆ ಬರುತ್ತಿತ್ತು’ ಎಂದು ಗ್ರಾಮದ ಪ್ರಕಾಶ್ ದೂರಿದರು.
‘ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ಹೆಚ್ಚಿನ ಮಳೆಯಾಗುತ್ತಿದೆ. ಗ್ರಾಮದಲ್ಲಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿರುವುದರಿಂದ ಮತ್ತೊಮ್ಮೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಎದುರು ರಸ್ತೆ ನಿರ್ಮಾಣಕ್ಕೆ ಕೈ ಒಡ್ಡುವಂತಾಗುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಕಿತ್ತು ಬರುತ್ತಿದೆ. ಈ ಭಾಗದಲ್ಲಿ ಕಲ್ಲಿನ ಕ್ವಾರಿಗಳು ಹೆಚ್ಚಾಗಿರುವುದರಿಂದ ಭಾರಿ ವಾಹನ ಸಂಚಾರವಿದೆ. ಇದೇ ರೀತಿ ಮಳೆ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಗುಂಡಿಗಳಾಗುತ್ತವೆ’ ಎಂದು ಗ್ರಾಮದ ಜ್ಯೋತಿ ಆರೋಪಿಸಿ, ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯತ್ತ ಗಮನಹರಿಸಬೇಕೆಂದು ಹೇಳಿದರು.
‘ಒಟ್ಟಿನಲ್ಲಿ ಸರ್ಕಾರ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಗುಣಮಟ್ಟಕ್ಕೆ ಆದ್ಯತೆ ನೀಡದಿದ್ದರಿಂದ ಸಾರ್ವಜನಿಕರ ಹಣ ನೀರು ಪಾಲಾಗುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.