‘ಮಂಜಿನ ನಗರಿ’ ರಸ್ತೆ ಸ್ಥಿತಿ ನೋಡೀರಾ...

7
ಎಲ್ಲೆಂದರಲ್ಲಿ ಗುಂಡಿಗಳ ಹಾವಳಿ, ನಗರಸಭೆ ಆಡಳಿತ ಮೌನ

‘ಮಂಜಿನ ನಗರಿ’ ರಸ್ತೆ ಸ್ಥಿತಿ ನೋಡೀರಾ...

Published:
Updated:
Deccan Herald

ಮಡಿಕೇರಿ: ವಾಡಿಕೆಗೂ ಹೆಚ್ಚು ಮಳೆ ಹಾಗೂ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯ ಪರಿಣಾಮ ‘ಮಂಜಿನ ನಗರ’ದ ರಸ್ತೆಗಳಲ್ಲಿ ಗುಂಡಿಗಳೇ ದರ್ಬಾರ್‌ ನಡೆಸುತ್ತಿವೆ.

ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು, ವಾಹನ ಸವಾರರು ಇರಲಿ, ಪಾದಚಾರಿಗಳೂ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಮಳೆ ನಿಂತ ಮೇಲೆ, ರಸ್ತೆ ದುರಸ್ತಿ ಮಾಡುತ್ತೇವೆಂದು ನಗರಸಭೆ ಅಧ್ಯಕ್ಷರು ಭರವಸೆ ನೀಡಿದ್ದರೂ ಸದ್ಯಕ್ಕೆ ತುಂತುರು ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಇನ್ನೆರಡು ತಿಂಗಳು ಗುಂಡಿಗಳ ನಡುವೆ ಸವಾರಿ ಮಾಡುವ ಅನಿವಾರ್ಯತೆ ಇದೆ.

ನಗರದಲ್ಲಿ ರಸ್ತೆಗೂ ಗುಂಡಿಗಳಿಗೂ ವ್ಯತ್ಯಾಸ ಕಾಣಿಸುತ್ತಿಲ್ಲ. ತುಂತುರು ಮಳೆ, ಅಂತರ್ಜಲದ ನೀರು ರಸ್ತೆಯನ್ನು ಆವರಿಸುತ್ತಲೇ ಇದೆ. ಕಾಂಕ್ರೀಟ್‌ ರಸ್ತೆಗಳನ್ನು ಹೊರತುಪಡಿಸಿ, ಉಳಿದ ಯಾವ ರಸ್ತೆಗಳೂ ಚೆನ್ನಾಗಿಲ್ಲ. ಗುಂಡಿ ಬಿದ್ದಿರುವ ರಸ್ತೆಗಳು ಸ್ಥಳೀಯರಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಕಿರಿಕಿರಿ ಉಂಟು ಮಾಡುತ್ತಿವೆ.

ನಗರದ ರಸ್ತೆಗಳ ದುಸ್ಥಿತಿ ಕುರಿತು ಚಿತ್ರಗಳ ಮೂಲಕ ‘ಪ್ರಜಾವಾಣಿ’ ಬೆಳಕು ಚೆಲ್ಲಿದೆ.

ಜನರಲ್‌ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಬಂದರೆ, ಕಾವೇರಿ ಕಲಾಕ್ಷೇತ್ರ, ಅದರಲ್ಲೂ ನಗರಸಭೆ ಎದುರು ಗುಂಡಿ ಅಪಾಯಕ್ಕೆ ಬಾಯ್ತೆರೆದು ನಿಂತಿದೆ. ಗಾಂಧಿ ಮೈದಾನ ಪಕ್ಕದ ರಸ್ತೆಯಲ್ಲೂ ವಿಪರೀತ ಗುಂಡಿಗಳ ಹಾವಳಿ. ಅಲ್ಲಿಂದ ರಾಜಾಸೀಟ್‌ ಮೂಲಕ ರೇಸ್‌ಕೋರ್ಸ್‌ ರಸ್ತೆಯಲ್ಲಿ ಗುಂಡಿಗಳನ್ನು ಲೆಕ್ಕಹಾಕುವುದು ಕಷ್ಟ. ಇತ್ತೀಚೆಗೆ ನಗರಸಭೆ ಮಣ್ಣು ಹಾಕಿ ಗುಂಡಿ ಮುಚ್ಚಿದೆ. ಹೀಗಾಗಿ, ಇಡೀ ರಸ್ತೆ ಕೆಸರುಮಯವಾಗಿದೆ.

ಎಫ್‌ಎಂಸಿ ಕಾಲೇಜು ತನಕವೂ ರಸ್ತೆ ಹದಗೆಟ್ಟು ಹೋಗಿದ್ದು, ಮಂಜಿನ ನಗರಿ ಖ್ಯಾತಿಯ ಮಡಿಕೇರಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಕಾಲೇಜು ರಸ್ತೆ, ಮಹದೇವಪೇಟೆ ರಸ್ತೆ, ಕೊಹಿನೂರು ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿವೆ. ಇನ್ನು ಪೆನ್ಸಶನ್‌ ರಸ್ತೆಯಲ್ಲಿ ಬೃಹತ್‌ ಗಾತ್ರದ ಗುಂಡಿಗಳು ದರ್ಶನ ನೀಡುತ್ತಿವೆ.

ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದ ಉದಾಹರಣೆಗಳೂ ಇವೆ. ಕಾವೇರಿ ಬಡಾವಣೆ, ಕನ್ನಂಡಬಾಣೆ, ಹಿಲ್‌ ರಸ್ತೆ, ಆಜಾದ್‌ ನಗರ, ಗೌಳಿಬೀದಿ, ಬ್ರಾಹ್ಮಣರ ಬೀದಿ, ಜ್ಯೋತಿ ನಗರ, ಅಶೋಕಪುರಂ, ಅಂಬೇಡ್ಕರ್‌ ಬಡಾವಣೆ, ರಾಣಿಪೇಟೆ ಹೀಗೆ ರಸ್ತೆಗಳೇ ಅಪಾಯಕ್ಕೆ ಕಾದು ಕುಳಿತಿವೆ.

ಯುಜಿಡಿಯೇ ಕಾರಣ: ನಗರದ ರಸ್ತೆಗಳು ಹಾಳಾಗಲು ಒಳಚರಂಡಿ ಕಾಮಗಾರಿ ಕಾರಣ ಎಂಬ ಆರೋಪವಿದೆ. ರಸ್ತೆ ಮಧ್ಯಭಾಗದಲ್ಲಿ ಚರಂಡಿ ತೆಗೆದು ಮಣ್ಣು ಮುಚ್ಚಿದರು. ಸಮಪರ್ಕವಾಗಿ ಡಾಂಬರ್‌ ಸಹ ಹಾಕಲಿಲ್ಲ. ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಹೀಗಾಗಿ, ಸಮಸ್ಯೆ ಉಂಟಾಯಿತು ಎಂದು ನಗರಸಭೆ ಸದಸ್ಯರು ಹೇಳುತ್ತಾರೆ.

‘ರಸ್ತೆಗಳ ದುರಸ್ತಿಗೆ ಟೆಂಡರ್‌ ನೀಡಲಾಗಿದೆ. ಆಗಸ್ಟ್‌ 15ರ ಬಳಿಕ ಬಿಸಿಲು ವಾತಾವರಣ ಕಂಡುಬರುವ ಸಾಧ್ಯತೆಯಿದೆ. ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ. ಮಳೆಯ ನಡುವೆ ಕಾಮಗಾರಿ ನಡೆಸಿದರೆ ಅದಕ್ಕೂ ವಿರೋಧ ವ್ಯಕ್ತವಾಗಲಿದೆ’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !