ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಸ್ಕೂಟರ್‌ ಅಡ್ಡಗಟ್ಟಿ ದರೋಡೆ: 7 ಆರೋಪಿಗಳ ಬಂಧನ

Published 8 ಆಗಸ್ಟ್ 2024, 4:08 IST
Last Updated 8 ಆಗಸ್ಟ್ 2024, 4:08 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣದಲ್ಲಿ ಜು.29ರಂದು ನಡೆದ ದರೋಡೆ ಪ್ರಕರಣದ 7 ಆರೋಪಿಗಳನ್ನು ಬಂಧಿಸಿದರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಕಾರು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ ಚಾಲಕ ಕೆ.ರೋಷನ್, ಕನ್ಯಾನ ಗ್ರಾಮದ ಕೃಷಿಕ ಸತೀಶ್ ರೈ, ವಿಟ್ಲ ಪಡ್ನೂರು ಗ್ರಾಮದ ಪೇಯಿಂಟರ್ ಕೆ.ಗಣೇಶ್, ವೀರಕಂಬ ಗ್ರಾಮದ ಕಾರ್ಮಿಕ ಕುಸುಮಾಕರ, ವಿರಾಜಪೇಟೆ ಪಟ್ಟಣದ ಶಿವಕೇರಿ ಅರ್ಚಕ ಸೂರ್ಯಪ್ರಸಾದ್ ಭಟ್ಟ, ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ಮರದ ವ್ಯಾಪಾರಿ ಎಚ್.ಪಿ.ವಿನೋದ್ ಕುಮಾರ್, ಹೆಬ್ಬಾಲೆ ಗ್ರಾಮದ ಕಾರ್ಮಿಕ ಬಿ.ಮೋಹನ್ ಕುಮಾರ್ ಬಂಧಿತರು.

ಜುಲೈ 29ರಂದು ರಾತ್ರಿ 8.45ರ ಸಮಯದಲ್ಲಿ ಪಟ್ಟಣದ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಮಾಲೀಕರಾದ ನೇಮರಾಜ್ ಮತ್ತು ಪತ್ನಿ ಆಶಾ ಅವರು ದ್ವಿಚಕ್ರ ವಾಹನದಲ್ಲಿ ₹6.18 ಲಕ್ಷ ನಗದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಕಿಬ್ಬೆಟ್ಟ ರಸ್ತೆಯಲ್ಲಿ ಕಾರು ಮತ್ತು ಬೈಕ್‌ನಲ್ಲಿ ಬಂದ ಆರೋಪಿಗಳು ಸ್ಕೂಟರ್‌ಅನ್ನು ಅಡ್ಡಗಟ್ಟಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

‘ಆರೋಪಿಗಳಿಂದ ₹3.2 ಲಕ್ಷ ನಗದು, ಕೃತ್ಯಕ್ಕೆ ಬಳಿಸಿದ ಎರಡು ಕಾರು, 9 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ರೋಷನ್, ಸತೀಶ್ ರೈ, ಗಣೇಶ, ಕುಸುಮಾಕರ ವಿರುದ್ಧ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಘಟನೆ ನಡೆದ ದಿನ ಎಸ್‌ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಬಂಧನಕ್ಕೆ ಎಎಸ್‌ಪಿ ಸುಂದರ್ ರಾಜ್, ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದ ವಿಶೇಷ ತಂಡಕ್ಕೆ ತನಿಖಾ ಜವಾಬ್ದಾರಿ ವಹಿಸಿದ್ದರು.

ಪ್ರಕರಣ ನಡೆದು 9 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮವಾರಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಮುದ್ದು ಮಾದೇವ, ಪಿಎಸ್ಐ ಗೋಪಾಲ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT