ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ ತಡೆಗೆ ‘ರೋಪ್‌ ಫೆನ್ಸ್’ ಯೋಜನೆ

ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಭರವಸೆ
Last Updated 16 ಅಕ್ಟೋಬರ್ 2022, 14:25 IST
ಅಕ್ಷರ ಗಾತ್ರ

ಮಡಿಕೇರಿ: ವನ್ಯಜೀವಿ- ಮಾನವ ಸಂಘರ್ಷ ತಡೆಯಲು ತಮಿಳುನಾಡು ಮಾದರಿಯಲ್ಲಿ ‘ರೋಪ್ ಫೆನ್ಸ್’ನ್ನು ಪ್ರಾಯೋಗಿಕವಾಗಿ ಇಲ್ಲಿನ ನಾಗರಹೊಳೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಕೊಡಗು ಕಾಫಿ ಬೆಳೆಗಾರರ ಸಂಘದ 143ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಡಾನೆಗಳ ದಾಳಿ ತಡೆಯಲು ಬಜೆಟ್‌ನಲ್ಲಿ ನಿಗದಿಪಡಿಸಿರುವ ₹ 5 ಕೋಟಿಗೆ ಹೆಚ್ಚುವರಿಯಾಗಿ ಮತ್ತೆ ₹ 5 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಯಶಸ್ವಿಯಾಗಿರುವ ‘ರೋಪ್ ಫೆನ್ಸ್’ ತಂತ್ರಜ್ಞಾನವನ್ನೂ ಈ ಅನುದಾನ ಬಳಸಿಕೊಂಡು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ ಎಂದು ಹೇಳಿದರು.

ಕಾಡಾನೆಗಳು ಆಹಾರಕ್ಕಾಗಿ ಹಳ್ಳಿಗಳತ್ತ ಬರುತ್ತಿವೆ. ಕಾಡಿನಲ್ಲಿ ಅವುಗಳಿಗೆ ಆಹಾರದ ಕೊರತೆ ಆಗದಂತೆ ಕ್ರಮ ಕೈಗೊಳ್ಳುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ. ಆದರೆ,ವನ್ಯಜೀವಿಗಳಿಂದ ಕೖಷಿ ಜಮೀನು ಹಾನಿಗೆ ಶೇ 100ರಷ್ಟು ಪರಿಹಾರ ನೀಡಲು ವಾಸ್ತವ ನೆಲೆಗಟ್ಟಿನಲ್ಲಿ ಅಸಾಧ್ಯ ಎಂದರು.

ಕಾಫಿಯ ಬಳಕೆ ಹೆಚ್ಚಿಸಲು ಸಲಹೆ
ಭಾರತೀಯ ಕಾಫಿಯ ಆಂತರಿಕ ಬಳಕೆ ಹೆಚ್ಚಿಸಬೇಕು. ವಿದೇಶಿ ಸಂಸ್ಥೆಗಳು ದೇಶದಲ್ಲಿ ಕಾಫಿ ಮಳಿಗೆ ಪ್ರಾರಂಭಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಫಿ ಮಳಿಗೆಗಳನ್ನು ನಗರಗಳ ಮಾದರಿಯಲ್ಲಿ ತೆರೆದರೆ ಕಾಫಿಯ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.

2015-16ನೇ ಸಾಲಿನಲ್ಲಿ 3.05 ಮೆಟ್ರಿಕ್ ಟನ್ ಉತ್ಪಾದಿಸಲಾಗುತ್ತಿದ್ದ ಭಾರತೀಯ ಕಾಫಿ 2022-23ನೇ ಸಾಲಿನಲ್ಲಿ ದಾಖಲೆಯ 4 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಭಾರತದ ಅರೆಬಿಕಾ ಕಾಫಿ ಇಂದಿಗೂ ವಿಶ್ವದಲ್ಲಿಯೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ ಎಂದು ಶ್ಲಾಘಿಸಿದರು.

ಬಿದಿರು ಬೆಳೆಸಲು ಕ್ರಮ
ಕೊಡಗು ವೖತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನಮೂರ್ತಿ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿರುವ 1,300 ಕಾಡಾನೆಗಳ ಪೈಕಿ 200ರಷ್ಟು ಆನೆಗಳು ಜನವಸತಿ ಪ್ರದೇಶಗಳತ್ತ ದಾಳಿ ನಡೆಸುತ್ತಿವೆ. ಕಾಡಿನಲ್ಲಿ ಬಿದಿರು ಕಡಿಮೆಯಾಗಿರುವುದರಿಂದ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದಕ್ಕಾಗಿ ಕೊಡಗು ಜಿಲ್ಲೆಯಲ್ಲಿ 15 ಸಾವಿರ ಮೆಟ್ರಿಕ್‌ ಟನ್‌ಗಳಷ್ಟು ಬಿದಿರು ಸಸಿಗಳನ್ನು ನೆಡಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ವರ್ಷ 3 ಕಾಡಾನೆಗಳು ತೋಟಗಳ ನಡುವೆ ತಳಮಟ್ಟದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟವು. ಕಾಫಿ ಬೆಳೆಗಾರರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ವನ್ಯಜೀವಿಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಮೋಹನ್‌ದಾಸ್ ಅವರು ಕೊಡಗಿನಲ್ಲಿ ಕೖಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ಇತರ ಬೆಳೆಗಳನ್ನು ಪರಿಗಣಿಸಿರುವಂತೆಯೇ ಕಾಫಿಯನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕೊಡಗು ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಸಿ.ಯು.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT