ಕಾಡಿನ ನಿಶ್ಯಬ್ದದಲ್ಲಿ ಜೇನು ಕೀಳುವ, ಹಣ್ಣು ಆಯುವ, ಗಿಡಮೂಲಿಕೆ ಅರೆಯುವ ಕೈಗಳಿಗೆ ಬಿಲ್ಲು-ಬಾಣ ಹಿಡಿಯಲು ಕಲಿಸಿದ ಆ ಚೇತನ ಇನ್ನಿಲ್ಲ. ಹಸಿದ ಹೊಟ್ಟೆ ತುಂಬಿಸಲು ಮಣ್ಣು ತಿನ್ನುತ್ತಿದ್ದ ಸೋಲಿಗರ ಒಡಲ ಬೇಗೆಯನ್ನು ಕಂಡು ತನ್ನಿಡೀ ಬದುಕನ್ನೇ ಹೋರಾಟದ ದಳ್ಳುರಿಗೆ ಒಡ್ಡಿಕೊಂಡ ಆ ಮುತ್ಸದ್ಧಿ ಈಗ ಬದುಕಿನ ಯಾತ್ರೆ ಮುಗಿಸಿದ್ದಾರೆ. ಕೊಡಗಿನ ಗಿರಿಶಿಖರಗಳ ನಡುವೆ, ನಾಗರಹೊಳೆಯ ಹಸಿರು ಮಡಿಲಲ್ಲಿ ‘ಬುಡಕಟ್ಟು ಕೃಷಿಕರ ಸಂಘ’ದ ಮೂಲಕ ಅಪ್ರತಿಮ ಕ್ರಾಂತಿ ಸೃಷ್ಟಿಸಿದ ವಿಜಯಸಿಂಗ್ ರೆನಾರ್ಡ್ ರಾಯ್ ಡೇವಿಡ್ ಅವರ ನಿರ್ಗಮನ ಕೇವಲ ಒಬ್ಬ ವ್ಯಕ್ತಿಯ ಅಂತ್ಯವಲ್ಲ; ಅದೊಂದು ಧೀಮಂತ ಹೋರಾಟದ ಯುಗದ ಮುಕ್ತಾಯ.

ಅದು 1976ರ ಕಾಲಘಟ್ಟ. ಸರ್ಕಾರಿ ಕಾಗದಗಳ ಮೇಲೆ ದೇವರಾಜ ಅರಸರ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಅಬ್ಬರಿಸುತ್ತಿತ್ತು. ಆದರೆ ವಾಸ್ತವದ ನೆಲೆಯಲ್ಲಿ ಧಣಿಗಳ ದೌರ್ಜನ್ಯ ಮುಗಿಲು ಮುಟ್ಟಿತ್ತು. ಪದವೀಧರ ಯುವಕ ರಾಯ್ ಡೇವಿಡ್ ಅಂದು ದಕ್ಷಿಣ ಕನ್ನಡ ಜಿಲ್ಲೆಯ ಅಬ್ಬೆಟ್ಟು ಗ್ರಾಮಕ್ಕೆ ಕಾಲಿಟ್ಟಾಗ ಎದುರಾಗಿದ್ದು ರಕ್ತಸಿಕ್ತ ಬಟ್ಟೆ ತೊಟ್ಟ ಗ್ರಾಮೀಣ ಮಹಿಳೆಯರ ಆರ್ತನಾದ ಹಾಗೂ ಪ್ರಾಣಭಯದಿಂದ ಬೆಟ್ಟಗುಡ್ಡಗಳಲ್ಲಿ ಅಡಗಿ ಕುಳಿತಿದ್ದ ದಲಿತರ ಆಕ್ರಂದನ. ಜಯಪ್ರಕಾಶ ನಾರಾಯಣ ಅವರು ಅಂದು ಯುವ ಡೇವಿಡ್ ಅವರ ಹೆಗಲ ಮೇಲೆ ಕೈಯಿಟ್ಟು, ‘ಈ ಜನರನ್ನು ಇಂತಹ ಸ್ಥಿತಿಯಿಂದ ಹೊರಗೆ ತರಬೇಕು’ ಎಂದಾಗ, ಅದು ಕೇವಲ ಬಾಯಿ ಮಾತಾಗಿ ಉಳಿಯಲಿಲ್ಲ; ಡೇವಿಡ್ ಬದುಕಿನ ಮಹಾ ದೀಕ್ಷೆಯಾಯಿತು.

ಮಹಿಳೆಯರನ್ನು ಸಂಘಟಿಸಿ ‘ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ’ ಕಟ್ಟಿದಾಗ ಧಣಿಗಳ ಸಾಮ್ರಾಜ್ಯ ನಡುಗಿತು. ಸುಳ್ಳು ಕೇಸುಗಳು, ದೌರ್ಜನ್ಯಗಳು, ಮಹಿಳೆಯರ ಮೇಲೆ ಅತ್ಯಾಚಾರದ ಯತ್ನಗಳು ನಡೆದಾಗ ಡೇವಿಡ್ ಅಂಜಲಿಲ್ಲ. ಈ ಹೋರಾಟದ ಹಾದಿಯಲ್ಲಿ ಅವರು ತಮ್ಮ ಒಂದು ಕೈಯನ್ನೇ ಕಳೆದುಕೊಳ್ಳಬೇಕಾಯಿತು. ಆದರೆ, ಆ ಅಂಗವೈಕಲ್ಯ ಅವರೊಳಗಿನ ಹೋರಾಟಗಾರನನ್ನು ಮತ್ತಷ್ಟು ಉಗ್ರವಾಗಿಸಿತೇ ಹೊರತು ಕುಗ್ಗಿಸಲಿಲ್ಲ. ಮುಂಬೈ, ಬೆಂಗಳೂರಿನ ಸ್ಲಂಗಳಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುವ ವಲಸೆ ಕಾರ್ಮಿಕರನ್ನು ಕಂಡಾಗ, ‘ಗ್ರಾಮಗಳಲ್ಲೇ ಗಟ್ಟಿ ಬದುಕು ಕಟ್ಟಿಕೊಡಬೇಕು’ ಎಂಬ ದೃಢಸಂಕಲ್ಪದೊಂದಿಗೆ ಅವರು ಕೊಡಗಿನ ಕಾಡುಗಳಿಗೆ ಮರಳಿದರು.

ನಾಗರಹೊಳೆಯ ಹಂದಿಗುಡ್ಡ ಕಾವಲು ಎಂಬಲ್ಲಿ ಸೋಲಿಗರ ಹಾಡಿಗೆ ಡೇವಿಡ್ ಹೋದಾಗ ಕಂಡ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಗಂಡಸರ ಮೈಯೆಲ್ಲಾ ಊತ ಕಾಣಿಸಿಕೊಂಡರೆ, ಹೆಂಗಸರಿಗೆ ಗರ್ಭಪಾತಗಳಾಗಿ ಶಿಶುಗಳು ಸಾಯುತ್ತಿದ್ದವು. ಕಾರಣ ಹುಡುಕ ಹೊರಟಾಗ ಸಿಕ್ಕ ಸತ್ಯ ಎದೆಯನ್ನು ಹಿಂಡುವಂತಿತ್ತು. ಹಸಿವಿನ ತೀವ್ರತೆಗೆ ಅಲ್ಲಿನ ಆದಿವಾಸಿಗಳು ಜೇಡಿಮಣ್ಣನ್ನು ಹುರಿದು ಕಡಲೆಕಾಯಿಯಂತೆ ತಿನ್ನುತ್ತಿದ್ದರು.

ಡೇವಿಡ್ ಕೇವಲ ಭಾಷಣ ಮಾಡಲಿಲ್ಲ. ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರು. ಅವರಿಗೆ ಕೃಷಿಯ ಪಾಠ ಮಾಡಿದರು. ಹಸುಗಳನ್ನು ತಮ್ಮ ಹಣದಿಂದ ಕೊಡಿಸಿದರು. ಮಕ್ಕಳಿಗಾಗಿ ಕುಟೀರ ಶಾಲೆ ತೆರೆದರು. ‘ನಮ್ಮ ಜನ ನಿದ್ರಿಸುತ್ತಿದ್ದಾರೆ, ಅವರನ್ನು ಎಚ್ಚರಿಸಿ’ ಎಂದು ಆದಿವಾಸಿಗಳು ಕೇಳಿಕೊಂಡಾಗ, ಡೇವಿಡ್ ಇಡೀ ಕಾಡಿನ 22 ಹಾಡಿಗಳನ್ನು ಒಟ್ಟುಗೂಡಿಸಿ 1984ರಲ್ಲಿ ‘ಬುಡಕಟ್ಟು ಕೃಷಿಕರ ಸಂಘ’ಕ್ಕೆ ಜನ್ಮ ನೀಡಿದರು. ಅಲ್ಲಿಂದ ಶುರುವಾಯಿತು ನೋಡಿ ಗಿರಿಜನರ ಆತ್ಮವಿಶ್ವಾಸದ ಜೈತ್ರಯಾತ್ರೆ.

ಬಿಲ್ಲಿನ ಝೇಂಕಾರ

ರಾಯ್ ಡೇವಿಡ್ ಅವರ ಹೋರಾಟದ ಇತಿಹಾಸದಲ್ಲಿ ರಾಣಿಗೇಟಿನ ಕಾಳಗ ರೋಮಾಂಚನಕಾರಿಯಾದದ್ದು. ಸುಗಂಧ ದ್ರವ್ಯ ಕಂಪನಿಗೆ ಗಿರಿಜನರ ಭೂಮಿ ನೀಡಿದಾಗ ತಾಯ್ನೆಲಕ್ಕಾಗಿ ಆದಿವಾಸಿಗಳು ಮರುಹೋರಾಟಕ್ಕೆ ನಿಂತರು. ಬೆಂಬಲಕ್ಕೆ ಬಂದಂತೆ ನಟಿಸಿ, ಗಿರಿಜನರ ಫಲವತ್ತಾದ ಭೂಮಿಯನ್ನೇ ಕಬಳಿಸಲು ಬಂದ ರೈತ ಸಂಘದ ಧೋರಣೆಯನ್ನು ಆದಿವಾಸಿಗಳು ಸಹಿಸಲಿಲ್ಲ. 500 ಜನ ರೈತ ಸಂಘದವರ ವಿರುದ್ಧ ಬಿಲ್ಲು-ಬಾಣ ಹಿಡಿದು ನಿಂತಿದ್ದು ಕೇವಲ 150 ಜನ ಗಿರಿಜನರು. ಅಂದು ಕಾಡಿನ ಮಕ್ಕಳು ತೋರಿದ ರೌದ್ರಾವತಾರಕ್ಕೆ ರೈತ ಸಂಘದವರು ಹೊಳೆಗೆ ಬಿದ್ದು ಓಡಬೇಕಾಯಿತು.

ಅರಣ್ಯ ಇಲಾಖೆಯು ಇವರ ಬೆಳೆಗಳನ್ನು ತುಳಿದಾಗ, ‘ನಮ್ಮ ಮಕ್ಕಳನ್ನೇ ಕೊಂದ ಹಾಗಾಯಿತು’ ಎಂದು ರೊಚ್ಚಿಗೆದ್ದ ಆದಿವಾಸಿಗಳು ಅರಣ್ಯಾಧಿಕಾರಿಗಳನ್ನು ಹತ್ತು ಕಿಲೋಮೀಟರ್ವರೆಗೆ ಕಾಲಿಗೆ ಬುದ್ಧಿ ಹೇಳುವಂತೆ ನಡೆಸಿದ್ದರು. ದರ್ಪದಿಂದ 69 ಗುಡಿಸಲುಗಳನ್ನು ಸುಟ್ಟಾಗಲೂ ಧೃತಿಗೆಡದ ಡೇವಿಡ್, ಜಿಲ್ಲಾಧಿಕಾರಿಯವರನ್ನೇ ಸ್ಥಳಕ್ಕೆ ಕರೆತಂದು ಪ್ರತಿ ಮನೆಗೆ ನಾಲ್ಕು ಎಕರೆ ಜಮೀನು ಕೊಡಿಸಿದರು. ಆಶ್ರಮ ಶಾಲೆ ತೆರೆಸಿದರು. ತಂತಿ ಬೇಲಿ ಹಾಗೂ ಪಂಪ್ಸೆಟ್ಗಳನ್ನು ಕೊಡಿಸಿ ಇತಿಹಾಸ ಬರೆದರು.

ನಾಗರಹೊಳೆಯ ಮೂರುಕಲ್ಲಿನ ಬಳಿ ಭವ್ಯ ತಾಜ್ ಹೋಟೆಲ್ ತಲೆಯೆತ್ತಲು ನಿಂತಾಗ, ಲಂಚದ ಆಮಿಷ ಮೆಟ್ಟಿನಿಂತು ಹೋಟೆಲ್ ಬರದಂತೆ ತಡೆದರು. ಇಂದು ಕಾಡುಪ್ರಾಣಿಗಳ ಆವಾಸಸ್ಥಾನವಾಗಿರುವ ಆ ಅರ್ಧಂಬರ್ಧ ಕಟ್ಟಡಗಳು ಆದಿವಾಸಿಗಳ ಸ್ವಾಭಿಮಾನದ ವಿಜಯ ಸ್ಮಾರಕಗಳಂತೆ ಕಂಗೊಳಿಸುತ್ತಿವೆ. ವಿಶ್ವಬ್ಯಾಂಕಿನ ಪರಿಸರ ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ನಡೆದ ಭ್ರಷ್ಟಾಚಾರವನ್ನು ವಿರೋಧಿಸಿ ಮಡಿಕೇರಿ ಜೈಲು ಸೇರಿದಾಗ, ಡೇವಿಡ್ ಮತ್ತು ಅವರ ಐದು ಜನ ಸಂಗಾತಿಗಳು ನಡೆಸಿದ 92 ದಿನಗಳ ಉಪವಾಸ ಸತ್ಯಾಗ್ರಹ, ಕಡೆಗೆ ಜೈಲಿನಲ್ಲಿ ಕುಡಿಯಲು ನೀರಿಲ್ಲದೆ ಮೂತ್ರ ಕುಡಿದ ಪ್ರಸಂಗ ಅಪ್ರತಿಮ ತ್ಯಾಗಕ್ಕೆ ಸಾಕ್ಷಿ. ಮುಂದೆ ‘ಪೆಸಾ’ ಕಾಯ್ದೆ ಜಾರಿಗೆ ಬಂದು ಆದಿವಾಸಿಗಳಿಗೆ ಸ್ವಯಂ ಆಡಳಿತದ ಹಕ್ಕು ಸಿಗುವಂತಾಯಿತು. 2006ರ ಅರಣ್ಯ ಹಕ್ಕು ಕಾಯ್ದೆಯ ಹಿಂದೆ ಇವರ ಸುದೀರ್ಘ ಹೋರಾಟದ ಬೆವರಿದೆ.

‘ಪ್ರಪಂಚದ ವೈಜ್ಞಾನಿಕ ಅಧ್ಯಯನದ ಪ್ರಕಾರ ಎಲ್ಲಿ ಗಿರಿಜನರಿದ್ದಾರೋ ಅಲ್ಲಿ ಕಾಡು ಸುರಕ್ಷಿತವಾಗಿದೆ. ಕಾಡು ಇವರಿಗೆ ಹಣ ಮಾಡುವ ವಸ್ತುವಲ್ಲ, ಅದು ಅವರ ದೇವರು, ಪ್ರಾಣಿ-ಪಕ್ಷಿಗಳು ಅವರ ಬಂಧುಬಳಗ’ ಎಂಬ ರಾಯ್ ಡೇವಿಡ್ ಅವರ ಮಾತುಗಳು ಇಂದಿನ ನಕಲಿ ಪರಿಸರವಾದಿಗಳಿಗೆ ಚಾಟಿ ಏಟಿನಂತಿವೆ. ಒಂದು ಕೈಯನ್ನು ಕಳೆದುಕೊಂಡರೂ, ಇಡೀ ಬುಡಕಟ್ಟು ಜನಾಂಗಕ್ಕೆ ಸಹಸ್ರ ಹಸ್ತಗಳ ಶಕ್ತಿಯನ್ನು ತುಂಬಿದ ರಾಯ್ ಡೇವಿಡ್ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಹಚ್ಚಿದ ಹೋರಾಟದ ಹಣತೆ ನಾಗರಹೊಳೆಯ ಪ್ರತಿ ಹಾಡಿಯಲ್ಲಿ, ಪ್ರತಿಯೊಬ್ಬ ಆದಿವಾಸಿಯ ಕಣ್ಣಿನ ಭರವಸೆಯಾಗಿ ಸದಾ ಉರಿಯುತ್ತಿರುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.