ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಯಿಂದಾಗಿ ರಾಯ್ ಡಿಸೋಜಾ ಸಾವು ಪ್ರಕರಣ; ಸಿಐಡಿ ತನಿಖೆ ಆರಂಭ- ಪೊಲೀಸರ ವಿಚಾರಣೆ

Last Updated 13 ಜೂನ್ 2021, 13:40 IST
ಅಕ್ಷರ ಗಾತ್ರ

ಮಡಿಕೇರಿ/ವಿರಾಜಪೇಟೆ: ಪೊಲೀಸರ ಅಮಾನುಷ ಹಲ್ಲೆಯಿಂದ ಮೃತಪಟ್ಟಿದ್ದ ಪಟ್ಟಣದ ರಾಯ್‌ ಡಿಸೋಜಾ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಹಲ್ಲೆ ನಡೆಸಿದ್ದರು ಎನ್ನಲಾದ ಪೊಲೀಸ್‌ ಸಿಬ್ಬಂದಿ ವಿಚಾರಣೆ ಭಾನುವಾರ ನಡೆಯಿತು.
ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ನಾಲ್ವರು ಸಿಐಡಿ ಅಧಿಕಾರಿಗಳು, ವಿರಾಜಪೇಟೆಗೆ ಆಗಮಿಸಿದ್ದು ಪ್ರಕರಣಕ್ಕೆ ಸಂಬಂಧಿದಂತೆ ಮಾಹಿತಿ ಕಲೆ ಹಾಕಿದರು.

ರಾಯ್‌ ಡಿಸೋಜಾ
ರಾಯ್‌ ಡಿಸೋಜಾ

ಪ್ರಕರಣದಲ್ಲಿ, ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿ ನೆಹರು, ಎಂ.ಯು.ಸುನೀಲ್, ರಮೇಶ್, ಪ್ರದೀಪ್, ಲೋಕೇಶ್, ತನುಕುಮಾರ್, ಎಂ.ಎಲ್.ಸುನೀಲ್ ಹಾಗೂ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದರು. ಡಿವೈಎಸ್‌ಪಿ ಜಯಕುಮಾರ್ ಅವರು ಎಸ್‌ಪಿಗೆ ಸಲ್ಲಿಸಿದ್ದ ಪ್ರಾಥಮಿಕ ವರದಿಯನ್ನೂ ಸಿಐಡಿ ತಂಡವು ಪಡೆದುಕೊಂಡಿತು. ಇನ್ನೂ ಎರಡು ದಿನ ತನಿಖೆ ನಡೆಯಲಿದ್ದು, ರಾಯ್‌ ಅವರ ಕುಟುಂಬಸ್ಥರು ಹಾಗೂ ಕ್ರೈಸ್ತ ಧರ್ಮದ ಮುಖಂಡರಿಂದ ಮಾಹಿತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಯ್ ಡಿಸೋಜಾ ಅವರ ಅಂತ್ಯಕ್ರಿಯೆ ಕ್ರೈಸ್ತ ಧರ್ಮದ ವಿಧಿ ವಿಧಾನದಂತೆ ಸೇಂಟ್‌ ಅನ್ನಮ್ಮ ದೇವಾಲಯಕ್ಕೆ ಸೇರಿದ ರುದ್ರಭೂಮಿಯಲ್ಲಿ ನೆರವೇರಿತು. ಧರ್ಮಗುರು ಮದಲೈ ಮುತ್ತು, ಕ್ರೈಸ್ತ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೇಬಿ ಮ್ಯಾಥ್ಯೂ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್, ಪಟ್ಟಣ ಪಂಚಾಯಿತಿ ಸದಸ್ಯ ಬೆನ್ನಿ ಆಗಸ್ಟಿನ್, ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಅಂತಿಮ ನಮನ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ರಾಯ್ ಅವರ ತಾಯಿ ಮೆಟಿಲ್ಡಾ ಲೊಬೊ ಅವರೊಂದಿಗೆ ದೂರವಾಣಿ ಮೂಲಕ ಘಟನೆಯ ಮಾಹಿತಿ ಪಡೆದುಕೊಂಡರು.

ರಾಯ್ ಡಿಸೋಜಾ ಅವರು ಮಾರಣಾಂತಿಕ ಹಲ್ಲೆಗೊಳಗಾಗಿ ಶನಿವಾರ ಮಡಿಕೇರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ನಡೆಸಿದ ಹಲ್ಲೆಯಿಂದಲೇ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಸಂಘಟನೆಗಳೂ ತನಿಖೆಗೆ ಆಗ್ರಹಿಸಿದ್ದವು. ಪ್ರಾಥಮಿಕ ವರದಿ ಆಧರಿಸಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಪೊಲೀಸರ ಅಮಾನತು ಮಾಡಿದ್ದರು.

‘ಹೊಡೆದು ಕೊಂದಿರುವುದು ಸರಿಯೇ?’: ಧರ್ಮಾಧ್ಯಕ್ಷರ ಆಕ್ರೋಶ

ರಾಯ್‌ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಕೋರಿ, ಮೈಸೂರು ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷ ಡಾ.ಕೆ.ಎಂ.ವಿಲಿಯಂ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

‘ಕೆಲವು ಪೊಲೀಸರು ರಾಯ್ ಡಿಸೋಜಾ ಅವರ ತಾಯಿಯನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ, ದೂರು ನೀಡದಂತೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಕೋರಿದ್ದರು. ಮಂಗಳೂರಿಗೆ ಕರೆದೊಯ್ದು, ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿ ಮನವೊಲಿಸಲು ಯತ್ನಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದ ಎನ್ನುವ ಕಾರಣಕ್ಕೆ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪೊಲೀಸರೇ ಹೊಡೆದು ಕೊಂದಿರುವುದು ಸರಿಯೇ’ ಎಂದು ವಿಲಿಯಂ ಪ್ರಶ್ನಿಸಿದ್ದಾರೆ.

***

ಈ ಘಟನೆಯು ಕ್ರೈಸ್ತ ಸಮುದಾಯಕ್ಕೆ ನೋವು ತಂದಿದೆ. ತಪ್ಪಿತಸ್ಥ ಸಿಬ್ಬಂದಿಗೆ ಶಿಕ್ಷೆ ಆಗಬೇಕು. ಇಂತಹ ಘಟನೆಗಳು, ಮತ್ತೆ ರಾಜ್ಯದಲ್ಲಿ ಎಲ್ಲೂ ಮರುಕಳುಹಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು

-ಡಾ.ಕೆ.ಎಂ.ವಿಲಿಯಂ, ಧರ್ಮಾಧ್ಯಕ್ಷ, ಮೈಸೂರು ಧರ್ಮಾಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT