ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ‘ಗ್ರಾಮೀಣ ಇತಿಹಾಸ’ದ ದಾಖಲೀಕರಣ ನಡೆಯಲಿ: ಡಾ.ನೆರವಂಡ ವೀಣಾ ಪೂಣಚ್ಚ

ಮುಂಬೈ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕಿ ಡಾ.ನೆರವಂಡ ವೀಣಾ ಪೂಣಚ್ಚ ಪ್ರತಿ
Last Updated 14 ಅಕ್ಟೋಬರ್ 2022, 14:04 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಹಿಂದಿನ ‘ಗ್ರಾಮೀಣ ಇತಿಹಾಸ’ದ ದಾಖಲೀಕರಣ ನಡೆಯಬೇಕು ಎಂದು ಮುಂಬೈನ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕಿ ಡಾ.ನೆರವಂಡ ವೀಣಾ ಪೂಣಚ್ಚ ತಿಳಿಸಿದರು.

ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಡಿಕೇರಿ ಕೊಡವ ಸಮಾಜ ಗುರುವಾರ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ಸಂಶೋಧನಾ ದಿನ’ ಕಾರ್ಯಕ್ರಮದಲ್ಲಿ ಪುಸ್ತಕ ಮತ್ತು ಸಂಶೋಧನಾ ಒಟ್ಟು 17 ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಲಭ್ಯವಿರುವ ಇತಿಹಾಸವು ರಾಜವಂಶಸ್ಥರು, ರಾಜರು ಮತ್ತು ಅವರ ಆಳ್ವಿಕೆಯ ಮಾಹಿತಿಗಳನ್ನು ಮಾತ್ರವೇ ಒದಗಿಸುತ್ತವೆ. ಆದರೆ, ಕೊಡವ ಭಾಷಿಕರ ಹಿಂದಿನ ಗ್ರಾಮೀಣ ಪ್ರದೇಶದ ಪೂರ್ವಜರ ಬದುಕು, ಪರಂಪರೆಯ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ತಿಳಿಸಿದರು.

ಗ್ರಾಮೀಣ ಸಂಸ್ಕೃತಿ, ಪರಂಪರೆ, ಹಿಂದಿನ ದಿನಮಾನಗಳಿಗೆ ಸಂಬಂಧಿಸಿದಂತೆ ಅಲಿಖಿತವಾಗಿ ಬಾಯ್ದೆರೆಯಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಬಂದ ವಿಚಾರಗಳನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ಸಂಗ್ರಹಿಸಿ ಗ್ರಾಮೀಣ ಇತಿಹಾಸವನ್ನು ಉಳಿಸಿ ಬೆಳಸಲು ಪ್ರಯತ್ನಗಳು ನಡೆಯಬೇಕು ಎಂದು ಪ್ರತಿಪಾದಿಸಿದರು.

ಕೊಡಗಿನಲ್ಲಿ ಈ ಹಿಂದೆ ನೆಲೆಸಿದ್ದ ಪೂರ್ವಜರ ಬದುಕು ಹೇಗಿತ್ತು, ಅರಣ್ಯ ಪ್ರದೇಶಗಳಲ್ಲಿ ಅಂದಿನ ಜನರ ಜೀವನ ಶೈಲಿ ಏನಾಗಿತ್ತು ಎನ್ನುವ ಅಂಶಗಳತ್ತ ಗ್ರಾಮೀಣ ಇತಿಹಾಸದ ದಾಖಲೀಕರಣದ ಮೂಲಕ ಬೆಳಕು ಚೆಲ್ಲುವ ಕಾರ್ಯ ನಡೆಯುವುದು ಅತ್ಯವಶ್ಯ ಎಂದರು.

ಕೊಡಗಿನಲ್ಲಿ ಕೊಡವ ಭಾಷೆಗಳನ್ನಾಡುವ ವಿವಿಧ ಸಮುದಾಯಗಳಿವೆ. ಇವೆಲ್ಲವೂ ತಮ್ಮದೇ ಆದ ಆಚಾರ, ವಿಚಾರ, ಶ್ರೀಮಂತ ಸಂಸ್ಕೃತಿ ಹೊಂದಿವೆ. ಇವುಗಳು ದಾಖಲಾಗಿ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದು ಹೇಳಿದರು.

ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪ ಅವರು ಮಾತನಾಡಿ, ‘ಕೊಡಗರ ಕಲೆ-ಸಂಸ್ಕೃತಿ ವಿಶಿಷ್ಟವಾದದ್ದು ಅದನ್ನು ಉಳಿಸಿಕೊಳ್ಳುವಂತ ಕೆಲಸವಾಗಬೇಕು. ಯುವಜನರು ಕೊಡಗಿನ ಆಚಾರ-ವಿಚಾರ ಬೆಳೆಸುವಂತಾಗಬೇಕು. ಮುಂದಿನ ಪೀಳಿಗೆಗೆಕೊಡವ ಭಾಷೆ ಮತ್ತು ಸಂಸ್ಕೃತಿ ಉಳಿಸುವಂತಾಗಬೇಕು’ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ‘ಕೊಡಗಿನ ಆಚಾರ-ವಿಚಾರ ಸಂಸ್ಕೃತಿಯು ವಿಶಿಷ್ಟ ಮಾನ್ಯತೆ ಪಡೆದಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಎಲ್ಲಾ ಭಾಷೆಗಳಿಗೂ ಅದರದೇ ಆದ ಮಾನ್ಯತೆಯಿದೆ ಅಂತೆಯೇ ಕೊಡವ ಭಾಷೆಗೂಹೆಚ್ಚಿನ ಮಾನ್ಯತೆ ಇದೆ’ ಎಂದು ಹೇಳಿದರು.

ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT