ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಗ್ರಂಥಾಲಯಗಳಿಗೆ ಸೆಡ್ಡು ಹೊಡೆಯುತ್ತಿವೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು

ನಗರಕ್ಕಿಂತ ಗ್ರಾಮೀಣ ಗ್ರಂಥಾಲಯವೇ ಮೇಲು Primary tabs
Last Updated 12 ಸೆಪ್ಟೆಂಬರ್ 2022, 22:30 IST
ಅಕ್ಷರ ಗಾತ್ರ

ಮಡಿಕೇರಿ: ಸಾಮಾನ್ಯವಾಗಿ ಮೂಲಸೌಕರ್ಯ ಸೇರಿದಂತೆ ಬಹುತೇಕ ಎಲ್ಲ ವಿಚಾರಗಳಲ್ಲೂ ಗ್ರಾಮೀಣ ಪ್ರದೇಶಗಳು ಹಿಂದುಳಿದಿದ್ದರೆ, ನಗರ, ಪಟ್ಟಣ ಪ್ರದೇಶಗಳು ಹಲವು ಪಟ್ಟು ಉತ್ತಮವಾಗಿರುತ್ತವೆ. ಆದರೆ, ಕೊಡಗು ಜಿಲ್ಲೆಯ ಗ್ರಂಥಾಲಯಗಳ ವಿಷಯದಲ್ಲಿ ಇದು ಮಾತ್ರ ತಲೆಕೆಳಗಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತವಾದ ಗ್ರಂಥಾಲಯಗಳಿದ್ದರೆ, ನಗರ, ಪ್ರದೇಶಗಳಲ್ಲಿರುವ ಗ್ರಂಥಾಲಯಗಳು ಬಡಕಲಾಗಿವೆ.

ಗ್ರಂಥಾಲಯ ಇಲಾಖೆಗೆ ಸೇರಿದ 5 ಗ್ರಂಥಾಲಯಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ 2 ಮಡಿಕೇರಿಯಲ್ಲೇ ಇವೆ. ಹೀಗಿದ್ದರೂ, ಜನಸಾಮಾನ್ಯರನ್ನು ತಲುಪುವಲ್ಲಿ ಇವು ವಿಫಲವಾಗಿವೆ. ಇದಕ್ಕೆ ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸೆಸ್ ಒಂದು ಕಾರಣವಾದರೆ, ಸಿಬ್ಬಂದಿ ಕೊರತೆ ಮತ್ತೊಂದು ಮಹತ್ವದ ಕಾರಣಗಳೆನಿಸಿವೆ.

ಮಡಿಕೇರಿ ನಗರಸಭೆ ನಿಯಮಿತವಾಗಿ ಸೆಸ್‌ನ್ನು ಪಾವತಿ ಮಾಡುತ್ತಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಲೀಲಾವತಿ ಹೇಳುತ್ತಾರೆ. ಕಳೆದ ಮೇ ಹೊತ್ತಿಗೆ ₹ 7 ಲಕ್ಷ ಸೆಸ್‌ನ್ನು ನಗರಸಭೆ ಪಾವತಿಸಿದೆ. ಉಳಿದ ಸ್ಥಳೀಯ ಸಂಸ್ಥೆಗಳ ಬಾಕಿ ಪಾವತಿ ತೃಪ್ತಿಕರವಾಗಿಲ್ಲ. ಇದು ಗ್ರಂಥಾಲಯಗಳ ಮೂಲಸೌಕರ್ಯದ ಅಭಿವೃದ್ಧಿಗೆ ಮಾತ್ರವಲ್ಲ ಗ್ರಂಥಾಲಯ ಶಾಖೆಗಳ ಹೆಚ್ಚಳಕ್ಕೆ ತೊಡಕಾಗಿದೆ.

ಸಿಬ್ಬಂದಿ ಕೊರತೆ

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಜಿಲ್ಲೆಯಲ್ಲಿ 21 ಮಂಜೂರಾಗಿರುವ ಹುದ್ದೆಗಳಿವೆ. ಆದರೆ, ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 3. ಇರುವ 5 ಗ್ರಂಥಾಲಯಕ್ಕಾದರೂ ಕಾಯಂ ಸಿಬ್ಬಂದಿಗಳು ಇಲ್ಲ. ಉಪನಿರ್ದೇಶಕರ ಹುದ್ದೆಯೂ ಖಾಲಿ ಇದ್ದು, ಹಿರಿಯ ಗ್ರಂಥಾಪಾಲಕರೇ ಇದರ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿ, ಸಾರ್ವಜನಿಕ ಗ್ರಂಥಾಲಯ ಸಾರ್ವಜನಿಕರಿಂದ ದೂರವೇ ಉಳಿದಿದೆ.

ಕುಶಾಲನಗರದಲ್ಲಿ ಇದ್ದೂ ಇಲ್ಲದಂತಿರುವ ಗ್ರಂಥಾಲಯ

ವ್ಯಾಪಾರ, ಶಿಕ್ಷಣ ಮೊದಲಾದ ಕ್ಷೇತ್ರದಲ್ಲಿ ದಾಪುಗಾಲಿಕ್ಕುತ್ತಿರುವ ಕುಶಾಲನಗರದಲ್ಲಿರುವ ಗ್ರಂಥಾಲಯ ಪಟ್ಟಣದ ಹೊರವಲಯದಲ್ಲಿದೆ. ಬಹುಪಾಲು ಮಂದಿಗೆ ಇಲ್ಲಿ ಗ್ರಂಥಾಲಯ ಇದೆ ಎಂಬುದೇ ತಿಳಿದಿಲ್ಲ. ಪುಸ್ತಕ ಓದಲು ಪಟ್ಟಣದ ಕೇಂದ್ರಭಾಗದಿಂದ ಬಹುದೂರ ಕ್ರಮಿಸಬೇಕಿದೆ. ಸಾರ್ವಜನಿಕರ ಪಾಲಿಗೆ ಈ ಗ್ರಂಥಾಲಯ ಇದ್ದೂ ಇಲ್ಲದಂತಿದೆ.

ವಿರಾಜಪೇಟೆಯಲ್ಲಿ ಸೋರುವ ಗ್ರಂಥಾಲಯ

ವಿರಾಜಪೇಟೆಯಲ್ಲಿರುವ ಗ್ರಂಥಾಲಯದ ಕಟ್ಟಡ ತೀರಾ ಹಳೆಯದಾಗಿದೆ. ಈಚೆಗೆ ದುರಸ್ತಿ ಕಾರ್ಯ ಕೈಗೊಂಡು ಟೈಲ್ಸ್ ಅಳವಡಿಸಲಾಗಿದೆ. ಆದರೆ, ಗ್ರಂಥಾಲಯದ ಒಳಭಾಗದಲ್ಲಿ ಮಳೆ ಬಂದರೆ ಸೋರುತ್ತಿದೆ. ವರ್ಷದ ಬಹುಪಾಲು ದಿನಗಳಲ್ಲಿ ಮಳೆ ಇರುವುದರಿಂದ ಈ ಗ್ರಂಥಾಲಯವೂ ಓದುಗರಿಂದ ದೂರವೇ ಉಳಿದಿದೆ.

ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆಯ ಗ್ರಾಮೀಣ ಗ್ರಂಥಾಲಯಗಳು

ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಂಥಾಲಯಗಳು ರಾಜ್ಯದಲ್ಲೇ ಮುಂಚೂಣಿಯಲ್ಲಿವೆ. ಪಿಡಿಒ ಅಬ್ದುಲ್ಲಾ ಅವರ ಶ್ರಮದಿಂದ ರಾಜ್ಯದ ಮೊದಲ ಡಿಜಿಟಲ್ ಗ್ರಂಥಾಲಯ ಇಲ್ಲಿನ ಪಾಲಿಬೆಟ್ಟದಲ್ಲಿ ಸ್ಥಾಪನೆಯಾಗಿದೆ. ಜತೆಗೆ, ಹಲವು ವಿಶೇಷಗಳನ್ನು ಹೊಂದಿರುವ ಗ್ರಂಥಾಲಯಗಳು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿವೆ.

2019ರ ಮಾರ್ಚ್‌ನಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಸೇರಿಸಿದ ನಂತರ ಅಭಿವೃದ್ಧಿಯ ಪರ್ವ ಆರಂಭವಾಗಿದೆ.

ಅಂಧರಿಗಾಗಿಬಿಕಾನ್ ಲೈಬ್ರರಿಯೂ ಇಲ್ಲಿದೆ. ಹೊದ್ದೂರು ಗ್ರಾಮ ‍ಪಂಚಾಯಿತಿಯ ಪಾಲೆಮಾಡು ಗ್ರಾಮದಲ್ಲಿ ಆರಂಭವಾಗಿರುವ ‘ಗ್ರಾಮ ಗ್ರಂಥಾಲಯ’ಕ್ಕೆ ನಟ ವಿನಯರಾಜ್‌ಕುಮಾರ್‌ ಪುಸ್ತಕಗಳನ್ನು ಕೊಟ್ಟಿದ್ದಾರೆ. ಈ ಗ್ರಂಥಾಲಯವು ಸಂಜೆ 4ರಿಂದ 9ರವರೆಗೆ ತೆರೆದಿರುತ್ತದೆ.

ಮರಗೋಡು ಪಂಚಾಯಿತಿಯಲ್ಲಿ ‘ತೆರೆದ ಗ್ರಂಥಾಲಯ’ವಿದ್ದು, ಪುಸ್ತಕ ತೆಗೆದುಕೊಂಡು ಅಂಗಳದಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ.

ಈಚೆಗೆ ಗ್ರಂಥಾಲಯದ ಸದಸ್ಯರಿಗಾಗಿ ‘ಗ್ರಾಮ ಚದುರಂಗ’ ಸ್ಪರ್ಧೆಯನ್ನು ನಡೆಸುವ ಮೂಲಕ ಸಾರ್ವಜನಿಕ ಗ್ರಂಥಾಲಯಗಳಿಗಿಂತ ಮುಂದೆ ಪಂಚಾಯಿತಿಯ ಗ್ರಂಥಾಲಯಗಳು ದಾಪುಗಾಲಿಟ್ಟಿವೆ. ಬಹುತೇಕ ಎಲ್ಲ ಗ್ರಂಥಾಲಯಗಳೂ ಡಿಜಿಟಲ್ ಗ್ರಂಥಾಲಯಗಳಾಗಿವೆ.

ಹೊದ್ದೂರಿನ ಡಿಜಿಟಲ್ ಗ್ರಂಥಾಲಯದಲ್ಲಿ 68 ಲಕ್ಷ ಇ– ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪುಸ್ತಕಗಳು, ನಿಯತಕಾಲಿಕಗಳು, ಮಕ್ಕಳ ಸ್ನೇಹಿ ಡಿಜಿಟಲ್ ಪುಸ್ತಕಗಳು, ಕಂಪ್ಯೂಟರ್, ಆಂಡ್ರಾಯ್ಡ್ ಟಿವಿ ಬಯಲು ಗ್ರಂಥಾಲಯ ವ್ಯವಸ್ಥೆ ಹೀಗೆ ಹತ್ತಾರು ವ್ಯವಸ್ಥೆಗಳು ಇಲ್ಲಿ ಗಮನ ಸೆಳೆಯುತ್ತಿವೆ. ಇದರ ಅಭಿವೃದ್ಧಿಯಲ್ಲಿ ಪಿಡಿಒ ಅಬ್ದುಲ್ಲಾ ವಿಶೇಷ ಕಾಳಜಿ ವಹಿಸಿದ್ದಾರೆ.

ಕಾರ್ಯಪ್ಪ ಸ್ಮಾರಕ ಗ್ರಂಥಾಲಯ

ಶನಿವಾರಸಂತೆ ಪಟ್ಟಣದ 1ನೇ ವಿಭಾಗದಲ್ಲಿ ಇರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಜನಿಸಿದ ಮನೆ ಇಂದು ಸ್ಮಾರಕ ಗ್ರಂಥಾಲಯವಾಗಿದೆ.

ಶಿರಸ್ತೇದಾರರಾಗಿದ್ದ ಕೊಡಂದೇರ ಮಾದಪ್ಪ- ಕಾವೇರಿ ದಂಪತಿಯ ಪುತ್ರರಾಗಿ ಕಾರ್ಯಪ್ಪ 1990ರಲ್ಲಿ ಜನಿಸಿದರು. 4 ವರ್ಷ ಕಾಲ ಮಾತ್ರ ಆ ಮನೆಯಲ್ಲಿದ್ದ ಕುಟುಂಬದವರು ಬಳಿಕ ಮಡಿಕೇರಿಯಲ್ಲಿ ವಾಸವಿದ್ದರು. ಸ್ವಾತಂತ್ರ್ಯ ನಂತರ ಕೊಡಗು ‘ಸಿ’ ರಾಜ್ಯವಾಗಿದ್ದಾಗ ತಹಶೀಲ್ದಾರ್ ಅವರ ಕಚೇರಿಯಾಗಿತ್ತು. ಆನಂತರದ ದಿನಗಳಲ್ಲಿ ಹೋಬಳಿ ಕಂದಾಯ ನಿರೀಕ್ಷಕರ ವಸತಿಗೃಹವಾಗಿತ್ತು.

1997ರಲ್ಲಿ ಕಾರ್ಯಪ್ಪ ಜನಿಸಿದ ಮನೆಯನ್ನು ಸ್ಮಾರಕ ಗ್ರಂಥಾಲಯವಾಗಿ ಉದ್ಘಾಟಿಸಲಾಯಿತು.ಗ್ರಂಥಾಲಯದಲ್ಲಿ ಉತ್ತಮ ಪುಸ್ತಕ ಭಂಡಾರವಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಸದಸ್ಯರಾಗಿ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಗ್ರಂಥಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ನಿರ್ವಹಣೆ: ಕೆ.ಎಸ್.ಗಿರೀಶ ಮಾಹಿತಿ: ಶ.ಗ.ನಯನತಾರಾ, ರಘುಹೆಬ್ಬಾಲೆ, ಡಿ.ಪಿ.ಲೋಕೇಶ್, ಜೆ.ಸೋಮಣ್ಣ, ಎಂ.ಎಸ್.ಸುನಿಲ್‌, ಹೇಮಂತ್, ಸಿ.ಎಸ್.ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT