ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಸಾಹಿತಿ ಕೊಡುಗೆ ಸ್ಮರಣೆ

ಮಹಾಬಲೇಶ್ವರ ಭಟ್‌ ಶ್ರದ್ಧಾಂಜಲಿ ಸಭೆ, ಗಣ್ಯರ ಕಂಬನಿ
Last Updated 4 ಜುಲೈ 2018, 13:11 IST
ಅಕ್ಷರ ಗಾತ್ರ

ಮಡಿಕೇರಿ: ಹಿರಿಯ ಸಾಹಿತಿ ಮಹಾಬಲೇಶ್ವರ ಭಟ್ ಅವರ ಆದರ್ಶ ಜೀವನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ್ದ ಕೊಡುಗೆ ಅಪಾರ; ಅವರು ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.

ನಗರದಲ್ಲಿ ಬುಧವಾರ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ದಿವಂಗತ ಮಹಾಬಲೇಶ್ವರ ಭಟ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ‘ಶಿಕ್ಷಣ ತಜ್ಞರಾಗಿ, ಪ್ರಗತಿಪರ ಕೃಷಿಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ. ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಪರ ಕೆಲಸ ಮಾಡಿದ ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.

ಮಹಾಬಲೇಶ್ವರ ಅವರ ‘ಹಿಮಾಲಯ ಪರ್ವತ ಪರ್ಯಟನೆ’, ‘ದೈತ್ಯ ದರ್ಶನ’ ಎಂಬ ಪ್ರವಾಸಿ ಕಥನ ರಚಿಸಿದ್ದರು. ‘ಅವತಾರ’ ಅವರ ಆತ್ಮಚರಿತ್ರೆಯಾಗಿದ್ದವು. ಕೊಡಗಿನಲ್ಲಿ ಅನೇಕ ಹಿರಿಯ ಲೇಖಕರ, ರಾಜರ ಆಡಳಿತ ಹಾಗೂ ಸ್ವಾತಂತ್ರ್ಯ ಪೂರ್ವ ಸಂದರ್ಭಗಳಲ್ಲಿ ರಚಿಸಿದ ಗ್ರಂಥಗಳನ್ನು ಹುಡುಕಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದರು. ಜತೆಗೆ ಕೊಡಗು ಕರ್ನಾಟಕ ಸಂಘದಲ್ಲಿ ತಮ್ಮನ್ನು ತೊಡಗಿಸಕೊಂಡು ಕಾವೇರಿ ಪ್ರಕಾಶನ ಮುದ್ರಣದ ಮೂಲಕ 19 ಪುಸ್ತಕಗಳನ್ನು ಹೊರತಂದಿರುವ ಕೀರ್ತಿ ಮಹಾಬಲೇಶ್ವರ್‌ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಭಾರತೀಸುತ ಜೊತೆ ಉತ್ತಮ ಒಡನಾಟ: ಸಾಹಿತಿ ಭಾರತೀಸುತ ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಭಾರತೀಸುತ ಅವರ ‘ಬ್ರಹ್ಮಗಿರಿ’ ಪುಸ್ತಕವನ್ನು ಮರು ಮುದ್ರಣಕ್ಕೆ ಶ್ರಮಿಸಿದ್ದರು ಎಂದು ನೆನಪಿಸಿದರು.

ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ: ಕನ್ನಡ ಪರ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಂಡಿದ್ದ ಭಟ್‌, ರಾಜ್ಯ ಹಾಗೂ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸಿದ್ದರು. ಸಾಹಿತ್ಯ ಪರಿಷತ್‌ನ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ಪಡೆದು ಸಲಹೆ– ಸೂಚನೆಗಳನ್ನು ನೀಡುತ್ತಿದ್ದರು ಎಂದು ಹೇಳಿದರು. ಮಡಿಕೇರಿ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನ ಹಾಗೂ ಚೆಂಬುವಿನಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.

ಬಳಗದ ನಿಕಟ ಪೂರ್ವ ಅಧ್ಯಕ್ಷ ಷಂಶುದ್ದೀನ್ ಮಾತನಾಡಿ, ‘ನನಗೆ ಶಾಲಾ ಹಂತದಲ್ಲಿ ಗುರುಗಳಾದ ಮಹಬಲೇಶ್ವರ್‌ ಭಟ್‌ ಅವರ ಸರಳತೆ, ನೇರನುಡಿ ಹಾಗೂ ಸ್ವಾಭಿಮಾನಿ ಗುಣ ಇಷ್ಟವಾಗಿತ್ತು. ಅವರ ಬರವಣಿಗೆಯ ಶೈಲಿಗಳಲ್ಲಿ ಪ್ರಾದೇಶಿಕ ಭಾಷೆ ಸೊಬಗು ಕಾಣಿಸುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ಅಂತಹ ಅವಕಾಶ ಬಳಸಿಕೊಳ್ಳಲು ಹಿಂದೇಟು ಹಾಕಿದರು ಎಂದು ಹೇಳಿದರು. ಮಹಾಬಲೇಶ್ವರ ಭಟ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಟಿ. ರಾಘವೇಂದ್ರ, ವೈ.ರಾ. ಶ್ರೀನಿವಾಸ್‌, ಲಿಯಖತ್‌ ಅಲಿ, ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ್ ಕಾಮತ್, ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ಐತಿಚಂಡ ರಮೇಶ್ ಉತ್ತಪ್ಪ, ಸಾಹಿತಿ ಬಿ.ಆರ್. ಜೋಯಪ್ಪ, ಮನುಶೆಣೈ, ರಾಜೇಶ್‌, ಬೇಬಿ ಮ್ಯಾಥ್ಯು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT