ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ: ಜಲಾ

7
ಸೋಮವಾರಪೇಟೆ ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಗ್ರಹ

ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ: ಜಲಾ

Published:
Updated:

ಶನಿವಾರಸಂತೆ: ‘ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವುದರಿಂದ ಕನ್ನಡ ಶಾಲೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ’ ಎಂದು ಸೋಮವಾರಪೇಟೆ ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಜಲಾ ಕಾಳಪ್ಪ ಅವರು ಎಚ್ಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಲೂರು ಸಿದ್ದಾಪುರದಲ್ಲಿ ಗುರುವಾರ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ... ಹೀಗೆ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಪತ್ರಗಳು ಇಂಗ್ಲಿಷ್‌ ಭಾಷೆಯಲ್ಲಿ ಹೆಚ್ಚಾಗಿರುತ್ತದೆ. ಇದು ಸರಿಯಲ್ಲ. ನಾಡಿನ ಭಾಷೆಯನ್ನು ಉಳಿಸಬೇಕು. ಭಾಷೆ ಎಲ್ಲರಿಗೂ ಅರ್ಥವಾಗುವಂತೆ ಇರಬೇಕು’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವು ಮಹನೀಯರು ದೊಡ್ಡ ವಿಜ್ಞಾನಿಗಳಾಗಿ, ಕವಿಗಳಾಗಿ, ಜನಪ್ರತಿನಿಧಿಗಳಾಗಿ, ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಆದ್ದರಿಂದ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹಾಗೆಯೇ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಅನುಮತಿ ನೀಡುವುದರಿಂದ ಕನ್ನಡ ಶಾಲೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ’ ಎಂದು ಜಲಾ ಕಾಳಪ್ಪ ಎಚ್ಚರಿಸಿದರು.

ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ದೂಡುವವರ ಸಂಖ್ಯೆ ಹೆಚ್ಚಾಗಿದೆ. ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್‌ ಭಾಷೆಯನ್ನು ಕಲಿಯಲಿ. ಅದನ್ನು ಬಿಟ್ಟು ಸಂಪೂರ್ಣ ಇಂಗ್ಲಿಷ್‌ ಮಾಧ್ಯಮಕ್ಕೆ ವಾಲುವುದು ಸರಿಯೇ ಎಂದು ಪ್ರಶ್ನಿಸಿದರು.

1ರಿಂದ 10ನೇ ತರಗತಿವರೆಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಿರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ 50ರಷ್ಟು ಮೀಸಲಾತಿ ನೀಡಬೇಕು. ಎಲ್ಲರೂ ಕೈಕಟ್ಟಿ ಕುಳಿತರೆ ಕನ್ನಡದ ಭವಿಷ್ಯದ ಬಾಗಿಲು ಮುಚ್ಚಿಹೋದಿತು ಎಂದು ಸಮ್ಮೇಳನಾಧ್ಯಕ್ಷರು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಹಳ್ಳಿಗಾಡಿನ ಎಷ್ಟೋ ಮಹಿಳೆಯರು ಎಲೆಮರೆಯ ಕಾಯಿಯಂತೆ ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಹಲವರು ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !