ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ನಿಡ್ತ ‘ಅಕ್ಷರ ಹಬ್ಬ’ದಲ್ಲಿ ಜನಜಾತ್ರೆ

ಕೊಡಗು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ
Last Updated 31 ಜನವರಿ 2020, 19:30 IST
ಅಕ್ಷರ ಗಾತ್ರ

ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೇದಿಕೆ (ನಿಡ್ತ, ಶನಿವಾರಸಂತೆ): ಉತ್ತರ ಕೊಡಗಿನ ಗಡಿಗ್ರಾಮವಾದ ನಿಡ್ತದಲ್ಲಿ ಶುಕ್ರವಾರ ನುಡಿಹಬ್ಬದ ಸಂಭ್ರಮ ಮೇಳೈಸಿತ್ತು. ಕೊಡಗು ಜಿಲ್ಲೆಯ 14ನೇ ಸಾಹಿತ್ಯ ಸಮ್ಮೇಳನಕ್ಕೆ ಇಡೀ ಗ್ರಾಮ ರಸ್ತೆಗಳು ಅಲಂಕೃತಗೊಂಡಿದ್ದವು. ಕೆಲವು ಮನೆಗಳ ಮೇಲೂ ಕನ್ನಡ ಬಾವುಟ ಹಾರಾಡುತ್ತಿದ್ದವು.

ಮನೆಯ ಮುಂದೆ ರಂಗೋಲಿ ಹಾಕಿದ್ದ ಮಹಿಳೆಯರು ಇಡೀ ಗ್ರಾಮವೇ ಸಂಭ್ರಮಿಸುವಂತೆ ಮಾಡಿದ್ದರು. ಅಲ್ಲಿ ನಡೆದಿದ್ದು ಕನ್ನಡ ಸಾಹಿತ್ಯ ಸಮ್ಮೇಳನವಾದರೂ ಇಡೀ ಗ್ರಾಮಸ್ಥರು ಊರು ಹಬ್ಬವೆಂದು ಭಾವಿಸಿದ್ದರು.

ಕಸಾಪ ಪದಾಧಿಕಾರಿಗಳ ನಿರೀಕ್ಷೆಗೂ ಮೀರಿ ಅಲ್ಲಿ ಕನ್ನಡ ಪ್ರೇಮಿಗಳು ಸೇರಿದ್ದು ಈ ಬಾರಿಯ ವಿಶೇಷ. ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಜನರು ಸೇರುವುದಿಲ್ಲ ಎಂಬ ಮಾತು ಅಲ್ಲಿ ಸುಳ್ಳಾಯಿತು. ಮಕ್ಕಳು, ವಿದ್ಯಾರ್ಥಿಗಳಿಂದ ಹಿಡಿದು, ವಯಸ್ಕರೂ ಸಾಹಿತ್ಯದ ರಸದೌತಣ ಆಸ್ವಾದಿಸಲು ಜಮಾವಣೆಗೊಂಡಿದ್ದರು.

ಗ್ರಾಮದಲ್ಲಿ ನಾಲ್ಕು ಕಿ.ಮೀ ದೂರದಿಂದ ಹಾದು ಬಂದ ಮೆರವಣಿಗೆಯೂ ಆಕರ್ಷಕವಾಗಿತ್ತು. ಮೆರವಣಿಗೆ ನಿಡ್ತ ಗ್ರಾಮದ ಶಾಲಾ ಆವರಣಕ್ಕೆ ತಲುಪುವಷ್ಟರಲ್ಲಿ ಮಧ್ಯಾಹ್ನ 12 ಕಳೆದಿತ್ತು. ಆ ಮೇಲೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತ್ತು. ಗ್ರಾಮಸ್ಥರು, ಕೃಷಿಕರು ಉದ್ಘಾಟನಾ ಸಮಾರಂಭದಲ್ಲೂ ಕನ್ನಡದ ತೇರು ಎಳೆಯಲು ಪಾಲ್ಗೊಂಡಿದ್ದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ, ‘ಅತ್ಯಂತ ಶ್ರೀಮಂತ ಭಾಷೆ ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಪುರಸ್ಕಾರಗಳು ಬಂದಿವೆ. ಇದು ಸಂತೋಷದ ವಿಚಾರ’ ಎಂದು ಹೇಳಿದರು.

‘ಕುವೆಂಪು ಅವರು ಮಲೆನಾಡಿನಲ್ಲಿ ಕುಳಿತು ಸತ್ವಯುತ ಸಾಹಿತ್ಯ ರಚಿಸಿದ್ದರು. ಕೊಡಗು ಅಷ್ಟೇ ಮಲೆನಾಡಿನ ಸೌಂದರ್ಯದ ಗಣಿ. ಕೊಡಗಿನಲ್ಲೂ ಮೌಲ್ಯಯುತ ಸಾಹಿತ್ಯ ಕೃಷಿ ನಡೆಯುತ್ತಿದೆ’ ಎಂದು ಶ್ಲಾಘಿಸಿದರು.

‘ಇಂದಿನ ಯುವಕರಲ್ಲಿ ಏನೋ ಧಾವಂತ. ಪ್ರಕೃತಿ ಹಾಗೂ ಹೊರಗಿನ ಜಗತ್ತಿನ ಸೌಂದರ್ಯ ಆಸ್ವಾದಿಸಲು ಅವರಿಗೆ ಅವಕಾಶ ಸಿಗುತ್ತಿಲ್ಲ. ಸಾಹಿತ್ಯದಿಂದಲೂ ದೂರವಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಅದರ ನಡುವೆಯೂ ಪುಸ್ತಕ ಮಾರಾಟ ಏರುಗತ್ತಿಯಲ್ಲಿದೆ ಎಂಬುದು ಸಮಾಧಾನಕರ ವಿಚಾರ’ ಎಂದು ಹೇಳಿದರು.

‘ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳ ಮೂಲಕವೂ ಕನ್ನಡ ಶ್ರೀಮಂತಿಕೆಯನ್ನು ಹೆಚ್ಚಿಸಲಾಗುತ್ತಿದೆ’ ಎಂದು ಕಜೆಗದ್ದೆ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಮಾತನಾಡಿ, ‘ಕನ್ನಡವನ್ನು ಪ್ರೀತಿಸುತ್ತೇವೆ ಎಂದು ಹೇಳುವುದಕ್ಕೆ ಸೀಮಿತವಾಗದೇ, ಕನ್ನಡದಲ್ಲಿಯೇ ವ್ಯವಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಮ್ಮೇಳನ ನಡೆಸುವುದರಿಂದ ಭಾಷೆಯ ಬೆಳವಣಿಗೆ ಉಳಿವಿಗೆ ಅನುಕೂಲ. ಹಳ್ಳಿಯಲ್ಲಿ ಕನ್ನಡ ಬೀಜ ಬಿತ್ತಿದರೆ ಹೆಮ್ಮರವಾಗಿ ಬೆಳೆಯಲಿದೆ’ ಎಂದು ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್‌ ಮಾತನಾಡಿ, ‘ಸಾಹಿತ್ಯ ಪರಿಷತ್ತಿನ ಕೊಡಗು ಘಟಕವು ಆರಂಭವಾಗಿ ಇಂದಿಗೆ 50 ವರ್ಷವಾಗಿದೆ. ಅದರ ಸವಿನೆನಪಿಗಾಗಿ ಲೋಕೇಶ್‌ ಸಾಗರ್‌ ನೇತೃತ್ವದಲ್ಲಿಯೇ ಉತ್ತಮ ಕಾರ್ಯಕ್ರಮ ನಡೆಸಬೇಕು. ಸಂಸ್ಥೆ ದುಡಿದ ಎಲ್ಲರನ್ನೂ ನೆನಪು ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಮೈಸೂರು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್‌ ಮಾತನಾಡಿ, ‘ಕೊಡಗು ಸುಂದರ ಹಾಗೂ ಸಾಹಿತ್ಯ ನಾಡೂ ಹೌದು. ನನ್ನ ವೃತ್ತಿ ಜೀವನವನ್ನು ಇದೇ ಜಿಲ್ಲೆಯಲ್ಲಿ ಆರಂಭಿಸಬೇಕು ಎಂದು ನಿರ್ಧರಿಸಿದ್ದೆ. ಅದು ಸಾಧ್ಯವಾಗಿರಲಿಲ್ಲ. ಕನ್ನಡವನ್ನು ಉಳಿಸಿ– ಬೆಳೆಸುವ ಕೆಲಸವಾಗಬೇಕು’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ‘ಸಮ್ಮೇಳನವನ್ನು ಇಲ್ಲಿ ಆಯೋಜಿಸಿದ್ದರಿಂದ ಗ್ರಾಮದ ಇತಿಹಾಸವು ಇಡೀ ಜಿಲ್ಲೆಗೆ ಪಸರಿಸಿದಂತಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದಲೂ ನಿಡ್ತಕ್ಕೆ ಸಾಹಿತ್ಯ ಪ್ರೇಮಿಗಳು ಆಗಮಿಸಿದ್ದಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲೋಕೇಶ್‌ ಸಾಗರ್‌ ಮಾತನಾಡಿ, ‘ನಾಲ್ಕು ವರ್ಷದ ಅಧ್ಯಕ್ಷ ಅವಧಿಯಲ್ಲಿ ಒಟ್ಟು 17 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಕೊಡಗಿನ ಮಣ್ಣಿಗೂ ಸಾಹಿತ್ಯದ ಶಕ್ತಿಯಿದೆ ಎಂದ ಅವರು, ಪ್ರವಾಹ ಮತ್ತಿತರ ಕಾರಣಕ್ಕೆ ಸಮ್ಮೇಳನಕ್ಕೆ ನೀಡುತ್ತಿದ್ದ ಅನುದಾನ ಕಡಿತ ಮಾಡಲಾಗಿದೆ. ಆದರೆ, ಜಿಲ್ಲೆಯ ಶಾಸಕರಿಂದಲೂ ನೆರವು ಬರಲಿಲ್ಲ. ಅದೇ ಪಿರಿಯಾಪಟ್ಟಣ ಹಾಗೂ ಅರಕಲಗೂಡಿನಲ್ಲಿ ಅಲ್ಲಿನ ಶಾಸಕರೇ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಅದು ಸಾಧ್ಯವೇ’ ಎಂದು ಪ್ರಶ್ನಿಸಿದರು.

ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಸ್ತಫ, ನಾಗಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎಸ್‌.ಡಿ.ವಿಜೇತ್‌, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡೇಕಲ್‌ ಸಂತೋಷ್‌, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮುಧೋಶ್‌ ಪೂವಯ್ಯ, ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಡಾ.ಚಂದ್ರಶೇಖರ್‌ ಹಾಜರಿದ್ದರು.

ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ರೈತಗೀತೆ, ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

‘ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ಹೋಗಿ ಬರ್ತಾರೆ!’
‘ನಗರ ಪ್ರದೇಶದಲ್ಲಿ ಸಮ್ಮೇಳನ ನಡೆದಾಗ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊರಲು ಬನ್ನಿಯೆಂದು ಮಹಿಳೆಯರನ್ನು ಆಹ್ವಾನಿಸಿದರೆ ನಾಲ್ಕೈದು ಮಂದಿ ಮಾತ್ರ ಬರ್ತಾರೆ. ಅದೂ ಬ್ಯೂಟಿ ಪಾರ್ಲರ್‌ಗೇ ಹೋಗಿಯೇ ಬರ್ತಾರೆ. ಅದೇ ನಿಡ್ತದಂಥ ಗ್ರಾಮೀಣ ಪ್ರದೇಶದಲ್ಲಿ 4 ಕಿ.ಮೀ ದೂರ ಪೂರ್ಣಕುಂಭ ಹಿಡಿದು ಮಹಿಳೆಯರು ಸಾಗಿ ಬಂದಿದ್ದು ವಿಶೇಷ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲೋಕೇಶ್‌ ಸಾಗರ್‌ ಹೇಳಿದರು.

‘ನಗರ ಪ್ರದೇಶದಲ್ಲಿ ಸಮ್ಮೇಳನ ನಡೆದರೆ ಜನರನ್ನು ಸೇರಿಸುವುದೂ ಸವಾಲು’ ಎಂದು ಸಾಗರ್‌ ಹೇಳಿದರು.

ವಿವಿಧ ಕೃತಿಗಳ ಬಿಡುಗಡೆ
ಹಿರಿಯ ಪತ್ರಕರ್ತ ಬಿ.ಜೆ.ಅನಂತಶಯನ ಅವರ ‘ನುಡಿದೀಪ್ತಿ’, ಜಲಕಾಳಪ್ಪ ಅವರ ‘ಮುದ್ರೆ’, ಡಾ.ಬೆಸೂರು ಮೋಹನ್‌ ಪಾಳೇಗಾರ್ ಅವರ ‘ಮದರಂಗಿ ಜನಪದ ಕಥೆಗಳು’ ಹಾಗೂ ‘ಅನನ್ಯತೆ’, ಶರ್ಮಿಳಾ ಅವರ ‘ದಿಟ್ಟೆ’, ಶಿಕ್ಷಕಿ ಇಂದಿರಾ ಅವರ ‘ಹೊಂಬೆಳಕು’ (ಕವನ ಸಂಕಲನ) ಕೃತಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

*
ನಿಡ್ತ ಗ್ರಾಮದಲ್ಲಿ ಕನ್ನಡಮಯ ವಾತಾವರಣ ಕಂಡು ಖುಷಿಯಾಗಿದೆ. ಕನ್ನಡದ ಮೇಲಿನ ಪ್ರೀತಿ, ಹೃದಯಾಂತರಳದಲ್ಲೂ ಇರಬೇಕು. -ವೀಣಾ ಅಚ್ಚಯ್ಯ, ವಿಧಾನ ಪರಿಷತ್‌ ಸದಸ್ಯೆ

*
ಇದು ರೈತಾಪಿ ಬೀಡು. ಹಳ್ಳಿಯಲ್ಲಿ ಸಾಹಿತ್ಯದ ಮೇಲಿನ ಪ್ರೀತಿ ಇನ್ನೂ ಇದೇ ಎಂಬುದಕ್ಕೆ ಈ ಗ್ರಾಮದಲ್ಲಿ ಸೇರಿರುವ ಜನರೇ ಸಾಕ್ಷಿ. -ಲೋಕೇಶ್‌ ಸಾಗರ್‌,ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT