ಕರ್ಣಂಗೇರಿ ಬೆಟ್ಟದಲ್ಲಿ ‘ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್’

7
45 ಎಕರೆ ಅರಣ್ಯ ಪ್ರದೇಶದಲ್ಲಿ ಪ್ರಗತಿಯತ್ತ ನಿರ್ಮಾಣ ಕಾಮಗಾರಿ

ಕರ್ಣಂಗೇರಿ ಬೆಟ್ಟದಲ್ಲಿ ‘ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್’

Published:
Updated:
’ಸಾಲು ಮರದ ತಿಮ್ಮಕ್ಕ ಪಾರ್ಕ್’ ನಿರ್ಮಾಣವಾಗುತ್ತಿರುವ ಕರ್ಣಂಗೇರಿ ಬೆಟ್ಟ

ಮಡಿಕೇರಿ: ಕೊಡಗಿನ ಸ್ವಾಗತ ಬೆಟ್ಟವೆಂದು ಹೆಸರುವಾಸಿಯಾಗಿರುವ ಮಡಿಕೇರಿಯ ಕರ್ಣಂಗೇರಿ ಬೆಟ್ಟದಲ್ಲಿ ’ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್’ ಸುಮಾರು 45 ಎಕರೆ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಅರಣ್ಯ ಇಲಾಖೆಯ ವತಿಯಿಂದ ಪ್ರವಾಸೋದ್ಯಮ ಮತ್ತು ಪರಿಸರ ಜಾಗೃತಿಯ ಉದ್ದೇಶದಿಂದ ನಗರದ ಸಮೀಪದಲ್ಲೇ ’ಸಾಲು ಮರದ ತಿಮ್ಮಕ್ಕ’ ಹೆಸರಿನ ಟ್ರೀ ಪಾರ್ಕ್ ಯೋಜನೆ ಸಾಕಾರಗೊಳ್ಳುತ್ತಿದ್ದು, ಸುಮಾರು ₹50 ಲಕ್ಷ ವೆಚ್ಚದಲ್ಲಿ ಸಜ್ಜುಗೊಳ್ಳುತ್ತಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅರಣ್ಯ ಸಚಿವ ರಮಾನಾಥ್ ರೈ ಅವರು ಸಾಲು ಮರದ ತಿಮ್ಮಕ್ಕ ಹೆಸರಿನ ಟ್ರೀ ಪಾರ್ಕ್ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಪಾರ್ಕ್‌ ನಿರ್ಮಿಸುವ ಉದ್ದೇಶ ಇತ್ತು. ಅದರಂತೆ ಮಡಿಕೇರಿ ಕ್ಷೇತ್ರಕ್ಕೂ ಇದು ಲಭಿಸಿದ್ದು, ಮುಂದಿನ ವರ್ಷದೊಳಗೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಪಾರ್ಕ್ ಗಮನ ಸೆಳೆಯಲಿದೆ.

ತಿಮ್ಮಕ್ಕ ಉದ್ಯಾನದ ವಿಶೇಷ: ಸಾಲುಮರದ ತಿಮ್ಮಕ್ಕ ಎನ್ನುತ್ತಿದ್ದಂತೆ ಮರಗಳೇ ಕಣ್ಣೆದುರು ಬರುವುದು. ಆದ್ದರಿಂದ ಅದಕ್ಕೆ ತಕ್ಕಂತೆ ಇಲ್ಲಿ ವಿವಿಧ ಜಾತಿಯ ಅಪರೂಪದ ಮರಗಳನ್ನು ಕಾಣಬಹುದಾಗಿದೆ. ‘ತೇಗ, ಬೀಟೆ, ಹೊನ್ನೆ, ರಕ್ತ ಚಂದನ, ಸಿಲ್ವರ್, ಬಿದಿರು ಸಸಿಗಳ ಜೊತೆಗೆ ಹೆಬ್ಬೇವು, ಹುಣಸೆ, ಹತ್ತಿ, ಬಿಲ್ವಪತ್ರೆ, ಹೊಂಗೆ, ಆಲ, ತಪಸಿ, ಕಮರ ಸೇರಿದಂತೆ ಆಯಾ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಔಷಧೀಯ ಸಸ್ಯಗಳನ್ನು ಬೆಳೆಸುವುದು ಉದ್ಯಾನದ ವಿಶೇಷವಾಗಿದೆ’ ಎಂದು ಮಡಿಕೇರಿ ಡಿಎಫ್‌ಒ, ಮಂಜುನಾಥ್ ಹೇಳಿದರು.

ಪಾರ್ಕ್‌ನಲ್ಲಿ ಏನೇನು?
ಪಾರ್ಕ್ ಮಹಾದ್ವಾರವನ್ನು ಆಕರ್ಷಕ ಮರಮುಟ್ಟುಗಳಿಂದ ನಿರ್ಮಿಸಲಾಗಿದೆ. ಒಳಭಾಗದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾದ ಆಟಿಕೆಗಳ ಪಾರ್ಕ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆ, ವಾಯುವಿಹಾರಕ್ಕಾಗಿ ರಸ್ತೆ ನಿರ್ಮಾಣ, ಇನ್ನು 5 ಕಡೆಗಳಲ್ಲಿ ಪ್ರವಾಸಿಗರು ಕುಳಿತು ವಿಶ್ರಾಂತಿ ಪಡೆಯಲು ಅತ್ಯಂತ ಆಕರ್ಷಣೀಯ ಗೋಪುರಗಳ ನಿರ್ಮಾಣವಾಗಲಿದೆ. ಅಲ್ಲದೆ ವಿವಿಧ ಜಾತಿಗಳ ಹೂವುಗಳು ಹಾಗೂ ಔಷಧೀಯ ಸಸ್ಯಗಳನ್ನು ನೋಡಬಹುದಾಗಿದೆ.

ಸ್ಥಳೀಯರಲ್ಲಿ ಆತಂಕ:
‘ಪಾರ್ಕ್‌ ಸಮೀಪವೇ ಮಾಂದಲ್‌ಪಟ್ಟಿ ಪ್ರದೇಶ ಪ್ರವಾಸೋದ್ಯಮದ ಹೆಸರಿನಲ್ಲಿ ಸಂಪೂರ್ಣವಾಗಿ ಕಲುಷಿತವಾಗಿದ್ದು, ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಪ್ರವಾಸಿಗರು ಹಸಿರು ಪರಿಸರವನ್ನು ಮನಬಂದಂತೆ ಹಾಳು ಮಾಡುತ್ತಿದ್ದಾರೆ. ಇದೀಗ ನೈಸರ್ಗಿಕವಾಗಿ ಬೆಳೆದ ಅರಣ್ಯ ಪ್ರದೇಶವಾದ ಕರ್ಣಂಗೇರಿಯ ಹಸಿರು ಸ್ವಾಗತ ಬೆಟ್ಟವೂ ಪ್ರವಾಸಿಗರ ಪಾಲಾದರೆ, ಪರಿಸರ ಕಲುಷಿತಗೊಳ್ಳುವ ಸಾಧ್ಯತೆಗಳಿವೆ‘ ಎಂದು ಹೇಳುತ್ತಾರೆ ಕರ್ಣಂಗೇರಿ ನಿವಾಸಿ ಹರ್ಷಿತ್‌.

 ಪಾರ್ಕ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮಳೆ ಇರುವ ಕಾರಣ ಕೆಲಸ ನಿಧಾನವಾಗಿದೆ, ಇನ್ನು ಪಾರ್ಕ್‌ಗೆ ಹೆಚ್ಚಿನ ಅನುದಾನ ಬೇಕಿರುವುದರಿಂದ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
--ಮಂಜುನಾಥ್, ಡಿಎಫ್‌ಒ, ಮಡಿಕೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !