ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಡವ ಸಂಸ್ಕೃತಿ ಉಳಿಸಿ, ಬೆಳೆಸಿ’

ನಾಪೋಕ್ಲುವಿನಲ್ಲಿ ಶನಿವಾರ ನಡೆದ ‘ಊರೋರ್ಮೆ– ಸಂಸ್ಕೃತಿರ ಆಯಿಮೆ’
Last Updated 4 ಏಪ್ರಿಲ್ 2021, 2:15 IST
ಅಕ್ಷರ ಗಾತ್ರ

ನಾಪೋಕ್ಲು: ‘ಕೊಡವರ ಆಚಾರ-ವಿಚಾರ, ಭಾಷೆ, ಹಬ್ಬಗಳೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ, ಕಲಿಸುವ ಅನಿವಾರ್ಯ ಇದೆ. ಇದರಲ್ಲಿ ತಂದೆ, ತಾಯಿ ಪಾತ್ರ ಬಹಳ ಮುಖ್ಯ’ ಎಂದು ನಿವೃತ್ತ ಪ್ರಾಧ್ಯಾಪಕಿ ಕಾಂಡಂಡ ಉಷಾ ಜೋಯಪ್ಪ ಹೇಳಿದರು.

ನಾಪೋಕ್ಲು ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ನಡುವೆ ನಾಪೋಕ್ಲು ಕೊಡವ ಸಮಾಜದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಊರೋರ್ಮೆ - ಸಂಸ್ಕೃತಿರ ಆಯಿಮೆ’ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಡವ ತಿಂಡಿ, ತಿನಿಸುಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಇಂದು ಅವಿಭಕ್ತ ಕುಟುಂಬ ಪದ್ಧತಿ ಹೆಚ್ಚಿರುವುದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಕೊಡವ ಸಮಾಜಗಳು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳು ಅದರಲ್ಲಿ ಭಾಗವಹಿಸುವಂತೆ ಮಾಡಬೇಕು’ ಎಂದು ಹೇಳಿದರು.

‘ಇತ್ತೀಚೆಗೆ ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿವೆ, ಇದನ್ನು ತಡೆಗಟ್ಟಲು ಕೊಡವ ಸಮಾಜ ‘ತಂದು ಬೆಂದು’ ಕಾರ್ಯಕ್ರಮ ಏರ್ಪಡಿಸಬೇಕು’ ಎಂದು ಸಲಹೆ ನೀಡಿದರು.

‘ಆಟ್ ಪಾಟ್ ಪಡಿಪು’ ಮಾತ್ರ ನಮ್ಮ ಸಂಸ್ಕೃತಿಯಲ್ಲ. ಮನೆಯಲ್ಲಿರುವ ವಯಸ್ಕರನ್ನು ಹಿರಿಯರನ್ನೂ ಪ್ರೀತಿಯಿಂದ ನೋಡಿಕೊಳ್ಳುವುದು ಕೂಡ ನಮ್ಮ ಸಂಸ್ಕೃತಿ’ ಎಂದರು.

ಭಗವತಿ ದೇವಾಲಯದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕುಲ್ಲೇಟಿರ ಎಸ್.ಮಾದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಇದು ಎರಡನೇ ವರ್ಷದ ಸಾಂಸ್ಕೃತಿಕ ಹಬ್ಬ. ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮ ಕೋವಿಡ್ –19 ನಿಂದಾಗಿ ತಡವಾಗಿ ನಡೆಯುತ್ತಿದೆ. ಪೈಪೋಟಿಯಲ್ಲಿ ಸೋಲು, ಗೆಲುವು ಸಹಜ. ಎಲ್ಲಾ ತಂಡದವರು ಇದನ್ನು ಸಮಾನವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ನಾಪೋಕ್ಲು ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಕೊಂಡಿರ ಕೆ.ನಾಣಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ ನೀಡಿದರು.

‘ಕೊಡವ ಪಾಟ್’, ‘ಬಾಳೋ ಪಾಟ್’, ‘ತಾಲಿಪಾಟ್’, ‘ಸಂಬಂಧ ಅಡಿಕುವೊ’, ‘ಕಪ್ಪೆಯಾಟ್’ ಸ್ಪರ್ಧೆಗಳನ್ನು ನಡೆಸಲಾಯಿತು.

ಭಾನುವಾರ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಪರಿಯಕಳಿ, ವಾಲಗತ್ತಾಟ್ ಸ್ಪರ್ಧೆಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ನರಿಯಂದಡ ಹಾಗೂ ಪಾರಾಣೆ ಗ್ರಾಮ ಪಂಚಾಯಿತಿ ಯಲ್ಲಿ ಆಯ್ಕೆಯಾದ ಕೊಡವ ಸಮಾಜದ ಸದಸ್ಯರನ್ನು ಸನ್ಮಾನಿಸಲಾಯಿತು. ನಾಪೋಕ್ಲು ಕೊಡವ ಸಮಾಜದ ನಿರ್ದೇಶಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT