ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಇರಲಿ’

ಮಕ್ಕಳ ವಿಜ್ಞಾನ ಹಬ್ಬ ಪ್ರಯುಕ್ತ ಜಿಲ್ಲಾಮಟ್ಟದ ಸಂಪನ್ಮೂಲ ತರಬೇತಿ ಕಾರ್ಯಾಗಾರ
Last Updated 19 ನವೆಂಬರ್ 2019, 13:19 IST
ಅಕ್ಷರ ಗಾತ್ರ

ಮಡಿಕೇರಿ: ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಆಭಿಯಾನ, ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ಆವಿಷ್ಕಾರ ಯೋಜನೆಯ ಅಡಿ ಮಕ್ಕಳ ವಿಜ್ಞಾನ ಹಬ್ಬ ಪ್ರಯುಕ್ತ ಜಿಲ್ಲಾಮಟ್ಟದ ಸಂಪನ್ಮೂಲ ತರಬೇತಿ ಕಾರ್ಯಾಗಾರ ಮಂಗಳವಾರ ನಡೆಯಿತು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಮಾತನಾಡಿ, ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಮೂಲಕ ಅವರಲ್ಲಿ ಸಂತಸದ ಕಲಿಕೆ ಹಾಗೂ ಕುತೂಹಲ ಕೆರಳಿಸುವ ಚಟುವಟಿಕೆ ಆಧರಿತ ಕಲಿಕೆಗೆ ಶಿಕ್ಷಕರು ಪ್ರೇರೇಪಣೆ ನೀಡಬೇಕು’ ಎಂದರು.

ಪ್ರತಿ ಮಗು ಕೂಡ ಅನನ್ಯವಾದ ಪ್ರತಿಭೆ ಮತ್ತು ಚೈತನ್ಯ ಹೊಂದಿದೆ. ಎಲ್ಲ ಮಕ್ಕಳು ಕಲಿಯುವ ಮತ್ತು ಎಲ್ಲರೂ ಬೆಳೆಯುವ ಉದ್ದೇಶದಿಂದ ಮಕ್ಕಳ ಕಲಿಕೆಗೆ ಪೂರಕವಾದ ಚಟುವಟಿಕೆಗಳ ಮೂಲಕ ಮಕ್ಕಳು ತಮ್ಮ ತಮ್ಮಲ್ಲಿ ಚರ್ಚೆ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಕಂಡುಕೊಳ್ಳಲು ಈ ಹಬ್ಬ ಸಹಕಾರಿ. ಮಕ್ಕಳ ಪ್ರಶ್ನೆಯು ಪ್ರಜ್ಞೆಯಾಗಿ ಬೆಳೆದು ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಮಚ್ಚಾಡೋ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ಮಕ್ಕಳ ವಿಜ್ಞಾನ ಹಬ್ಬವು ಮಕ್ಕಳಲ್ಲಿ ಸೃಜನಶೀಲ ಮತ್ತು ಸಂತಸದ ಕಲಿಕೆಗೆ ಪೂರಕವಾಗಿ ಸರ್ಕಾರಿ ಶಾಲೆಗಳನ್ನು ಆಕರ್ಷಿಸುವ ಮೂಲಕ ಜನ ಸಮುದಾಯ ಬಳಸಿಕೊಂಡು ಶಿಕ್ಷಣ ಬಲಪಡಿಸಲು ಸಹಕಾರಿಯಾಗಿದೆ ಎಂದರು.

ಜಿಲ್ಲೆಯ ಆಯ್ದ 10 ಕ್ಲಸ್ಟರ್‌ಗಳಲ್ಲಿ ಈ ಹಬ್ಬವನ್ನು ಜನ ಸಮುದಾಯದ ಸಹಕಾರದೊಂದಿಗೆ ಸಂಘಟಿಸಬೇಕಿದೆ ಎಂದು ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕಾಶಿನಾಥ್ ಹೇಳಿದರು.

ತರಬೇತಿಯು ರಾಜ್ಯ ಸಂಪನ್ಮೂಲ ವ್ಯಕ್ತಿ ಉದಯ್ ಗಾಂವ್ಕರ್, ಈ ಹಬ್ಬವು ವಿನೂತನ ಮಾದರಿ ಮತ್ತು ನಾವೀನ್ಯತೆ ಮೂಲಕ ಮಕ್ಕಳ ಕಲಿಕೆಗೆ ಪ್ರೇರಣೆ ನೀಡುತ್ತದೆ ಎಂದರು.

ಕಲಾವಿದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಆರ್.ಸತೀಶ್ ಅವರು ರಚಿಸಿದ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮಕ್ಕಳ ವಿಜ್ಞಾನ ಹಬ್ಬಕ್ಕೆ ಡಿಡಿಪಿಐ ಮಚ್ಚಾಡೋ ಅವರು ಚಾಲನೆ ನೀಡಿದರು.

ಇದೇ ವೇಳೆ ಮಕ್ಕಳ ವಿಜ್ಞಾನ ಮೇಳದ ಕೈಪಿಡಿ ಪುಸ್ತಕವನ್ನು ಪಿ.ಎಸ್.ಮಚ್ಚಾಡೋ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಎಂ.ಜೆ.ಗಂಗಮ್ಮ, ವಿಷಯ ಪರಿವೀಕ್ಷಕ ವೀರಪ್ಪ ಮಡಿವಾಳ ಮಾತನಾಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ಬಿಆರ್‌ಸಿಗಳಾದ ಎಚ್.ಜೆ.ವನಜಾಕ್ಷಿ, ಪುಟ್ಟರಂಗನಾಥ್, ಸಿ.ಆರ್.ಶಶಿಧರ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷರಾದ ಎಸ್.ಜೆ.ವೆಂಕಟೇಶ್, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಸಂಪನ್ಮೂಲ ವ್ಯಕ್ತಿ ಡಿ.ಚಂದನ, ಬಿ.ಕೆ.ಲಲಿತ, ಆರ್.ದಿವಾಕರ್, ಆರ್.ಸಮತಾ, ಶ್ರೀನಿವಾಸ್ ರಾವ್, ಜಯಶ್ರೀ ಇದ್ದರು.

ಜಿಲ್ಲಾ ಸಂಯೋಜಕಿ ಎಂ.ಜೆ.ಗಂಗಮ್ಮ ಸ್ವಾಗತಿಸಿದರು. ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂದು ವಂದಿಸಿದರು. ಸಂಪನ್ಮೂಲ ವ್ಯಕ್ತಿ ಡಿ.ಚಂದನ್ ಅವರು ನಿರೂಪಿಸಿದರು. ಶಿಕ್ಷಕರಾದ ಜಯಶ್ರೀ, ಶ್ರೀನಿವಾಸ್ ರಾವ್, ಚಂದನ ಮಕ್ಕಳ ಹಾಡು ಹಾಡಿದರು.

ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ವಿಜ್ಞಾನ ಟೋಪಿ(ಮಕ್ಕಳ ಕಿರೀಟ) ಧರಿಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT