ಮಂಗಳವಾರ, ಆಗಸ್ಟ್ 3, 2021
21 °C
ಶಾಲೆಯ ಗೋಡೆ ಮೇಲೆ ರಸಾಯನಶಾಸ್ತ್ರ ಆವರ್ತ ಕೋಷ್ಟಕ ಬರೆದ ವಿಜ್ಞಾನ ಶಿಕ್ಷಕ

ಶಾಲೆಯ ಗೋಡೆ ಮೇಲೆ ರಸಾಯನಶಾಸ್ತ್ರ ಆವರ್ತ ಕೋಷ್ಟಕ ಬರೆದ ವಿಜ್ಞಾನ ಶಿಕ್ಷಕ

ಜೆ.ಸೋಮಣ್ಣ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧಿಸುವುದು ಸ್ವಲ್ಪ ಕಷ್ಟದ ಕಲಸ. ಅದರಲ್ಲೂ ರಸಾಯನಶಾಸ್ತ್ರ ಎಂದರೆ ಇನ್ನೂ ಕಷ್ಟಕರ. ಅದರಲ್ಲಿ ಬರುವ ಸಂಕೇತಗಳು ಮತ್ತು ಸೂತ್ರಗಳನ್ನು ಕಲಿಯಲು 10ನೇ ತರಗತಿ ವಿದ್ಯಾರ್ಥಿಗಳೂ ತಿಣುಕಾಡುತ್ತಾರೆ. ಇಂತಹ ವಿಜ್ಞಾನವನ್ನು ಸುಲಭವಾಗಿ ಅರ್ಥಮಾಡಿಸಲು ಇಲ್ಲಿನ ಅನುದಾನಿತ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಅವರು ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ

ರಾಜ್ಯ ಸಂಪನ್ಮೂಲ ಶಿಕ್ಷಕರಾದ ಡಿ.ಕೃಷ್ಣಚೈತನ್ಯ ಶಾಲೆ ಕೊಠಡಿಯ ಗೋಡೆ ಹೊರಭಾಗದಲ್ಲಿ 13 ಅಡಿ ಅಗಲ ಮತ್ತು 8 ಅಡಿ ಎತ್ತರದ ಸುತ್ತಳತೆಯಲ್ಲಿ ಆಧುನಿಕ ಆವರ್ತ ಕೋಷ್ಟಕವನ್ನು ರಚಿಸಿದ್ದಾರೆ. ಇದಕ್ಕಾಗಿ ಅವರು ಆಕ್ರಿಲಿಕ್ ಮತ್ತು ಡಿಸ್ಟಂಪರ್ ಬಣ್ಣಗಳನ್ನು ಬಳಸಿದ್ದಾರೆ.

ಪ್ರಕೃತಿಯಲ್ಲಿ ನೈಸರ್ಗಿಕವಾಗಿ ದೊರೆಯುವ 92 ಧಾತುಗಳು ಮತ್ತು ಕೃತಕವಾಗಿ ತಯಾರಿಸಿದ 26 ಧಾತುಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಪ್ರತಿಯೊಂದು ಚೌಕದಲ್ಲಿಯೂ ಆ ಧಾತುಗಳ ಕರಗುವ ಬಿಂದು, ಕುದಿಬಿಂದುಗಳು, ಪರಮಾಣು ಗಾತ್ರ, ಎಲೆಕ್ಟ್ರಾನ್ ವಿನ್ಯಾಸಗಳು ಮೊದಲಾದವುಗಳ ಬಗ್ಗೆ ಮಾಹಿತಿಯಿದೆ. ಇದರ ಜತೆಗೆ ಪ್ರತಿ ತರಗತಿ ಕೊಠಡಿಯ ಹೊರಭಾಗದ ಗೋಡೆಯಲ್ಲಿ ವರ್ಲಿ ಕಲೆಯ ರೇಖಾಚಿತ್ರವನ್ನೂ ಬಿಡಿಸಿದ್ದಾರೆ.

ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಇವರು, ಶಾಲೆಯ ಖಾಲಿ ಜಾಗದಲ್ಲಿ ನೂರಾರು ಗಿಡಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಸಂಪಿಗೆ, ಗುಲ್‌ಮೊಹರ್ ಮೊದಲಾದ ಮರಗಳು ಹೂ ಬಿಟ್ಟು ಕಂಗೊಳಿಸುತ್ತಿವೆ.

‘ರಸಾಯನಶಾಸ್ತ್ರದ ಕೆಲವು ಘಟಕಗಳನ್ನು ಬೋಧಿಸುವ ಸಂದರ್ಭ ದಲ್ಲಿ ಮಾತ್ರ ಆವರ್ತ ಕೋಷ್ಟಕ ವಿದ್ಯಾರ್ಥಿಗಳಿಗೆ ಕಣ್ಣಿಗೆ ಬೀಳುತ್ತಿತ್ತು. ಇದರಿಂದ ಅವರಿಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಕಷ್ಟವಾಗುತ್ತಿತ್ತು. ಪ್ರತಿ ದಿನ ಗೋಡೆಯ ಮೇಲಿನ ಚಿತ್ರ ಕಣ್ಣಿಗೆ ಬೀಳುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ’ ಎಂದು ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು