ಭಾನುವಾರ, ಜನವರಿ 26, 2020
22 °C
ಕೊಡಗಿಗೆ ಲಾವಂಚದ ಅಗತ್ಯತೆ: ಯುವವಿಜ್ಞಾನಿಗಳ ಪ್ರತಿಪಾದನೆ

ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಪ್ರಕೃತ್ತಿ ವಿಕೋಪದಿಂದ ನಲುಗಿದ್ದ ಕೊಡಗು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಲಾವಂಚ ಹುಲ್ಲು ಸಸಿ ನೆಡುವಿಕೆ ಮೂಲಕ ಭವಿಷ್ಯದಲ್ಲಿ ಬರೆಕುಸಿತದಂಥ ದುರಂತವನ್ನು ತಡೆಗಟ್ಟಬಹುದು’ ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಯುವ ವಿಜ್ಞಾನಿಗಳು ತಮ್ಮ ಪ್ರಬಂಧದ ಮೂಲಕ ಪ್ರಸ್ತುತ ಪಡಿಸಿದ್ದು, ಅವರ ಸಂಶೋಧನೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9ನೇ ತರಗತಿ ವಿದ್ಯಾಥಿ೯ಗಳಾದ ಅಭಯ್ ಮತ್ತು ಆಶಯ್ ಅವರು ಇತ್ತೀಚಿಗೆ ಜರುಗಿದ ಜಿಲ್ಲಾಮಟ್ಟದ ಯುವವಿಜ್ಞಾನಿಗಳ ಸಮಾವೇಶದಲ್ಲಿ ಲಾವಂಚ ಹುಲ್ಲಿನ ಮಹತ್ವ ಮತ್ತು ಕೊಡಗಿನಲ್ಲಿ ಅದರ ಉಪಯುಕ್ತತೆ ಬಗ್ಗೆ ಪ್ರಾತಕ್ಷಿಕೆ ಮೂಲಕ ತಮ್ಮ ಸಂಶೋಧನಾ ವರದಿಯನ್ನು ಮಂಡಿಸಿದ್ದರು.

ಜಿಲ್ಲೆಯ ಹಲವು ಕಾಫಿ ಬೆಳೆಗಾರರು, ವಿಜ್ಞಾನಿಗಳು, ಸಂಶೋಧಕರನ್ನು ಸಂದರ್ಶಿಸಿ ತಯಾರಿಸಿದ ಸಂಶೋಧನಾ ವರದಿಯಲ್ಲಿ ಈ ಯುವ ವಿಜ್ಞಾನಿಗಳು ಲಾವಂಚದ ಮಹತ್ವ ಮತ್ತು ಕೊಡಗಿನಲ್ಲಿ ಪ್ರಸ್ತುತ ಲಾವಂಚದ ಉಪಯುಕ್ತತೆಯ ಬಗ್ಗೆ ಬೆಳಕು ಚೆಲ್ಲಿದ್ದರು.

ಜವಾಬ್ದಾರಿಯುತ ಕೊಡಗಿನ ನಾಗರಿಕರು ತಮ್ಮ ವ್ಯಾಪ್ತಿಯ ಪ್ರಾಕೃತ್ತಿಕ ಸಂಪತ್ತನ್ನು ರಕ್ಷಿಸುವುದು ಕರ್ತವ್ಯ ಕೂಡ ಆಗಿದೆ. ಈ ನಿಟ್ಟಿನಲ್ಲಿ ಸುಲಭ ಪರಿಹಾರೋಪಾಯವಾಗಿ ಕಂಡುಬರುತ್ತಿರುವುದೇ ಲಾವಂಚ ಹುಲ್ಲು ನಾಟಿ ಎಂದು ಅಭಿಪ್ರಾಯಪಟ್ಟಿರುವ ಯುವವಿಜ್ಞಾನಿಗಳು, ಕೊಡಗಿನ ಬೆಟ್ಟ ಗುಡ್ಡಗಳಲ್ಲಿ ಲಾವಂಚ ಹುಲ್ಲನ್ನು ನೆಡುವುದರಿಂದ ಲಾವಂಚ ಹುಲ್ಲಿನ ಮೂಲಕ ಮಣ್ಣಿನ ಕುಸಿತ ತಡೆಯಲು ಸಾಧ್ವವಿದೆ. ಅಂತೆಯೇ ಲಾವಂಚಕ್ಕೆ ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಮಣ್ಣಿನ ಫಲವತ್ತತೆಗೂ ಕಾರಣವಾಗಬಲ್ಲದು. ಲಾವಂಚ ಹುಲ್ಲಿಗೆ ಮಣ್ಣನ್ನು ಭದ್ರವಾಗಿ ತಡೆಹಿಡಿಯಬಲ್ಲ ಶಕ್ತಿಯಿದೆ. ಇದರಿಂದ ಲಾವಂಚ ಹುಲ್ಲು ಇದ್ದಲ್ಲಿ ಖಂಡಿತವಾಗಿಯೂ ಬರೆ ಕುಸಿತ ಸಂಭವಿಸುವುದಿಲ್ಲ ಎಂದು ಅನೇಕ ಉದಾಹರಣೆಗಳು ತಿಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪನ್ಯಾಸಕಿ ಸುಮಿತ್ರಾ ಮಾಗ೯ದಶ೯ನದಲ್ಲಿ ಅಭಯ್ ಮತ್ತು ಆಶಯ್ ಮಂಡಿಸಿದ ಸಂಶೋಧನಾ ವರದಿಯು ಕೊಡಗು ಜಿಲ್ಲಾಮಟ್ಟದಿಂದ ಮಂಡ್ಯದಲ್ಲಿ ಇದೇ 16ರಂದು ಆಯೋಜಿತ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದೆ.

ಅಭಯ್ ಮತ್ತು ಆಶಯ್ ಮಡಿಕೇರಿಯ ಜಯನಗರ ನಿವಾಸಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್ ಮತ್ತು ರಾಧಿಕಾ ವಿಶ್ವನಾಥ್ ದಂಪತಿ ಪುತ್ರರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು