ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ 264 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಹಾಗೂ 50 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ಇಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ‘ಪೋಷಣ ಅಭಿಯಾನ ಮಾಸಾಚರಣೆ’ಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಗುಣಮಟ್ಟದ ಆಹಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಜೀವನ ಶೈಲಿಯಲ್ಲಿನ ಬದಲಾವಣೆ, ಗುಣಮಟ್ಟದ ಆಹಾರ ಪಡೆಯದಿರುವುದು ಸೇರಿಂತೆ ಮತ್ತಿತರ ಕಾರಣಗಳು ಇದಕ್ಕಿವೆ’ ಎಂದು ವಿಶ್ಲೇಷಿಸಿದರು.
ಸರ್ಕಾರದಿಂದ ಪ್ರತೀ 3 ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಸಮತೋಲಿತ ಆಹಾರವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಹೆಚ್ಚು ಹಸಿರು ಎಲೆಯುಕ್ತ ತರಕಾರಿ ಮತ್ತು ಹಣ್ಣುಗಳು, ಬೇಳೆ ಕಾಳುಗಳು, ಏಕದಳ ಮತ್ತು ದ್ವಿದಳ ಧಾನ್ಯಗಳು, ಶೇಂಗಾ ಹಾಗೂ ವಿಶೇಷವಾಗಿ ಸಿರಿಧಾನ್ಯ ಬಳಸಬೇಕು ಎಂದು ಅವರು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್, ಡಾ.ನರಸಿಂಹ ರೈ, ನರ್ಸಿಂಗ್ ಕಾಲೇಜಿನ ಮಂಜುಳಾ, ಶ್ರೂಶ್ರೂಷಕ ಅಧೀಕ್ಷಕಿ ವೀಣಾ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಭಾಗವಹಿಸಿದ್ದರು.