ಶನಿವಾರಸಂತೆ: ತರಗತಿಯೊಳಗೆ ಕ್ರಿಯಾತ್ಮಕ ಗ್ರಂಥಾಲಯ

7
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಶನಿವಾರಸಂತೆ: ತರಗತಿಯೊಳಗೆ ಕ್ರಿಯಾತ್ಮಕ ಗ್ರಂಥಾಲಯ

Published:
Updated:
Deccan Herald

ಶನಿವಾರಸಂತೆ: ಸಮೀಪದ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿಶೇಷ ಎನ್ನಿಸುವುದು ತರಗತಿ ಕೋಣೆಯೊಳಗಿನ ಕ್ರಿಯಾತ್ಮಕ ಗ್ರಂಥಾಲಯದಿಂದ.

ಮಕ್ಕಳಲ್ಲಿ ಎಳೆ ವಯಸ್ಸಿನಲ್ಲೇ ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನದಲ್ಲಿರುವವರು ಶಿಕ್ಷಕ ಸತೀಶ್. ತರಗತಿ ಕೋಣೆಯ ಗೋಡೆ ಮೇಲೆ 9 ಚದರ ಮೀಟರ್ ವಿಸ್ತೀರ್ಣದಲ್ಲಿ ವಿದ್ಯಾರ್ಥಿಗಳ ಕೈಗೆಟಕುವಂತೆ 300ಕ್ಕೂ ಅಧಿಕ ಪುಸ್ತಕಗಳನ್ನು ಓರಣವಾಗಿ ಜೋಡಿಸಿ ಪ್ರತಿ ವಿದ್ಯಾರ್ಥಿ ಪುಸ್ತಕ ತೆಗೆದು ಓದುವಂತೆ ಮಾಡಿದ್ದಾರೆ. ಪುಸ್ತಕಗಳನ್ನು ಇರಿಸಲು ಬಟ್ಟೆಯನ್ನು ಬಳಸಿ ಪ್ಯಾಕೆಟ್‌ಗಳನ್ನು ಹೊಲಿಯಲಾಗಿದೆ. ಪ್ರತಿ ಪ್ಯಾಕೆಟ್‌ನಲ್ಲಿ 4–5 ಪುಸ್ತಕಗಳನ್ನು ಇಡಬಹುದಾಗಿದ್ದು, ಪುಸ್ತಕಗಳೂ ಸುರಕ್ಷಿತವಾಗಿರುತ್ತವೆ.

ಶಾಲೆಯ ಪ್ರತಿ ತರಗತಿ ಕೋಣೆಯೊಳಗೆ ರೀಡಿಂಗ್‌ ಕಾರ್ನರ್ ಇರಬೇಕೆಂದು ಶಿಕ್ಷಣ ಇಲಾಖೆಯ ಆದೇಶವಿದೆ. ಆದರೆ, ರೀಡಿಂಗ್ ಕಾರ್ನರ್ ನಿರ್ಮಿಸಿ ಪುಸ್ತಕಗಳನ್ನು ಗ್ರಂಥಾಲಯ ಕೊಠಡಿಯಿಂದ ತಂದು ಅಲ್ಲಿ ಓದಬೇಕಾದರೆ ಸಮಯ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಅತ್ತಿತ್ತ ಅಲೆದಾಡುವುದರಲ್ಲೇ ಸಮಯ ಕಳೆಯುತ್ತಾರೆ. ಇದಕ್ಕಾಗಿ ಪ್ರತಿ ತರಗತಿಯಲ್ಲೂ ಆಯಾ ಮಕ್ಕಳ ಮನೋ ಮಟ್ಟಕ್ಕೆ ಅನುಗುಣವಾದ ಪುಸ್ತಕಗಳನ್ನು ಒದಗಿಸಲು ಅತಿ ಕಡಿಮೆ ವೆಚ್ಚದಲ್ಲಿ ಈ ‘ತರಗತಿಯೊಳಗೊಂದು ಗ್ರಂಥಾಲಯ’ವನ್ನು ರೂಪಿಸಿದ್ದಾರೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಪುಸ್ತಕ ಓದುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದು, ವಿಷಯ ಜ್ಞಾನ ಹೆಚ್ಚುವಲ್ಲೂ ಸಹಕಾರಿಯಾಗಿದೆ.

ಗ್ರಂಥಾಲಯದಲ್ಲಿ ಪಂಚತಂತ್ರ ಕಥೆಗಳು, ಪೌರಾಣಿಕ ಮತ್ತು ಧಾರ್ಮಿಕ ಕಥೆಗಳು, ವಿಜ್ಞಾನ, ಸಾಹಿತ್ಯ, ಕಲೆ, ಸಂಶೋಧನೆ, ವ್ಯಕ್ತಿ ಚರಿತ್ರೆಯ ಪುಸ್ತಕಗಳನ್ನು ಹಾಗೂ ಮಕ್ಕಳಲ್ಲಿ ಆಂಗ್ಲ ಭಾಷೆ ಕಲಿಕೆಗೆ ಸಹಾಯಕವಾಗುವ ಆಂಗ್ಲ ಭಾಷೆ ಚಿತ್ರಕಥೆ ಪುಸ್ತಕಗಳನ್ನು ಇರಿಸಲಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಒಂದೇ ಫಲಕದಲ್ಲಿರಿಸಿ ಓದುವಿಕೆಗೆ ಸಹಕಾರಿಯಾಗುವಂತೆ ಮಾಡಲಾಗಿದೆ.

ಮಕ್ಕಳೂ ಖುಷಿಯಿಂದ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕ ಸಿ.ಎಸ್.ಸತೀಶ್ ಅವರ ಸಾಧನೆ ಹಾಗೂ ಮುಖ್ಯಶಿಕ್ಷಕ ಮಂಜುನಾಥ್ ಅವರ ಸಹಕಾರ ಸಾರ್ಥಕವಾಗಿದೆ.

–ಶ.ಗ.ನಯನತಾರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !