ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಡನ್ ಡೆತ್‌’ನಲ್ಲಿ ಗೆದ್ದ ಶಿವಾಜಿ ತಂಡ

ಕೋಚ್ ಅನುಪಮ ಸ್ಮರಣಾರ್ಥ ಹಾಕಿ ಟೂರ್ನಿ ಮುಕ್ತಾಯ; ಬೇಗೂರು ಇವೈಸಿ ರನ್ನರ್‌ ಅಪ್
Last Updated 5 ಡಿಸೆಂಬರ್ 2022, 12:42 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಶಿವಾಜಿ ಸ್ಪೋಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೋಚ್ ಅನುಪಮ ಸ್ಮರಣಾರ್ಥ ಆಯೋಜಿಸಿದ್ದ ಮುಕ್ತ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾನುವಾರ ಬೇಗೂರು ಇವೈಸಿ ತಂಡದ ವಿರುದ್ಧ ನಾಪೋಕ್ಲು ಶಿವಾಜಿ ತಂಡವು ಜಯಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು ಟ್ರೋಫಿ ಎತ್ತಿ ಹಿಡಿಯಿತು.

ವಿಜೇತ ಶಿವಾಜಿ ತಂಡಕ್ಕೆ ₹ 50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಬೇಗೂರು ಇವೈಸಿ ತಂಡ ₹ 30 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ಬೇಗೂರು ತಂಡದ ಪರ ಮಾಪಣಮಾಡ ಬೋಪಣ್ಣ ಮೊದಲ ಗೋಲು ದಾಖಲಿಸುವುದರ ಮೂಲಕ ತಂಡದ ಮುನ್ನಡೆಗೆ ಕಾರಣರಾದರು. ಆದರೆ, ಅಲ್ಪ ಸಮಯದಲ್ಲಿಯೇ ಶಿವಾಜಿ ತಂಡದ ಪರ ಎಸ್.ಗೇಲ್ ಗೋಲು ದಾಖಲಿಸಿ ಸಮಬಲ ಸಾಧಿಸಿದರು. ನಂತರ ನಡೆದ ಜಿದ್ದಾಜಿದ್ದಿನಲ್ಲಿ ಎರಡೂ ತಂಡಗಳು ಗೋಲು ದಾಖಲಿಸಲು ಸಾಧ್ಯವಾಗದ ಕಾರಣ ಪೆನಾಲ್ಟಿ ಶೂಟ್ಔಟ್ ನೀಡಲಾಯಿತು.

ಪೆನಾಲ್ಟಿ ಶೂಟ್ಔಟ್‌ನಲ್ಲಿ ಶಿವಾಜಿ ತಂಡದ ಆಟಗಾರರಾದ
ಪೂಣಚ್ಚ ಎಂ.ಜಿ., ಬೊಳ್ಳಚ್ಚನ ಮೋನಿ ಹಾಗೂ ರಮೇಶ್ ತಲಾ ಒಂದು ಗೋಲು ಗಳಿಸಿದರು. ಬೇಗೂರು ತಂಡದ ಆಟಗಾರರಾದ
ಬೋಪಣ್ಣ, ಲಿಖಿತ್ ಹಾಗೂ ಸಮಂತ್ ಒಂದೊಂದು ಗೋಲು ಗಳಿಸಿದರು. ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಸಡನ್ ಡೆತ್ ಕ್ರಮ ಅನುಸರಿಸಲಾಯಿತು. ಆ ಸೆಣಸಾಟದಲ್ಲಿ ಶಿವಾಜಿ ತಂಡದ ಪರ ಆಟಗಾರರಾದ ಪೂಣಚ್ಚ, ರಮೇಶ್ ಹಾಗೂ
ಎಸ್.ಗೇಲ್ ಒಂದೊಂದು ಗೋಲು ದಾಖಲಿಸಿದರು. ಬೇಗೂರು ತಂಡದ ಆಟಗಾರರಾದ ಲಿಖಿತ್ ಮತ್ತು ಮಂಜು ಒಂದೊಂದು ಗೋಲು ದಾಖಲಿಸಿದರೆ, ಬೋಪಣ್ಣ ಗೋಲು ಗಳಿಸಲು ವಿಫಲರಾದರು. ಒಂದು ಗೋಲು ಅಂತರದಿಂದ ಶಿವಾಜಿ ತಂಡ ವಿಜಯಪತಾಕೆ ಹಾರಿಸಿತು.

ತೃತೀಯ ಸ್ಥಾನವನ್ನು ಬೇಂಗ್ ನಾಡ್ ಫೋನಿಕ್ಸ್ ತಂಡ ಹಾಗೂ ನಾಲ್ಕನೇ ಸ್ಥಾನವನ್ನು ಡಾಲ್ಫಿನ್ಸ್ ತಂಡವು ಪಡೆದವು.

‘ಕ್ರೀಡಾಪಟುಗಳಿಗೆ ಸ್ಫೂರ್ತಿ’

ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಂಡಿರ ಜಯದೇವಯ್ಯ ಉದ್ಘಾಟಿಸಿದರು. ಮಾಜಿ ಒಲಿಂಪಿಯನ್, ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ.ಸುಬ್ಬಯ್ಯ ಮಾತನಾಡಿ, ‘ಕೋಚ್ ಅನುಪಮ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಅವರ ಸಾಧನೆ ಅಪಾರ. ಅವರ ಗೌರವಾರ್ಥ ಇಂತಹ ಕ್ರೀಡಾಕೂಟಗಳನ್ನು ನಡೆಸುವುದರಿಂದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದಂತಾಗುತ್ತದೆ’ ಎಂದರು.

ಅನುಪಮ ಅವರ ಸಹೋದರ ಪುಚ್ಚಿಮಂಡ ಬಬ್ಲೂ ಅಪ್ಪಯ್ಯ ಮಾತನಾಡಿ, ‘ಅನುಪಮ ಶ್ರಮಪಟ್ಟು ಸಾಧನೆ ಮಾಡಿ ಉನ್ನತ ಸ್ಥಾನ ತಲುಪಿದರು. ಅವರ ಸಾಧನೆಯನ್ನು ಸಾರ್ವಜನಿಕವಾಗಿ ತಿಳಿಸುವ ಕಾರ್ಯವನ್ನು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಮಾಡುತ್ತಿದೆ’ ಎಂದು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ ವಹಿಸಿದ್ದರು.

ಸ್ಥಳೀಯ ಕಾಫಿ ಬೆಳೆಗಾರರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಭಾರತ ಥ್ರೋಬಾಲ್ ತಂಡದ ಮಾಜಿ ನಾಯಕಿ ಬಿಪ್ಪಂಡ ರೀಮಾ ಅಪ್ಪಚ್ಚು, ಪುಚ್ಚಿಮಂಡ ಕಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT